ಕೊಯಮತ್ತೂರು: 1998ರ ಸರಣಿ ಬಾಂಬ್‌ ಸ್ಫೋಟದ ದೋಷಿಯೊಬ್ಬ, ತಾನು ಪ್ರಧಾನಿ ಮೋದಿಯ ಹತ್ಯೆಗೆ ನಿರ್ಧರಿಸಿರುವುದಾಗಿ ಗುತ್ತಿಗೆದಾರನೊಬ್ಬನ ಜೊತೆ ನಡೆಸಿದ ದೂರವಾಣಿ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅರೋಪಿ ಮಹಮ್ಮದ್‌ ರಫೀಕ್‌ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಇತ್ತೀಚೆಗೆ ಗುತ್ತಿಗೆದಾರ ಪ್ರಕಾಶ್‌ ಎಂಬುವವರಿಗೆ ಕರೆ ಮಾಡಿದ್ದ ರಫೀಕ್‌ ‘‘ನಾವು ಮೋದಿ ಅವರನ್ನು ಮುಗಿಸಲು ನಿರ್ಧರಿಸಿದ್ದೇವೆ. ಏಕೆಂದರೆ 1998ರಲ್ಲಿ ಎಲ್‌.ಕೆ. ಅಡ್ವಾಣಿ ಕೊಯಮತ್ತೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಾಂಬ್‌ ಇಟ್ಟಿದ್ದು ನಾವೇ. ನನ್ನ ಮೇಲೆ ಸಾಕಷ್ಟುಕೇಸಿದೆ, 100ಕ್ಕೂ ಹೆಚ್ಚು ವಾಹನಗಳನ್ನು ಧ್ವಂಸ ಮಾಡಿದ್ದೇನೆ’ ಎಂದೆಲ್ಲಾ ಬೆದರಿಕೆಯ ಧಾಟಿಯಲ್ಲಿ ಹೇಳಿದ್ದಾನೆ. ಹೀಗಾಗಿ ಪ್ರಾಥಮಿಕ ತನಿಖೆ ಅನ್ವಯ, ಇದು ಗುತ್ತಿಗೆದಾರನನ್ನು ಬೆದರಿಸಲು ಆಡಿದ ಮಾತುಗಳಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

1998ರಲ್ಲಿ ಅಡ್ವಾಣಿ ಭೇಟಿಗೂ ಕೆಲವೇ ಹೊತ್ತಿನ ಮುನ್ನ ಕೊಯಮತ್ತೂರಿನಲ್ಲಿ ಸರಣಿ ಸ್ಫೋಟ ನಡೆದು 58 ಜನ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ದೋಷಿಯಾಗಿದ್ದ. ಶಿಕ್ಷೆ ಪೂರ್ಣಗೊಳಿಸಿ ಬಿಡುಗಡೆಯಾಗಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.