ಸ್ಯಾಮ್ ಪಿತ್ರೋಡಾಗೆ ಬಾಲಾಕೋಟ್ ದಾಳಿಗೆ ಹೆಚ್ಚಿನ ಸಾಕ್ಷಿ ಬೇಕಂತೆ| ಸರ್ಕಾರ ದಾಳಿಯ ಸಾಕ್ಷ್ಯ ನೀಡಲಿ ಎಂದ ರಾಹುಲ್ ಗಾಂಧಿ ಆಪ್ತ| ಸ್ಯಾಮ್ ಪಿತ್ರೋಡಾ ಹೇಳಿಕೆ ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ| ಕಾಂಗ್ರೆಸ್ ಮುಠ್ಹಾಳತನವನ್ನು ದೇಶ ಕ್ಷಮಿಸಲ್ಲ ಎಂದ ಪ್ರಧಾನಿ| ವಿರೋಧ ವ್ಯಕ್ತವಾಗುತ್ತಿದ್ದಂತೇ ಹೇಳಿಕೆ ಬದಲಿಸಿದ ಸ್ಯಾಮ್ ಪಿತ್ರೋಡಾ|
ನವದೆಹಲಿ(ಮಾ.22): ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಕಳೆದ ತಿಂಗಳು ನಡೆದಿದ್ದ ವಾಯು ದಾಳಿಯನ್ನು ಎಐಸಿಸಿ ಮುಖ್ಯಸ್ಥ ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡಾ ಪ್ರಶ್ನಿಸಿದ್ದಾರೆ.
ಬಾಲಾಕೋಟ್ ದಾಳಿಯ ಕುರಿತು ಇನ್ನೂ ಹೆಚ್ಚಿನ ಸಾಕ್ಷಿಗಳನ್ನು ನೀಡಬೇಕಾಗಿರುವುದು ಮೋದಿ ಸರ್ಕಾರದ ಕರ್ತವ್ಯ ಎಂದು ಸ್ಯಾಮ ಪಿತ್ರೋಡಾ ಹೇಳಿದ್ದರು.
ಸ್ಯಾಮ್ ಪಿತ್ರೋಡಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿಶ್ವಾಸಾರ್ಹ ಸಲಹೆಗಾರ ಹಾಗೂ ಮಾರ್ಗದರ್ಶಕರು, ಕಾಂಗ್ರೆಸ್ ಪರ ಪಾಕಿಸ್ತಾನ ರಾಷ್ಟ್ರೀಯ ದಿನ ಸಂಭ್ರಮಿಸುವವರು ಭಾರತೀಯ ವಾಯುದಾಳಿ ಬಗ್ಗೆ ಪ್ರಶ್ನಿಸುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಉಗ್ರರ ವಿರುದ್ಧದ ದಾಳಿಗೆ ಕಾಂಗ್ರೆಸ್ ಯಾವ ರೀತಿ ಪ್ರತಿಕ್ರಿಯೆ ನೀಡಿದೆ ಎಂಬುದು ಇಡೀ ರಾಷ್ಟ್ರಕ್ಕೆ ಗೊತ್ತಿದೆ. ಇದು ನವ ಭಾರತ, ಉಗ್ರರಿಗೆ ಅವರ ಭಾಷೆಯಲ್ಲಿಯೇ ಉತ್ತರ ನೀಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಪ್ರತಿಪಕ್ಷಗಳು ಭಾರತೀಯ ಸೇನೆ ಬಗ್ಗೆ ಆಗಾಗ್ಗೆ ಅಪಮಾನ ಮಾಡುತ್ತಲೇ ಇವೆ. ಪ್ರತಿಪಕ್ಷಗಳ ನಾಯಕರ ಹೇಳಿಕೆಯನ್ನು ಪ್ರಶ್ನಿಸುವಂತೆ ಭಾರತೀಯರಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಕಾಂಗ್ರೆಸ್ ನ ಈ ಮುಠ್ಹಾಳತನವನ್ನು ದೇಶ ಎಂದಿಗೂ ಕ್ಷಮಿಸುವುದಿಲ್ಲ ಎಂದು ಮೋದಿ ಗುಡುಗಿದ್ದಾರೆ.
ಇನ್ನು ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಯಾಮ್ ಪಿತ್ರೋಡಾ ಸ್ಪಷ್ಟನೆ ನೀಡಿದ್ದು, ಭಾರತೀಯ ಪ್ರಜೆಯಾಗಿ ನನಗೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕಿದ ಎಂದಿದ್ದಾರೆ.
ನಾನು ಸೈನಿಕರ ಅಥವಾ ಸೇನೆಯ ಸಾಮರ್ಥ್ಯ ಪ್ರಶ್ನಿಸಿಲ್ಲ. ಬದಲಿಗೆ ಸರ್ಕಾರ ನೀಡಿದ ಮಾಹಿತಿಗೆ ಮತ್ತಷ್ಟು ಸಾಕ್ಷಿ ಕೇಳಿದ್ದೇನೆ ಎಂದು ಪಿತ್ರೋಡಾ ಸ್ಪಷ್ಟಪಡಿಸಿದ್ದಾರೆ.
