ಡೆಹ್ರಾಡೂನ್‌(ಜೂ.30): ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಬಳಿಕ ಪ್ರಸಿದ್ಧ ಯಾತ್ರಾ ಸ್ಥಳ ಕೇದಾರನಾಥದಲ್ಲಿರುವ ಧ್ಯಾನ ಗುಹೆಗೆ ಭಾರಿ ಬೇಡಿಕೆ ಕಂಡುಬಂದಿದೆ. ಮೋದಿ ಅವರು ಇಲ್ಲಿ ಧ್ಯಾನ ಮಾಡಿ ಹೋದ ಬಳಿಕ ಒಂದು ದಿನವೂ ಗುಹೆ ಖಾಲಿ ಉಳಿದಿಲ್ಲ. ಅಲ್ಲದೆ ಜುಲೈನಾದ್ಯಂತ ಜನರು ಈ ಗುಹೆಯನ್ನು ಕಾದಿರಿಸಿದ್ದಾರೆ. ಆಗಸ್ಟ್‌, ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನ ವಿವಿಧ ದಿನಾಂಕಗಳಿಗೂ ಈಗಲೇ ಬುಕಿಂಗ್‌ ಮಾಡಿದ್ದಾರೆ.

ಮೋದಿ ಧ್ಯಾನ ಮಾಡಿದ ಗುಹೆಗೆ ಭಾರೀ ಬೇಡಿಕೆ: ಇನ್ನೂ 4 ಗುಹೆ ನಿರ್ಮಾಣ!

ಗಡವಾಲ್‌ ಮಂಡಲ ವಿಕಾಸ ನಿಗಮದ ವೆಬ್‌ಸೈಟ್‌ಗೆ ವಿವಿಧೆಡೆಯಿಂದ ಎಡತಾಕುತ್ತಿರುವ ಜನರು, ಗುಹೆಯನ್ನು ಬುಕಿಂಗ್‌ ಮಾಡುತ್ತಿದ್ದಾರೆ. ಮೋದಿ ಬಂದು ಹೋದ ಬಳಿಕ ಪ್ರತಿನಿತ್ಯವೂ ಗುಹೆಯಲ್ಲಿ ಜನ ತಂಗಿ ಧ್ಯಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡವಾಲ್‌ ಹಿಮಾಲಯದಲ್ಲಿ ಸಮುದ್ರಮಟ್ಟದಿಂದ 12500 ಅಡಿ ಎತ್ತರದ ಸುಂದರ ಪ್ರದೇಶದಲ್ಲಿ ಈ ಗುಹೆಯನ್ನು ನಿರ್ಮಾಣ ಮಾಡಲಾಗಿದೆ. ನಿರ್ಮಾಣ ಮಾಡಿ ಒಂದು ವರ್ಷವಾಗಿದ್ದರೂ ಜನರು ಭೇಟಿಗೆ ಆಸಕ್ತಿ ತೋರುತ್ತಿರಲಿಲ್ಲ. ಮೋದಿ ಭೇಟಿ ಬಳಿಕ ಏಕಾಏಕಿ ಬೇಡಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಮೂರು ಗುಹೆಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಒಂದರ ಕಾಮಗಾರಿ ಆರಂಭವಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾದಿಕಾರಿ ಮಂಗೇಶ್‌ ಗಿಲ್ಡಿಯಾಲ್‌ ಅವರು ತಿಳಿಸಿದ್ದಾರೆ.