ಬೆಂಗಳೂರು (ಜೂ. 28):  2015 ರ ಆಗಸ್ಟ್‌ 15 ರಂದು ಸ್ವಾತಂತ್ರ್ಯೋತ್ಸವ ದಿನದಂದೇ ಕನ್ನಡ ನಾಡಿನ ಸಾರಸ್ವತ ಲೋಕದ ಹಿರಿಯ ಸಂಶೋಧಕ ಡಾ ಎಂ.ಎಂ.ಕಲ್ಬುರ್ಗಿ ಅವರ ಹತ್ಯೆಗೆ ಹಂತಕರು ಸಂಚು ರೂಪಿಸಿದ್ದರು ಎಂಬ ಸಂಗತಿ ಎಸ್‌ಐಟಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಪೂರ್ವನಿಯೋಜಿತದಂತೆ ಸ್ವಾತಂತ್ರ್ಯೋತ್ಸವ ದಿನದಂದು ಧಾರವಾಡದ ಕಲ್ಯಾಣದ ನಗರದಲ್ಲಿದ್ದ ಕಲ್ಬುರ್ಗಿ ಅವರ ಮನೆ ಬಳಿ ಹೋಗಿದ್ದ ಶೂಟರ್‌ ಗಣೇಶ್‌ ಮಿಸ್ಕಿನ್‌ ಹಾಗೂ ರೈಡರ್‌ ಪ್ರವೀಣ್‌ ಪ್ರಕಾಶ್‌ ಚುತುರ್‌, ತಮ್ಮ ಸಂಚು ಕಾರ್ಯರೂಪಕ್ಕಿಳಿಸಲು ಹೊಂಚು ಹಾಕಿದ್ದರು. ಆದರೆ ಆ ದಿನ ಅನಾರೋಗ್ಯದ ಕಾರಣ ಕಲ್ಬುರ್ಗಿ ಅವರು ಮನೆಯಿಂದ ಹೊರಬರಲಿಲ್ಲ.

ಮಧ್ಯಾಹ್ನದವರೆಗೆ ಮನೆ ಹತ್ತಿರವೇ ಕಾದು ಹಂತಕರು, ಕೊನೆಗೆ ವಾಪ್ಸಾಗಿದ್ದರು. ಇದಾದ ನಂತರ ಅದೇ ತಿಂಗಳ 30ರಂದು ಮತ್ತೆ ಕಲ್ಬುರ್ಗಿ ಅವರ ಮನೆಗೆ ತೆರಳಿದ್ದರು. ಮೊದಲ ಯತ್ನದಲ್ಲಿ ಸಫಲತೆ ಕಾಣದೆ ದ್ವಂದ್ವಕ್ಕೊಳಗಾಗಿದ್ದ ಆರೋಪಿಗಳು, ಎರಡನೇ ಬಾರಿ ಗುರಿ ತಪ್ಪಬಾರದು ಎಂದು ಪೂರ್ವ ತಯಾರಿ ಜೋರಾಗಿ ಮಾಡಿಕೊಂಡಿದ್ದರು. ಹೀಗಾಗಿ ಅಂದು ಕಲ್ಬುರ್ಗಿ ಅವರು ಮನೆಯಿಂದ ಹೊರಬರುವವರೆಗೆ ಸಹನೆ ವಹಿಸದೆ ಆರೋಪಿಗಳು ತಾವೇ ಮನೆ ಬಾಗಿಲು ಬಡಿದಿದ್ದರು ಎಂದು ಎಸ್‌ಐಟಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಮನೆಗೆ ಹೋದ ಕ್ಷಣಾರ್ಧದಲ್ಲಿ ಹತ್ಯೆಗೈದು ಪರಾರಿಯಾಗಲು ಹಂತಕರು ಯೋಜಿಸಿದ್ದರು. ಆದರೆ ಮನೆ ಬಾಗಿಲನ್ನು ಕಲ್ಬುರ್ಗಿ ಅವರ ಪತ್ನಿ ಉಮಾದೇವಿ ತೆರೆದಿದ್ದರು. ಅವರ ಹಿಂದೆಯೇ ಬಂದ ಕಲ್ಬುರ್ಗಿ ಅವರಿಗೆ ಗಣೇಶ್‌ ಮಿಸ್ಕಿನ್‌ ಗುಂಡು\ ಹಾರಿಸಿದ್ದ. ಆತ ಮನೆಯ ಹೊರ ಆವರಣ ದಾಟುತ್ತಿದ್ದಂತೆ ಬೈಕ್‌ ಚಾಲೂ ಮಾಡಿಕೊಂಡಿದ್ದ ಪ್ರವೀಣ್‌ ಚತುರ್‌, ಮಿಸ್ಕಿನ್‌ನನ್ನು ಕೂರಿಸಿಕೊಂಡು ಪರಾರಿಯಾಗಿದ್ದ ಎಂದು ಮೂಲಗಳು ಮಾಹಿತಿ ನೀಡಿವೆ.

