Asianet Suvarna News Asianet Suvarna News

ಕಾವೇರಿ ವಿವಾದದಲ್ಲಿ ಪ್ರಧಾನಿ ಮೋದಿ ಪ್ರವೇಶ: ಮರಣ ಶಾಸನ ಬರೆದ ಬಳಿಕ ಎಚ್ಚೆತ್ತ ಕೇಂದ್ರ!

PM Modi Decided To Take Intervention In Cauvery Issue

ನವದೆಹಲಿ(ಅ.01): ಕಡೆಗೂ ಕಾವೇರಿ ಜಲವಿವಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿದ್ದಾರೆ. ಸುಪ್ರೀಂ ಕೋರ್ಟ್ ಕರ್ನಾಟಕದ ಪಾಲಿಗೆ ಮರಣಶಾಸನ ಬರೆದ ಮೇಲೆ ಕೇಂದ್ರ ಸರ್ಕಾರ ಕಟ್ಟ ಕಡೆಯದಾಗಿ ಎಚ್ಚೆತ್ತುಕೊಂಡಿದೆ. ದೆಹಲಿಯ ಪ್ರಧಾನಿ ನಿವಾಸದಲ್ಲಿ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ರಾಜ್ಯ ಸರ್ಕಾರ ಕೂಡ ನ್ಯಾಯಾಲಯದ ತೀರ್ಪು ಪಾಲನೆ ಬಗ್ಗೆ ಇವತ್ತು ಮಧ್ಯಾಹ್ನ ಸರ್ವಪಕ್ಷ ಸಭೆ ಕರೆದಿದೆ.

ಕಾವೇರಿ ಜಲವಿವಾದದಲ್ಲಿ ಪ್ರಧಾನಿ ಮೋದಿ ಪ್ರವೇಶ: ಕಾವೇರಿ ನಿರ್ವಹಣಾ ಮಂಡಳಿ ರಚನೆ  ಕುರಿತು ಮಾತುಕತೆ

ಕಾವೇರಿ ರಾಜ್ಯದ ಪಾಲಿಗೆ ಇದ್ದೂ ಇಲ್ಲದಂತೆ ಆಗಿದ್ದಾಳೆ. ಶುಕ್ರವಾರದ ತೀರ್ಪು ರಾಜ್ಯದ ಪಾಲಿಗೆ ಮರಣ ಶಾಸನವಾಗಿರುವುದೇ ಕಾವೇರಿ ನಿರ್ವಹಣಾ ಮಂಡಳಿ ತುರ್ತು ಸ್ಥಾಪನೆಗೆ ಸುಪ್ರೀಂ ಕೋರ್ಟ್ ಸೂಚಿಸಿರುವ ಕಾರಣಕ್ಕೆ. ಹೀಗಾಗಿ ಕೇಂದ್ರ ಸರ್ಕಾರ ಮೂರೇ ದಿನದಲ್ಲಿ ಮ್ಯಾನೇಜ್​ಮೆಂಟ್ ಬೋರ್ಡ್​​ ರಚಿಸಬೇಕಿದೆ. ಇಂತಹ ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿದ್ದಾರೆ.

ನಿನ್ನೆ ರಾತ್ರಿ ದೆಹಲಿಯ 7 ಆರ್​ಸಿಆರ್​ ನಿವಾಸದಲ್ಲಿ ತುರ್ತು ಸಭೆ ನಡೆಸಿದರು. ಹಿರಿಯ ಸಚಿವರಾದ ರಾಜನಾಥ್ ಸಿಂಗ್​, ಉಮಾಭಾರತಿ ಜೊತೆ ಮೊದಲಿಗೆ ಸಮಾಲೋಚನೆ. ಮೊನ್ನೆಯ ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಪ್ರಮುಖರ ಸಭೆಯ ವಿವರ ಪಡೆದರು. ಇಷ್ಟೇ ಅಲ್ಲದೆ ಅಧಿಕಾರಿಗಳಿಂದ ಕಾವೇರಿ ಕೊಳ್ಳದ ಜಲಾಶಯಗಳ ಸ್ಥಿತಿ, ನೀರು ಸಂಗ್ರಹ, ಬೆಳೆ ಹಾಗೂ ಕಾನೂನು ಸುವ್ಯವಸ್ಥೆ ಸೇರಿ ನಿರ್ವಹಣಾ ಮಂಡಳಿ ರಚನೆ ಕುರಿತು ವಿಸ್ತೃತವಾಗಿ ಚರ್ಚಿಸಿದ್ದಾರೆ.

