ನವದೆಹಲಿ[ಫೆ.12]: ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ ಸೋಮವಾರ ಮೊದಲ ಬೃಹತ್‌ ರಾರ‍ಯಲಿ ನಡೆಸಿದ ತಮ್ಮ ಪತ್ನಿ ಪ್ರಿಯಾಂಕಾ ವಾದ್ರಾಗೆ ಪತಿ ರಾಬರ್ಟ್‌ ವಾದ್ರಾ ಫೇಸ್‌ಬುಕ್‌ ಪೋಸ್ಟ್‌ ಮೂಲಕ ಅಚ್ಚರಿಯ ರೀತಿಯಲ್ಲಿ ಶುಭ ಕೋರಿದ್ದಾರೆ.

‘ಪಿ, ಉತ್ತರ ಪ್ರದೇಶದಲ್ಲಿ ಪಕ್ಷದ ಜವಾಬ್ದಾರಿ ವಹಿಸಿಕೊಂಡು ಭಾರತೀಯರ ಸೇವೆಗೆ ಹೊರಟ ನಿನಗೆ ಶುಭ ಹಾರೈಕೆಗಳು. ನೀನು ನನ್ನ ಬೆಸ್ಟ್‌ ಫ್ರೆಂಡ್‌, ಪರ್‌ಫೆಕ್ಟ್ ಪತ್ನಿ ಹಾಗೂ ನಮ್ಮ ಮಕ್ಕಳಿಗೆ ಅತ್ಯುತ್ತಮ ತಾಯಿ...’ ಎಂದು ವಾದ್ರಾ ಭಾವನಾತ್ಮಕವಾಗಿ ಬರೆದಿದ್ದಾರೆ.

‘ರಾಜಕೀಯದಲ್ಲಿ ಕೆಟ್ಟವಾತಾವರಣವಿದೆ... ಆದರೆ ಅವಳ ಮುಂದೆ ದೇಶದ ಜನರ ಸೇವೆ ಮಾಡುವ ಕರ್ತವ್ಯವಿದೆ. ನಾವೀಗ ಅವಳನ್ನು ಭಾರತದ ಜನತೆಗೆ ಒಪ್ಪಿಸುತ್ತಿದ್ದೇವೆ. ದಯವಿಟ್ಟು ಸುರಕ್ಷಿತವಾಗಿ ನೋಡಿಕೊಳ್ಳಿ’ ಎಂದೂ ಸೋನಿಯಾ ಗಾಂಧಿ ಅಳಿಯ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ಭಾವ ಬರೆದಿದ್ದಾರೆ.

ಪ್ರಿಯಾಂಕಾ ವಾದ್ರಾ ಅವರನ್ನು ಇತ್ತೀಚೆಗೆ ಉತ್ತರ ಪ್ರದೇಶ (ಪೂರ್ವ)ದ ರಾಜಕೀಯ ವ್ಯವಹಾರಗಳನ್ನು ನೋಡಿಕೊಳ್ಳುವ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸುವ ಮೂಲಕ ಕಾಂಗ್ರೆಸ್‌ ಪಕ್ಷದಿಂದ ಅಧಿಕೃತವಾಗಿ ರಾಜಕೀಯ ಕಣಕ್ಕೆ ಇಳಿಸಿದಾಗಲೂ ವಾದ್ರಾ ಹೀಗೇ ಫೇಸ್‌ಬುಕ್‌ನಲ್ಲಿ ಬರೆದಿದ್ದರು. ‘ಅಭಿನಂದನೆಗಳು ಪಿ... ಯಾವಾಗಲೂ, ಬದುಕಿನ ಪ್ರತಿ ಹಂತದಲ್ಲೂ ನಿನ್ನ ಜೊತೆ ಇರುತ್ತೇನೆ. ಶಕ್ತಿ ಮೀರಿ ಕೆಲಸ ಮಾಡು’ ಎಂದು ಹೇಳಿದ್ದರು.

ಅಕ್ರಮ ಭೂ ವ್ಯವಹಾರಗಳ ಆರೋಪದ ಸಂಬಂಧ ಇ.ಡಿ. ವಿಚಾರಣೆ ಎದುರಿಸುತ್ತಿರುವ ರಾಬರ್ಟ್‌ ವಾದ್ರಾ ಅವರಿಗೆ ಪ್ರಿಯಾಂಕಾ ಕೂಡ ಇದೇ ರೀತಿ ಭಾವನಾತ್ಮಕ ಬೆಂಬಲ ನೀಡುತ್ತಿದ್ದು, ಇತ್ತೀಚೆಗಷ್ಟೇ ಅವರನ್ನು ತಾವೇ ಸ್ವತಃ ಇ.ಡಿ. ಕಚೇರಿಗೆ ಕರೆದುಕೊಂಡು ಹೋಗಿ-ಬಂದು ಸುದ್ದಿಯಾಗಿದ್ದರು.