ಬೆಂಗಳೂರು[ಸೆ.11] ಇಂದು ಬೆಳಗ್ಗೆ ಅಂದರೆ ಸೆ.11ರಂದು ಬೆಳಗ್ಗೆ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಮಾಡಿದ್ದ ಟ್ವೀಟ್ ವೊಂದರ ಅಸಲಿಯತ್ತು ಇದೀಗ ಬಹಿರಂಗ ಆಗ್ತಾ ಇದೆ. ಸಿಎಂ ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಸುಧಾಕರ್ ಟ್ವೀಟ್ ಮಾಡಿದ್ದರು.

ಇಂಧನ ದರ ಏರಿಕೆ ವಿರೋಧಿಸಿ ಸೋಮವಾರ ಕಾಂಗ್ರೆಸ್ ಪಕ್ಷ ಭಾರತ್ ಬಂದ್‌ಗೆ ಕರೆ ನೀಡಿತ್ತು. ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಕೆ. ಸುಧಾಕರ್ ಕುಮಾರಸ್ವಾಮಿ ಅವರನ್ನು ಉದ್ದೇಶಿಸಿಯೇ ಟ್ವೀಟ್ ಮಾಡಿ, ರಾಜ್ಯದಲ್ಲಿ ಜೀವನ ವೆಚ್ಚ ದುಬಾರಿಯಾಗಿದೆ. ತೈಲದ ಮೇಲಿನ ಸೆಸ್ ಇಳಿಸಿ ಎಂದು ಮನವಿ ಮಾಡಿಕೊಂಡಿದ್ದರು.

ಮುಖ್ಯಮಂತ್ರಿಗಳೇ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಅನುಸರಿಸಿ. ಆಂಧ್ರದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದ್ದಾರೆ. ಕನಿಷ್ಟ ಶೇ. 3ರಿಂದ 4ರಷ್ಟು ದರವನ್ನು ಪ್ರತಿ ಲೀಟರ್‌ಗೆ ಕಡಿತಗೊಳಿಸಿದ್ದಾರೆ. ಇಡೀ ದೇಶದಲ್ಲೇ ಕರ್ನಾಟಕ ರಾಜ್ಯ ಜೀವನ ಮಾಡಲು ಅತ್ಯಂತ ದುಬಾರಿಯಾಗಿದೆ ಎಂದಿದ್ದರು. ಆದರೆ ಸಿಎಂಗೆ ಟ್ಯಾಗ್ ಮಾಡಲು ಮರೆತಿದ್ದರು.

ಇದೀಗ ಅತೃಪ್ತ ಬಣದ ನಾಯಕರೆಂದು ಕರೆಸಿಕೊಂಡಿರುವ ರಮೇಶ್ ಜಾರಕಿಹೊಳಿ ಸಂಪರ್ಕಕ್ಕೆ ಸುಧಾಕರ್ ಸಿಕ್ಕಿದ್ದು ಕೋಲಾರ, ಚಿಕ್ಕಬಳ್ಳಾಪುರ ಭಾಗದ ಕಾಂಗ್ರೆಸ್ ಶಾಸಕರನ್ನು ತಮ್ಮೊಂದಿಗೆ ಬರುವಂತೆ ಮನವೊಲಿಸಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.