ಮೂರು ಪಡೆಗೆ ಓರ್ವ ಮುಖ್ಯಸ್ಥ: ಮೋದಿ ಘೋಷಣೆ, ರಾಜೀವ್ ಆಲೋಚನೆ!
ದೇಶದ ರಕ್ಷಣಾ ಪಡೆಗಳ ಇತಿಹಾಸದಲ್ಲೇ ಮಹತ್ವದ ನಿರ್ಣಯ| ಮೂರು ರಕ್ಷಣಾ ಪಡೆಗಳಿಗೆ ಓರ್ವ ಮುಖ್ಯಸ್ಥನ ನೇಮಕ ಘೋಷಣೆ| ಸಿಡಿಎಸ್ ನೇಮಕ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ| 73ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಕಂಪುಕೋಟೆಯಿಂದ ಪ್ರಧಾನಿ ಮೋದಿ ಭಾಷಣ| ಮೂರೂ ರಕ್ಷಣಾ ಪಡೆಗಳ ನಡುವೆ ಸಮನ್ವಯ ಸಾಧನೆಗಾಗಿ ಸಿಡಿಎಸ್ ನೇಮಕ|
ನವದೆಹಲಿ(ಆ.15): ದೇಶದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳ ಸಮನ್ವಯಕ್ಕೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರನ್ನು(ಸಿಡಿಎಸ್) ನೇಮಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
73ನೇ ಸ್ವಾತಂತ್ರ್ಯ ದಿನಾರಣೆ ನಿಮಿತ್ತ ದೆಹಲಿಯ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ, ದೇಶದ ಮೂರೂ ರಕ್ಷಣಾ ಪಡೆಗಳಿಗೆ ಓರ್ವ ಮುಖ್ಯಸ್ಥನ ನೇಮಕದ ಮೂಲಕ ಪರಿಣಾಮಕಾರಿ ನಾಯಕತ್ವದ ಮೂಲಕ ಉತ್ತಮ ಸೇವೆ ಒದಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
‘ಚೀಫ್ ಆಫ್ ಡಿಫೆನ್ಸ್’ ನೇಮಕದಿಂದಾಗಿ ಯುದ್ಧ, ಸುರಕ್ಷತೆ ಮತ್ತಷ್ಟು ಹೆಚ್ಚಲಿದ್ದು, ಮೂರು ಸೇನಾ ಪಡೆಗಳಿಗೆ ಸಿಡಿಎಸ್ ಸಲಹೆ, ಸೂಚನೆ ನೀಡುತ್ತಾರೆ. ಇದರಿಂದ ಮೂರೂ ವಿಭಾಗಗಳಲ್ಲಿ ಸಮನ್ವಯ ಸಾಧನೆ ಸುಲಭ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
1999ರಲ್ಲಿ ಕಾರ್ಗಿಲ್ ಯುದ್ಧದ ಬಳಿಕ ದೇಶದ ಭದ್ರತಾ ವ್ಯವಸ್ಥೆಯಲ್ಲಿನ ಅಂತರವನ್ನು ಪರೀಕ್ಷಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಆ ಸಮಿತಿಯು ರಕ್ಷಣಾ ಸಚಿವರಿಗೆ ಮಿಲಿಟರಿ ಸಲಹೆಗಾರರಾಗಿ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರನ್ನು ನೇಮಕ ಮಾಡುವಂತೆ ಸಲಹೆ ನೀಡಿತ್ತು.
ದೇಶದ ಭದ್ರತಾ ವ್ಯವಸ್ಥೆಯ ಸುಧಾರಣೆಗೆ ಸಂಬಂಧಪಟ್ಟ ಅಗತ್ಯಗಳನ್ನು ಸಚಿವರ ಗುಂಪು ವಿಶ್ಲೇಷಿಸಿ, ರಕ್ಷಣಾ ಇಲಾಖೆ ಸಿಬ್ಬಂದಿ ಮುಖ್ಯಸ್ಥರ ನೇಮಕಕ್ಕೆ ಒಲವು ತೋರಿಸಿತ್ತು. 2012ರಲ್ಲಿ ನರೇಶ್ ಚಂದ್ರ ಕಾರ್ಯಪಡೆ ಸಿಬ್ಬಂದಿ ಸಮಿತಿಯ(ಸಿಒಎಸ್' ಸಿ) ಮುಖ್ಯಸ್ಥರಾಗಿ ಶಾಶ್ವತ ಅಧ್ಯಕ್ಷ ಹುದ್ದೆಯನ್ನು ಸೃಷ್ಟಿ ಮಾಡುವಂತೆ ಶಿಫಾರಸು ಮಾಡಿತ್ತು.
ದೇಶದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ಮುಖ್ಯಸ್ಥರು ಮತ್ತು ಇವರಲ್ಲಿ ಸೇವೆಯಲ್ಲಿ ಅತ್ಯಂತ ಹಿರಿತನ ಹೊಂದಿರುವವರು ಅಧ್ಯಕ್ಷರಾಗುತ್ತಾರೆ ಎಂಬುದು ಸದ್ಯದ ನಿಯಮ. ಆದರೆ ಈ ನಿಯಮ ಬದಲಿಸಿ ಮೂರೂ ರಕ್ಷಣಾ ಪಡೆಗಳಿಗೆ ಓರ್ವ ಸಿಡಿಎಸ್ ನೇಮಕದ ಮೂಲಕ ಶಾಶ್ವತ ಸಮನ್ವಯತೆಗೆ ಸರ್ಕಾರ ಮುಂದಾಗಿರುವುದು ನಿಜಕ್ಕೂ ಕ್ರಾಂತಿಕಾರಿ ಬೆಳವಣಿಗೆ ಎನ್ನಬಹುದು.
"
ಪ್ರಶ್ನೆ ಸಂಖ್ಯೆ 667, ಸಂಸದ ರಾಜೀವ್ ಚಂದ್ರಶೇಖರ್:
ಇಂತದ್ದೇ ಪ್ರಸ್ತಾವನೆಯನ್ನಯ ರಾಜ್ಯಸಭಾ ಸಂಸದ ರಾಜೀವ್ ಚಂಧ್ರಶೇಖರ್ ಈ ಹಿಂದೆಯೇ ಮಂಡಿಸಿದ್ದು ವಿಶೇಷವಾಗಿದೆ. 2008ರಲ್ಲೇ ಕಾರ್ಗಿಲ್ ಸಮಿತಿಯ ಶಿಫಾರಸ್ಸಿನ ಅನ್ವಯ ಮೂರೂ ರಕ್ಷಣಾಪಡೆಗಳಿಗೆ ಓರ್ವ ಮುಖ್ಯಸ್ಥನನ್ನು ನೇಮಿಸುವ ಇರಾದೆ ಸರ್ಕಾರಕ್ಕಿದೆಯೇ ಎಂದು ರಾಜೀವ್ ಚಂದ್ರಶೇಖರ್ ರಾಜ್ಯಸಭೆಯಲ್ಲಿ ಪ್ರಶ್ನಿಸಿದ್ದರು.
ಮೂರೂ ರಕ್ಷಣಾ ಪಡೆಗಳಲ್ಲಿ ಸಮನ್ವಯ ಸಾಧಿಸಲು ಸಿಡಿಎಸ್ ನೇಮಕ ಅತ್ಯವಶ್ಯವಾಗಿದ್ದು, ಸರ್ಕಾರ ಈ ಕೂಡಲೇ ಸಿಡಿಎಸ್ ನೇಮಕಕ್ಕೆ ಕ್ರಮ ಕೈಗೊಳ್ಳಬೇಕೆಂದು ರಾಜೀವ್ ಆಗ್ರಹಿಸಿದ್ದರು. ಅದರಂತೆ 11 ವರ್ಷಗಳ ಬಳಿಕ ರಾಜೀವ್ ಚಂದ್ರಶೇಖರ್ ಆಗ್ರಹದಂತೆ ಕೇಂದ್ರ ಸರ್ಕಾರ ಸಿಡಿಎಸ್ ನೇಮಕಕ್ಕೆ ಮುಂದಾಗಿದೆ.