ತೀವ್ರ ಸಂಕಷ್ಟದಲ್ಲಿ ರಾಜ್ಯ ಸರ್ಕಾರ: ಸಿಎಂ ಸಮ್ಮುಖದಲ್ಲಿ ಸರ್ವಪಕ್ಷ ಸಭೆ

ಇನ್ನು, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಪ್ರಮಾಣ ತೀವ್ರ ಕುಸಿದಿದೆ. ಹೀಗಾಗಿ ನೀರು ಬಿಡುವ ಸ್ಥಿತಿಯಲ್ಲಿ ರಾಜ್ಯ ಇಲ್ಲವೇ ಇಲ್ಲ. ಆದರೆ ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಳ್ಳಬೇಕಂದ್ರೆ ಸರ್ವಪಕ್ಷಗಳ ಸಮ್ಮತಿ ಬೇಕು ಹಾಗೂ ಮತ್ತೊಮ್ಮೆ ಅಧಿವೇಶನ ಕರೆದು ಒಪ್ಪಿಗೆ ಪಡೆಯಬೇಕು. ಕಾವೇರಿ ಕೊಳ್ಳದ ಜಲಾಶಯಗಳಿಗೆ ಒಳಹರಿವಿನಿಂದ ಬಂದು ಸೇರಿ ಏರಿಕೆಯಾಗಿರುವ ಪ್ರಮಾಣದ ನೀರನ್ನ ಬಿಡುವ ಮತ್ತೊಂದು ಮಾರ್ಗವನ್ನೂ ಕಾನೂನು ತಜ್ಞರು ರಾಜ್ಯ ಸರ್ಕಾರಕ್ಕೆ ತೋರಿಸಿದ್ದಾರೆ. ಆದ್ರೆ ಏಕಾಏಕಿ ನಿರ್ಧಾರ ಬೇಡ ಅಂತ ಸರ್ವಪಕ್ಷ ಸಭೆಯ ಮೊರೆ ಹೋಗಲು ಸಿಎಂ ಸಿದ್ರಾಮಯ್ಯ ನಿರ್ಧರಿಸಿದ್ದಾರೆ. ಹೀಗಾಗಿ ಮಧ್ಯಾಹ್ನ 2 ಗಂಟೆಗೆ ಸರ್ವಪಕ್ಷಗಳ ಸಭೆ ಕರೆಯಲಾಗಿದ್ದು. ಇಲ್ಲಿಗೆ ಕಾನೂನು ತಜ್ಞರು ಆಗಮಿಸಿ ತಮ್ಮ ಅಭಿಪ್ರಾಯ ಹೇಳಲಿದ್ದಾರೆ. ಈ ಸಭೆಯ ನಂತರ ಸರ್ಕಾರ ಮುಂದಿನ ನಡೆ ಅಂತಿಮ ಆಗುತ್ತೆ.  ಏನೇ ಆದರೂ,  ಸಿಎಂ ಸಿದ್ರಾಮಯ್ಯ ಕಾವೇರಿ ಹೋರಾಟವನ್ನ ನಾಡಿನ ರೈತ ಮತ್ತು ಮತದಾರರ ಹಿತದೃಷ್ಟಿಯಿಂದ ಎದುರಿಸಲು ಮಾನಸಿಕವಾಗಿ ಸಜ್ಜಾಗಿದ್ದಾರೆ. ನಿನ್ನೆಯಷ್ಟೇ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಉದಯ್ ಲಲಿತಾ ಒಳಗೊಂಡ ಪೀಠ 36 ಸಾವಿರ ಕ್ಯೂಸೆಕ್ ಅಂದ್ರೆ ಸರಿ ಸುಮಾರು 3 ಟಿಎಂಸಿ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು.

 

Latest Videos
Follow Us:
Download App:
  • android
  • ios