ಬಹುತ್ವದ ರಾಷ್ಟ್ರೀಯವಾದ ನಮ್ಮ ಜವಾಬ್ದಾರಿ: ಪ್ರಣಬ್ ಮುಖರ್ಜಿ..!

Plural Nationalism is our responsibility: Pranab Mukherjee
Highlights

ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಗಿ

ನಾಗ್ಪುರ್‌ದ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ ಪ್ರಣಬ್ ಭಾಷಣ

ಬಹುತ್ವದ ರಾಷ್ಟ್ರೀಯವಾದ ಭಾರತದ ಅಸ್ಮಿತೆ ಎಂದ ಪ್ರಣಬ್

‘ಶಾಂತಿ, ಅಹಿಂಸೆ ಮತ್ತು ಅಭಿವೃದ್ದಿ ಭಾರತದ ಘೋಷವಾಕ್ಯ’

ನಾಗ್ಪುರ್(ಜೂ.7): ‘ನೀನು ನಂಬುವ ಸಿದ್ದಾಂತವನ್ನು ನನ್ನ ಜೀವ ಇರುವವರೆಗೂ ನಾನು ಒಪ್ಪಲು ಸಾಧ್ಯವಿಲ್ಲ. ಆದರೆ ಆ ಸಿದ್ದಾಂತವನ್ನು ಪ್ರಚಾರ ಮಾಡಲು ನಿನಗಿರುವ ಹಕ್ಕಿಗಾಗಿ ನನ್ನ ರಕ್ತದ ಕೊನೆ ಉಸಿರಿರುವವರೆಗೂ ಹೋರಾಡುವೆ..’ ಇದು ಪ್ರಜಾಪ್ರಭುತ್ವದ ಕುರಿತಾಗಿ ಇದುವರೆಗೂ ಬಂದಿರುವ ಅತ್ಯಂತ ಶ್ರೇಷ್ಠ ಹೇಳಿಕೆಗಳಲ್ಲಿ ಒಂದು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ನಾಗ್ಪುರ್ ದ ಆರ್ ಎಸ್ ಎಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಭಾಗವಹಿಸಿ ಈ ಹೇಳಿಕೆಗೆ ಮತ್ತಷ್ಟು ಗೌರವ ತಂದು ಕೊಟ್ಟಿದ್ದಾರೆ.

ನಾಗ್ಪುರದಲ್ಲಿರುವ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಿದ್ದರು. ಜೀವಮಾನವೀಡಿ ಆರ್ ಎಸ್ ಎಸ್ ವಿರೋಧಿ ರಾಜಕಾರಣ ಮಾಡಿದ ಪ್ರಣಬ್, ಇಂದು ಅದರ ಸಭೆಯಲ್ಲಿ ಭಾಗವಹಿಸಿದ್ದರ ಕುರಿತು ಪರ ವಿರೋಧದ ಚರ್ಚೆ ನಡೆಯುತ್ತಲೇ ಇದೆ. ಇದರ ಮಧ್ಯೆಯೇ ಪ್ರಣಬ್ ಮುಖರ್ಜಿ ಆರ್ ಎಸ್ ಎಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.

ರಾಷ್ಟ್ರೀಯವಾದದ ಕುರಿತಾಗಿ ನಮ್ಮಲ್ಲಿರುವ ಅಭಿಪ್ರಾಯವನ್ನು ಹಂಚಿಕೊಳ್ಳಲು ಮತ್ತು ಅದನ್ನು ವಿಸ್ತರಿಸಲು ತಾವಿಲ್ಲಿ ಬಂದಿದ್ದಾಗಿ ಪ್ರಣಬ್ ಹೇಳಿದರು. ರಾಷ್ಟ್ರ ಎಂಬುದು ಒಂದು ನಿರ್ದಿಷ್ಟ ಜನಸಮುದಾಯದ ಅಸ್ಮಿತೆ ಎಂಬುದು ಹೌದಾದರೂ, ಕಾಲಕ್ಕೆ ತಕ್ಕಂತೆ ಬದಲಾದ ಸಮಾಜವನ್ನು ಅರ್ಥೈಸಿಕೊಳ್ಳಬೇಕಾದುದು ನಮ್ಮ ಕರ್ತವ್ಯ ಎಂದು ಮಾಜಿ ರಾಷ್ಟ್ರಪತಿ ನೆನಪಿಸಿದರು. ಪ್ರಾಚೀನ ಭಾರತದ ಭವ್ಯ ಇತಿಹಾಸ ಮತ್ತು ಅದಕ್ಕೆ ಹಿಂದೂ ಸಂಸ್ಕೃತಿಯ ಕೊಡುಗೆ ಅನನ್ಯ ಎಂಬುದನ್ನು ನಾವು ಮರೆಯಬಾರದು ಎಂದು ಅವರು ಕಿವಿಮಾತು ಹೇಳಿದರು.

