ಭಾರತೀಯರು ದಶಕಗಳಿಂದ ಎದುರು ನೋಡುತ್ತಿದ್ದ ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಶಿಂಜೋ ಅಬೆ ಜತೆಗೂಡಿ ಗುಜರಾತಿನ ಅಹಮದಾಬಾದ್‌ನಲ್ಲಿ ಗುರುವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಅಹಮದಾಬಾದ್: ಭಾರತೀಯರು ದಶಕಗಳಿಂದ ಎದುರು ನೋಡುತ್ತಿದ್ದ ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಶಿಂಜೋ ಅಬೆ ಜತೆಗೂಡಿ ಗುಜರಾತಿನ ಅಹಮದಾಬಾದ್ನಲ್ಲಿ ಗುರುವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಮುಂಬೈ- ಅಹಮದಾಬಾದ್ ನಡುವೆ ಸಂಚರಿಸುವ ಈ ಬುಲೆಟ್ ರೈಲು ಯೋಜನೆಗೆ ಸಾಬರಮತಿ ಆಶ್ರಮ ದಿಂದ 2 ಕಿ.ಮೀ. ದೂರದಲ್ಲಿ ಶಿಲಾನ್ಯಾಸ ಮಾಡಿದರು.
ಜಪಾನ್'ನಿಂದ ಕೇವಲ ಶೇ.0.1ರ ಬಡ್ಡಿ ದರದಲ್ಲಿ 88 ಸಾವಿರ ಕೋಟಿ ರು. ಸಾಲ ಪಡೆದು 1.10 ಲಕ್ಷ ಕೋಟಿ ರು. ವೆಚ್ಚದಲ್ಲಿ ಗಂಟೆಗೆ ಗರಿಷ್ಠ 350 ಕಿ.ಮೀ. ವೇಗದಲ್ಲಿ ಓಡುವ ಬುಲೆಟ್ ರೈಲು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಗಳು ಪೂರ್ಣಗೊಳ್ಳಲಿರುವ 2022 ರ ಆ.15ರಂದು ಈ ರೈಲು ತನ್ನ ಸಂಚಾರವನ್ನು ಆರಂಭಿಸಬೇಕು ಎಂಬ ಗುರಿಯನ್ನು ನೀಡಲಾಗಿದೆ. ಇಷ್ಟು ದಿವಸ ಚೀನಾ, ಜಪಾನ್, ಯುರೋಪ್'ನ ಬುಲೆಟ್ ರೈಲುಗಳು, ಅವುಗಳ ವೇಗವನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ ಭಾರತೀಯರು ಇನ್ನು 5 ವರ್ಷಗಳಲ್ಲಿ ಸ್ವದೇಶಿ ಬುಲೆಟ್ ರೈಲಿನಲ್ಲಿ ಸಂಚರಿಸಿ ಆನಂದಪಡಬಹುದಾಗಿದೆ.
ಬುಲೆಟ್ ರೈಲು ಯೋಜನೆ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಲ್ಲಿ ಒಂದು. ಈ ಯೋಜನೆಗೆ 2015ರಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಯೋಜನೆ ಪೂರ್ಣಗೊಳ್ಳಲು 2023ನೇ ಇಸ್ವಿಯವರೆಗೂ ಕಾಯಬೇಕಿತ್ತಾದರೂ, ಭಾರತೀಯ ಎಂಜಿನಿಯರ್ಗಳು ನಿಗದಿತ ಗುರಿಗಿಂತ ಮೊದಲೇ ಯೋಜನೆ ಪೂರ್ಣಗೊಳಿಸುತ್ತಾರೆ ಎಂಬ ವಿಶ್ವಾಸದೊಂದಿಗೆ ಗುರಿಯನ್ನು ಹಿಂದೂಡಲಾಗಿದೆ ಎಂದು ರೈಲ್ವೆ ಮಂತ್ರಿ ಪೀಯೂಷ್ ಗೋಯಲ್ ಮಾಹಿತಿ ನೀಡಿದ್ದಾರೆ.
