ನವದೆಹಲಿ(ನ.25): ರೇಡಿಯೋ ಕಾರ್ಯಕ್ರಮ  ಮನ್ ಕಿ ಬಾತ್ ಸರ್ಕಾರದ ಧ್ವನಿಯಲ್ಲ, ಬದಲಿಗೆ ಅದು ಭಾರತದ ಧ್ವನಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಪ್ರಧಾನಿ ಅವರ ಜನಪ್ರಿಯಮಾಸಿಕ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮ ಇಂದಿಗೆ 50ನೇ ಕಂತುಗಳನ್ನು ಪೂರೈಸಿದ್ದು, ಈ ಹಿನ್ನಲೆಯಲ್ಲಿ ಮನ್ ಕಿ ಬಾತ್ ನ ಪ್ರಯಾಣವನ್ನು ಮೋದಿ ಮೆಲುಕು ಹಾಕಿದ್ದಾರೆ.

ಮನ್ ಕಿ ಬಾತ್ ಕೇವಲ ಸರ್ಕಾರದ ಧ್ವನಿಯಲ್ಲ. ಇದು ಪ್ರತಿಯೊಬ್ಬ ಭಾರತೀಯನ ಧ್ವನಿಯಾಗಿದೆ. ಭಾರತದ ಆಕಾಂಕ್ಷೆಗಳ ಬಗ್ಗೆ ಇದು ಮಾತನಾಡುತ್ತದೆ. ಮನ್ ಕಿ ಬಾತ್ ಬಗ್ಗೆ ಕೆಲ ಯುವ ಸ್ನೇಹಿತರು ಅಧ್ಯಯನ ನಡೆಸಲು ಯತ್ನಿಸಿದ್ದಾರೆ ಎಂದು ಮೋದಿ ಹೇಳಿದರು.

ಮನ್ ಕಿ ಬಾತ್ ನಲ್ಲಿ ತಾವು ಆಡಿದ್ದ ಮಾತುಗಳನ್ನು ವಿಮರ್ಶೆ ಮಾಡಲಾಗಿದ್ದು, ರಾಜಕೀಯವಲ್ಲದ ವಿಚಾರಗಳ ಬಗ್ಗೆಯೇ ಹೆಚ್ಚು ಮಾತನಾಡಿರುವುದನ್ನು ವರದಿಯಲ್ಲಿ ತಿಳಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಜನರ ಮನಸ್ಸನ್ನು ತಲುಪಲು ರೇಡಿಯೋ ಅತ್ಯುತ್ತಮವಾದದ್ದು ಎಂದು ನಾನು ತಿಳಿಸಿದ್ದೆ. ನಾನು ಪ್ರಧಾನಮಂತ್ರಿಯಾದಾಗ ದೇಶವನ್ನು ಒಗ್ಗೂಡಿಸಲು ವೇದಿಕೆ ಬೇಕಿತ್ತು. ಹೀಗಾಗಿ ಮನ್ ಕಿ ಬಾತ್ ಆರಂಭಿಸಿದ್ದಾಗಿ ಮೋದಿ ಹೇಳಿದರು.

ಮನ್ ಕಿ ಬಾತ್ ಕಾರ್ಯಕ್ರಮ ಕುರಿತಂತೆ ಆಲ್ ಇಂಡಿಯಾ ರೇಡಿಯಾ ಸಮೀಕ್ಷೆ ನಡೆಸಿದ್ದು, ಕಾರ್ಯಕ್ರಮವನ್ನು ಪ್ರತಿನಿತ್ಯ ಶೇ.70 ರಷ್ಟು ಕೇಳುತ್ತಿರುವುದು ತಿಳಿದುಬಂದಿದೆ. ಟಿವಿ. ಎಫ್ಎಂ ರೇಡಿಯೋ, ಮೊಬೈಲ್, ಇಂಟರ್ನೆಟ್, ಫೇಸ್ ಬುಕ್ ಮೂಲಕ ಜನರು ಸಂಪರ್ಕವನ್ನು ಹೊಂದುತ್ತಿದ್ದಾರೆ.

ಮನ್ ಕಿ ಬಾತ್ ನಿಂದ ನಮ್ಮ ಸಮಾಜದಲ್ಲಿ ಧನಾತ್ಮಕ ಪರಿಣಾಮಗಳು ಬೀರುತ್ತಿವೆ ಎಂದು ಜನರು ನಂಬಿದ್ದಾರೆ. ಮನ್ ಕಿ ಬಾತ್ ನಿಂದ ಹಲವಾರು ವಿಚಾರಗಳ ಬಗ್ಗೆ ಜನರು ಚರ್ಚೆ ನಡೆಸಲು ಆರಂಭಿಸಿದ್ದಾರೆ.

ಸರ್ಕಾರ ಅತ್ಯಂತ ಮುಖ್ಯವಾದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಕರ್ತಾರ್ಪುರ ಕಾರಿಡಾರ್ ತೆರೆಯುವ ಮೂಲಕ ಪಾಕಿಸ್ತಾನದ ಕರ್ತಾರ್ಪುರಕ್ಕೆ ಜನರು ಸುಲಭವಾಗಿ ಹೋಗಲು, ಗುರು ನಾನಕ್ ದೇವ್ ಅವರ ಪಾವಿತ್ರ್ಯ ಸ್ಥಳಕ್ಕೆ ಭೇಟಿ ನೀಡಲು ಅನುವು ಮಾಡಿಕೊಟ್ಟಿದೆ ಎಂದು ಇದೇ ವೇಳೆ ಪ್ರಧಾನಿ ಮಾಹಿತಿ ನೀಡಿದರು.