ನವದೆಹಲಿ[ಏ.27]: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲು ಹೆಚ್ಚೂಕಡಿಮೆ ಒಂದು ತಿಂಗಳಷ್ಟುಸಮಯ ಇರುವಾಗಲೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚೀನಾ ಜತೆಗೆ ಎರಡನೇ ಸುತ್ತಿನ ಅನೌಪಚಾರಿಕ ಮಾತುಕತೆಗೆ ತಯಾರಿ ಆರಂಭಿಸಿದೆ.

ಎನ್‌ಡಿಎ ಸರ್ಕಾರ 2ನೇ ಅವಧಿಗೆ ಆಯ್ಕೆಯಾಗುವ ಬಗ್ಗೆ ಅದಮ್ಯ ವಿಶ್ವಾಸ ಹೊಂದಿರುವ ಪ್ರಧಾನ ಮಂತ್ರಿ ಕಾರ್ಯಾಲಯ, ಮೋದಿ ಪುನರಾಯ್ಕೆಯಾದರೆ ಮೊದಲ 100 ದಿನಗಳಲ್ಲಿ ಕೈಗೊಳ್ಳಬೇಕಾದ ಕೆಲಸಗಳ ಪಟ್ಟಿಯನ್ನು ವಿವಿಧ ಇಲಾಖೆಗಳಿಂದ ಕೇಳಿತ್ತು. ಅದರ ಬೆನ್ನಲ್ಲೇ ಚೀನಾ ಜತೆ ಮಾತುಕತೆಗೂ ಸರ್ಕಾರ ಸಿದ್ಧತೆ ನಡೆಸಿರುವುದು ಗೊತ್ತಾಗಿದೆ.

ಡೋಕ್ಲಾಂ ಬಿಕ್ಕಟ್ಟಿನ ಬಳಿಕ 2018ರ ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್‌ ನಡುವೆ ಚೀನಾದ ವುಹಾನ್‌ನಲ್ಲಿ ಮಾತುಕತೆ ನಡೆದಿತ್ತು. ಉನ್ನತ ಸ್ತರದಲ್ಲಿ ನಾಯಕರ ನಡುವೆ ಉತ್ತಮ ಬಾಂಧವ್ಯವಿದೆ. ಅದನ್ನು ತಳಮಟ್ಟಕ್ಕೂ ವಿಸ್ತರಿಸಬೇಕಾಗಿದೆ ಎಂಬ ಅಭಿಪ್ರಾಯ ಆಗ ಹೊರಹೊಮ್ಮಿತ್ತು. ಆ ಮಾತುಕತೆಯ ಮುಂದುವರಿದ ಭಾಗವನ್ನು ನವೆಂಬರ್‌ನಲ್ಲಿ ಭಾರತದಲ್ಲಿ ನಡೆಸಲು ಕೇಂದ್ರ ಸರ್ಕಾರ ಸೂಚಿಸಿದೆ.

ಆದರೆ ವುಹಾನ್‌ ಮಾತುಕತೆಯಿಂದ ಸಿಕ್ಕಿರುವ ವೇಗ ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಅಕ್ಟೋಬರ್‌ನಲ್ಲೇ ಮಾತುಕತೆಗೆ ಚೀನಾ ಸಲಹೆ ಮಾಡಿದ್ದು, ಅದಕ್ಕೆ ಭಾರತ ಒಪ್ಪಿಕೊಂಡಿದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ.