ನವದೆಹಲಿ(ಜು.23): ಭಾರತದ ಎಲ್ಲಾ ಮಾಜಿ ಪ್ರಧಾನಮಂತ್ರಿಗಳ ಗೌರವ ಸೂಚಕವಾಗಿ, ಭವ್ಯವಾದ ವಸ್ತು ಸಂಗ್ರಹಾಲಯವನ್ನು ದೆಹಲಿಯಲ್ಲಿ ನಿರ್ಮಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ  ಘೋಷಿಸಿದ್ದಾರೆ.

ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ಬರೆದ ಮಾಜಿ ಪ್ರಧಾನಿ ಚಂದ್ರಶೇಖರ್ ಕುರಿತ ಪುಸ್ತಕ  ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ದೇಶಕ್ಕಾಗಿ ಸೇವೆ ಸಲ್ಲಿಸಿದ ಎಲ್ಲಾ  ಮಾಜಿ ಪ್ರಧಾನಿಗಳಿಗಾಗಿ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ತನ್ನ ತಂತ್ರಗಾರಿಕೆಯ ಭಾಗವಾಗಿ ಕೆಲ ಪ್ರಧಾನಮಂತ್ರಿಗಳ ನೆನಪುಗಳನ್ನು ಅಳಿಸಲು ಪ್ರಯತ್ನಿಸಿದ್ದು, ತಾವು ಮಾತ್ರ ಎಲ್ಲಾ ಮಾಜಿ ಪ್ರಧಾನಿಗಳ ಸ್ಮರಣಾರ್ಥ ವಸ್ತು ಸಂಗ್ರಹಾಲಯ ತೆರಯುವುದಾಗಿ ಮೋದಿ ಹೇಳಿದರು.

ಮಾಜಿ ಪ್ರಧಾನಮಂತ್ರಿಗಳ ಕುಟುಂಬ ಸದಸ್ಯರು ಈ ವಸ್ತು ಸಂಗ್ರಹಾಲಯಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಹಂಚಿಕೊಳ್ಳಬೇಕೆಂದು ಮೋದಿ  ಈ ವೇಳೆ ಮನವಿ ಮಾಡಿದ್ದಾರೆ.