- ಕುರಿಗಾಹಿ ಬಾಲಕನನ್ನು ಶಾಲೆಗೆ ಸೇರಿಸಿದ್ದ ರತ್ನಪ್ರಭಾ- ಇಂದು ಕಾನ್ಸಟೇಬಲ್ ಆಗಿ ಇವರ ಮುಂದೆ ನಿಂತಾಗ, ಆಶ್ಚರ್ಯವಾಗಿದ್ದನ್ನು ಟ್ವೀಟ್ ಮಾಡಿದ್ದ ಮುಖ್ಯ ಕಾರ್ಯದರ್ಶಿ- ರತ್ನಪ್ರಭಾ ಕಾರ್ಯವನ್ನು ಕಾರ್ಯಕ್ರಮವೊಂದರಲ್ಲಿ ಉಲ್ಲೇಖಿಸಿದ ಪ್ರಧಾನಿ ಮೋದಿ

ಬೆಂಗಳೂರು: 27 ವರ್ಷಗಳ ಹಿಂದೆ ಮಾಡಿದೊಂದು ಸಣ್ಣ ಒಳ್ಳೆ ಕಾರ್ಯವಿಂದು ಫಲ ನೀಡಿದೆ. ಅದನ್ನೇ ತಮ್ಮ ಟ್ವೀಟಿನಲ್ಲಿ ಹೇಳಿಕೊಂಡಿದ್ದರು ರಾಜ್ಯದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ. ಈ ಕಾರ್ಯವನ್ನು ಮೋದಿ ತಮ್ಮ ಮಾತಿನಲ್ಲಿ ಶ್ಲಾಘಿಸಿದ್ದು, ಇದು ಎಲ್ಲರಿಗೂ ಮಾದರಿಯಾಗುವಂಥ ಕೆಲಸವೆಂದು ಶ್ಲಾಘಿಸಿದ್ದಾರೆ.

ಅಷ್ಟಕ್ಕೂ ಮೋದಿ ಮೆಚ್ಚುಗೆಗೆ ಪಾತ್ರವಾದ ಆ ಕೆಲಸ ಯಾವುದು ಗೊತ್ತಾ?

Scroll to load tweet…

ರಾಯಚೂರು ಡಿಸಿಯಾಗಿದ್ದಾಗ ರತ್ನಪ್ರಭ ಅವರು ಕುರಿ ಮೇಯಿಸುತ್ತಿದ್ದ ಬಾಲಕನೊಬ್ಬನನ್ನು ಶಾಲೆಗೆ ಸೇರಿಸಿದ್ದರು. ಅಂದು ರತ್ನಪ್ರಭರಿಂದಾಗಿ ಶಾಲೆಗೆ ಸೇರಿದ್ದ ಬಾಲಕ ಇಂದು ಹೆಡ್‌ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಅದೇ ಹುಡುಗ ಇಂದು ಎದುರು ನಿಂತು ರತ್ನಪ್ರಭಾಗೆ ಸೆಲ್ಯೂಟ್ ಹೊಡೆದಿದ್ದಾನೆ. 

ಈ ಬಗ್ಗೆ ರತ್ನಪ್ರಭಾ ಟ್ವೀಟ್ ಮಾಡಿದ್ದರು. 'ಅಂದು ರಾಯಚೂರು ಜಿಲ್ಲೆಯ ಇದಾಪುನೂರ್ ಗ್ರಾಮದಲ್ಲಿ ಕಾರಿನಲ್ಲಿ ಹೋಗುವಾಗ ದಾರಿಯಲ್ಲಿ ಕಂಡಿದ್ದ ನರಸಪ್ಪ ಎಂಬ ಕುರಿಗಾಯಿ ಬಾಲಕನನ್ನು ಶಾಲೆಗೆ ಸೇರಿಸಿದ್ದೆ, ಇಂದು ಆತನೇ ಕಾನ್ಸ್‌ಟೇಬಲ್ ಆಗಿ, ನನಗೆ ಸೆಲ್ಯೂಟ್ ಹೊಡೆದಾಗ ಅಚ್ಚರಿಯಾಯ್ತು. ಒಂದು ಸಣ್ಣದೊಂದು ಎಷ್ಟೊಂದು ಪರಿಣಾಮ ಬೀರುತ್ತೆ,' ಎಂದು ಟ್ವೀಟ್ ಮಾಡಿದ್ದರು. 

ಮುಖ್ಯ ಕಾರ್ಯದರ್ಶಿ ಕಾರ್ಯವನ್ನು ಪ್ರಧಾನಿ ಮೋದಿಯವರೂ ಹೊಗಳಿದ್ದಾರೆ. ಉನ್ನತ ಅಧಿಕಾರಿಗಳ ಸಭೆಯೊಂದರಲ್ಲಿ 'ಎಲ್ಲಿ ಅಧಿಕಾರಿಗಳಿಗೂ ರತ್ನಪ್ರಭಾ ಮಾದರಿ,' ಎಂದು ಮೋದಿ ಹೇಳಿದ್ದರು. ಸಣ್ಣ ಸಣ್ಣ ಕೆಲಸಗಳು ಹೇಗೆ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತವೆ ಎಂದು ಮೋದಿ ಹೇಳಿದ್ದು, ದೇಶದಲ್ಲಿ ಎಂಥಾ ಒಳ್ಳೆಯ ಅಧಿಕಾರಿಗಳು ಇದ್ದಾರೆ ಎನ್ನುವುದಕ್ಕೆ ರತ್ನಪ್ರಭಾ ಅವರೇ ಉದಾಹರಣೆ ಎಂದಿದ್ದರು.