ಪ್ರಾಚೀನ ವ್ಯಾಪಾರ ಸಂಬಂಧಗಳು ಎಲ್ಲ ಸಮಾಜಗಳಲ್ಲೂ ಹಲವು ಕ್ರಾಂತಿಕಾರಕ ಬದಲಾವಣೆ ತಂದಿದ್ದು, ಇದನ್ನು ಭಾರತಕ್ಕೂ ಅನ್ವಯಿಸಬೇಕಾಗುತ್ತದೆ. ನಮ್ಮ ಪ್ರಾಚೀನ ಸಭ್ಯತೆ ಕುರಿತು ಜಗತ್ತಿನ ವಿವಿಧ ದೇಶಗಳು ಅನಾದಿ ಕಾಲದಿಂದಲೂ ಅಧ್ಯಯನ ನಡೆಸುತ್ತಿದ್ದು, ಭಾರತದ ಭಾವೈಕ್ಯತೆಯ ಸಂದೇಶವನ್ನು ವಿಶ್ವ ಸಮುದಾಯ ಒಪ್ಪಿಕೊಂಡಿದೆ ಎಂದು ಪ್ರಣಬ್ ಹೆಮ್ಮೆಯಿಂದ ಹೇಳಿದರು.

ವಿವಿಧತೆಯಲ್ಲಿ ಏಕತೆ ಸಾಧಿಸುವ ಪರಿಯನ್ನು ಜಗತ್ತಿಗೆ ತಿಳಿಸಿದ್ದೇ ಭಾರತ ಎಂದು ಹೇಳಿದ ಮುಖರ್ಜಿ, ಎಲ್ಲ ವಿವಿಧತೆಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಪರಸ್ಪರ ಸಹಬಾಳ್ವೆಯಿಂದ ಬದುಕುವುದನ್ನು ನಮಗೆ ಭಾರತ ಮಾತೆ ಕಲಿಸಿದ್ದಾಳೆ ಎಂದು ಪ್ರಣಬ್ ಅಭಿಪ್ರಾಯಪಟ್ಟರು. ಚಂದ್ರಗುಪ್ತ ಮೌರ್ಯ ಸ್ಥಾಪಿಸಿದ ಮೌರ್ಯ ಸಾಮ್ರಾಜ್ಯದಿಂದ ಹಿಡಿದು ಬ್ರಿಟಿಷ್ ಆಡಳಿತದವರೆಗಿನ ಭಾರತದ ಇತಿಹಾಸವನ್ನು ಪುನರುಚ್ಛಿಸಿದ ಅವರು, ಭಾರತ ಇತಿಹಾಸದುದ್ದಕ್ಕೂ ಪರಕೀಯ ದಾಳಿಗಳನ್ನು ಎದುರಿಸಿಯೂ ತನ್ನ ಸಂಸ್ಕೃತಿಯನ್ನು ಜೀವಂತವಾಗಿರಿಸಿದೆ ಎಂಬುದನ್ನು ನಾವೆಲ್ಲ ನೆನಪಿನಲ್ಲಿಟ್ಟುಕೊಳ್ಳಬೇಕಿದೆ ಎಂದು ಮನವಿ ಮಾಡಿದರು.