ಕಲ್ಬುರ್ಗಿ ಹೇಳಿಕೆ ತಪ್ಪಾಗಿ ಅರ್ಥೈಸಿದ್ದರು:

ಬಲಪಂಥೀಯ ವಿಚಾರಧಾರೆ ವಿರೋಧಿಸುವ ಪ್ರಗತಿಪರ ಚಿಂತಕರು, ಸಾಮಾಜಿಕ ಹೋರಾಟಗಾರರು ಹಾಗೂ ಸಾಹಿತಿಗಳ ಹತ್ಯೆಗೆ ಮಹಾರಾಷ್ಟ್ರ ಮೂಲದ ಅಮೋಲ್‌ ಕಾಳೆ ತಂಡವು ಸಂಚು ರೂಪಿಸಿತ್ತು. ಈ ತಂಡದ ಮೊದಲ ಹಿಟ್‌ ಲಿಸ್ಟ್‌ನಲ್ಲಿ ಕಲ್ಬುರ್ಗಿ ಅವರ ಹೆಸರಿರಲಿಲ್ಲ. ಆದರೆ 2014ರ ಜೂನ್‌ 9ರಂದು ಬೆಂಗಳೂರಿನಲ್ಲಿ ನಡೆದ ಅಂಧಶ್ರದ್ಧೆ ವಿರೋಧಿ ಹೋರಾಟ ಸಮಿತಿಯ ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಅವರು, ಹಿಂದೂ ದೇವತೆಗಳ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂಬ ಕಾರಣಕ್ಕೆ ಅವರ ಹತ್ಯೆಗೆ ಯೋಜಿಸಿದ್ದರು.

ಅದರಂತೆ 2015ರ ಜುಲೈನಲ್ಲಿ ಕಲ್ಬುರ್ಗಿ ಅವರ ಹತ್ಯೆಗೆ ಅಮೋಲ್‌ ಕಾಳೆ ತಂಡವು ಸಂಚು ರೂಪಿಸಿ ಸಿದ್ಧತೆ ನಡೆಸಿತ್ತು. ಈ ಕೃತ್ಯಕ್ಕಾಗಿ ಗಣೇಶ್‌ ಮಿಸ್ಕಿನ್‌ ಹಾಗೂ ಪ್ರವೀಣ್‌ ಪ್ರಕಾಶ್‌ ಚತುರನನ್ನು ಬಳಸಿಕೊಂಡ ಕಾಳೆ, ಆ ಇಬ್ಬರಿಗೆ ಹತ್ಯೆ ನಂತರ ತಪ್ಪಿಸಿಕೊಳ್ಳಬೇಕಾದ ದಾರಿಗಳ ಕುರಿತು ಸೂಚನೆಗಳನ್ನು ನೀಡಿ ಅಣಿಗೊಳಿಸಿದ್ದ.

ಕಾಳೆ ಸೂಚನೆ ಮೇರೆಗೆ ಸ್ವಾತಂತ್ರ್ಯೋತ್ಸವದ ದಿನ ಕಲ್ಯಾಣ ನಗರದ ಕಲ್ಬುರ್ಗಿ ಅವರ ನಿವಾಸದ ಬಳಿಗೆ ಮಿಸ್ಕಿನ್‌ ಮತ್ತು ಚುತುರ್‌ ತೆರಳಿದ್ದರು. ಆದರೆ ಮೊದಲ ಯತ್ನ ವಿಫಲವಾಯಿತು. ಕೊನೆಗೆ ಅ.30 ರಂದು ಬೆಳಗ್ಗೆ ಕಲ್ಬುರ್ಗಿ ಅವರಿಗೆ ಗುಂಡಿಕ್ಕಿ ಕೊಂದ ಬಳಿಕ ಹಂತಕರು, ಕಿತ್ತೂರು ಬಳಿ ಬೈಕ್‌ ನಿಲ್ಲಿಸಿ ಕಾಲ್ಕಿತ್ತಿದ್ದರು. ಅಲ್ಲಿಂದ ಬೆಳಗಾವಿಗೆ ಬಂದು ಮತ್ತೆ ಹುಬ್ಬಳ್ಳಿಗೆ ಗಣೇಶ್‌ ವಾಪ್ಸಾಗಿದ್ದ ಎಂದು ಮೂಲಗಳು ವಿವರಿಸಿವೆ.

ಮೊದಲ ಸಲವೇ ಮನೆಯೊಳಗೆ ಹೋಗಿದ್ದ

ಸ್ವಾತಂತ್ರ್ಯೋತ್ಸವದ ದಿನ ಕಲ್ಬುರ್ಗಿ ಅವರು ಮನೆಯಿಂದ ಹೊರ ಬಾರದೆ ಹೋದಾಗ ಬೇಸತ್ತ ಶೂಟರ್‌ ಗಣೇಶ್‌ ಮಿಸ್ಕಿನ್‌, ಕೊನೆಗೆ ಕಲ್ಬುರ್ಗಿ ಅವರ ಮನೆಯೊಳಗೆ ಹೋಗಿದ್ದ. ಆದರೆ, ಕಲ್ಬುರ್ಗಿ ಅವರಿಗೆ ಹುಷಾರಿಲ್ಲ. ಯಾರೊಂದಿಗೆ  ಮಾತನಾಡುವುದಿಲ್ಲ ಎಂದು ಹೇಳಿ ಅವರ ಕುಟುಂಬದವರು ಕಳುಹಿಸಿದ್ದರು.

ಈ ವಿಚಾರ ತಿಳಿದು ಕೆರಳಿದ ಪ್ರಮುಖ ಸಂಚುಕೋರ ಕಾಳೆ, ಮಿಸ್ಕಿನ್‌ಗೆ ತಾಳ್ಮೆಯಿಂದ ನಾನು ಹೇಳಿದಂತೆ ಕೆಲಸ ಮಾಡು. ನೀನು ಉದ್ಧಟತನ ತೋರಿದರೆ ಎಲ್ಲರಿಗೂ ಅಪಾಯವಿದೆ ಎಂಬುದಾಗಿ ಎಚ್ಚರಿಸಿದ್ದ ಎಂದು ತಿಳಿದು ಬಂದಿದೆ.

- ಗಿರೀಶ್ ಮಾದೇನಹಳ್ಳಿ