ರಾಷ್ಟ್ರೀಯತೆಯೇ ಭಾರತದ ಜೀವಾಳವಾಗಿದ್ದು, ಸಂಸ್ಕೃತಿಯ ರಕ್ಷಣೆಯ ಜೊತೆಗೆ ಆಧುನಿಕ ಜಗತ್ತಿನ ಜೊತೆಗೆ ಹೆಜ್ಜೆ ಇರಿಸಬೇಕಾಗಿರುವುದು ಇಂದಿನ ತುರ್ತು ಅಗತ್ಯ ಎಂದ ಪ್ರಣಬ್, ಬಹುತ್ವದ ರಾಷ್ಟ್ರವಾದವನ್ನು ವಿಶ್ವಕ್ಕೆ ಮತ್ತಷ್ಟು ಪರಿಣಾಮಕಾರಿಯಾಗಿ ಸಾರುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ನಮ್ಮೆಲ್ಲರ ಕರ್ತವ್ಯವನ್ನು ನೆನಪಿಸಿದರು.      

ಇದಕ್ಕೂ ಮೊದಲು ಮಾತನಾಡಿದ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಸಂಘದ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ರಾಷ್ಟ್ರಪತಿ ಅವರಿಗೆ ಧನ್ಯವಾದ ಅರ್ಪಿಸಿದರು. ಪ್ರತಿವರ್ಷವೂ ನಾವು ದೇಶದ ಪ್ರತಿಷ್ಠಿತ ವ್ಯಕ್ತಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದು, ಅದರಂತೆ ಈ ಬಾರಿ ಪ್ರಣಬ್ ಮುಖರ್ಜಿ ಅವರನ್ನು ಆಹ್ವಾನಿಸಿದ್ದೇವೆ. ಇದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಭಾಗವತ್ ಸ್ಪಷ್ಟಪಡಿಸಿದರು.

ಭಾರತದಲ್ಲಿ ರಾಜಕೀಯ ವಿವಿಧತೆ ಇಂದು ನಿನ್ನೆಯದಲ್ಲ, ಬದಲಿಗೆ ಪ್ರಾಚೀನ ಕಾಲದಿಂದಲೂ ಈ ದೇಶದಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಎಂಬುದು ಅಸ್ತಿತ್ವದಲ್ಲಿದ್ದು, ಪರಸ್ಪರ ಗೌರವ ಮತ್ತು ಆದರಗಳಿಂದಲೇ ಈ ದೇಶವನ್ನು ಕಟ್ಟಲು ಎಲ್ಲರೂ ಶ್ರಮಿಸಿದ್ದಾರೆ ಎಂದು ಮೋಹನ್ ಭಾಗವತ್ ಅಭಿಪ್ರಾಯಪಟ್ಟರು. ಈ ಕಾರಣಕ್ಕಾಗಿಯೇ ಪ್ರಣಬ್ ಮುಖರ್ಜಿ ಇಂದು ನಮ್ಮ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಎಂದೂ ಭಾಗವತ್ ಹೇಳಿದರು.

ಭಾರತದಲ್ಲಿ ಹುಟ್ಟಿದವರೆಲ್ಲಾ ಭಾರತ ಮಾತೆಯ ಮಕ್ಕಳಾಗಿದ್ದು, ವಿವಿಧ ನಂಬಿಕೆಗಳನ್ನು ಗೌರವಿಸುತ್ತಲೇ ಸಮಾಜವನ್ನು ಕಟ್ಟುವ ಕಾಯಕದಲ್ಲಿ ಆರ್ ಎಸ್ ಎಸ್ ನಿರತವಾಗಿದೆ. ಧರ್ಮ ಈ ದೇಶದ ಆತ್ಮವಾಗಿದ್ದು, ಅದನ್ನು ಚಲನಶೀಲವನ್ನಾಗಿ ಇಡುವ ಜವಾಬ್ದಾರಿಯನ್ನು ಸಂಘ ಪರಿವಾರ ಹೊತ್ತಿದೆ ಎಂದು ಭಾಗವತ್ ಹೇಳಿದರು. ಪ್ರತ್ಯೇಕ ವ್ಯಕ್ತಿಯ ಅಭಿಪ್ರಾಯವನ್ನು ಗೌರವಿಸುವುದು ಭಾರತೀಯ ಸಂಸ್ಕೃತಿಯ ಲಕ್ಷಣವಾಗಿದ್ದು, ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲು ಸಂಘ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

loader