ಬೆಂಗಳೂರು :  ಆಗಾಗ ಚರ್ಚೆಗೆ ಗ್ರಾಸವಾಗುತ್ತಿದ್ದ ಶಾಸಕರ ಕ್ಲಬ್‌ (ಕಾನ್‌ಸ್ಟಿಟ್ಯೂಷನ್‌ ಕ್ಲಬ್‌) ಅನ್ನು ರಾಜಧಾನಿಯಲ್ಲಿ ಸ್ಥಾಪಿಸುವ ಯೋಜನೆಗೆ ಇದೀಗ ಮತ್ತೆ ಜೀವ ಬಂದಿದ್ದು, ಕುಮಾರಕೃಪ ಅತಿಥಿ ಗೃಹದ ಬಳಿ ನಿರ್ಮಿಸಲು ಸಕಲ ಸಿದ್ಧತೆ ನಡೆದಿದೆ.

ನಗರದ ಹೃದಯ ಭಾಗದಲ್ಲಿರುವ ಕುಮಾರಕೃಪ ಅತಿಥಿ ಗೃಹ ಹಿಂಭಾಗ ಮತ್ತು ಕಾವೇರಿ ನಿವಾಸದ ಬಳಿ ಮೂರು ಎಕರೆಗಿಂತ ಹೆಚ್ಚು ಜಾಗದಲ್ಲಿ ಡಿ ಗ್ರೂಪ್‌ ನೌಕರರ ಕ್ವಾರ್ಟರ್ಸ್‌ ಇದೆ. ಆ ಜಾಗದಲ್ಲಿ ಶಾಸಕರ ಕ್ಲಬ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಕ್ವಾರ್ಟರ್ಸ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳಿವೆ. ಆ ಕುಟುಂಬಗಳನ್ನು ಸಮೀಪದ ಕ್ರೆಸೆಂಟ್‌ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಸತಿ ಸಮುಚ್ಚಯಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಈ ಮೊದಲು ಬಾಲಬ್ರೂಯಿ ಅತಿಥಿಗೃಹ, ಸಿಐಡಿ ಕಚೇರಿ ಇರುವ ಕಾರ್ಲಟನ್‌ ಸೇರಿದಂತೆ ಇತರೆ ಸ್ಥಳಗಳಲ್ಲಿ ಶಾಸಕರ ಕ್ಲಬ್‌ ನಿರ್ಮಿಸಲು ಮುಂದಾಗಿ ತೀವ್ರ ವಿರೋಧ ವ್ಯಕ್ತವಾದ ಬಳಿಕ ಅಲ್ಲಿಂದ ಎತ್ತಂಗಡಿ ಮಾಡಲಾಗಿತ್ತು. ಇದೀಗ ಸರ್ಕಾರಿ ಡಿ ಗ್ರೂಪ್‌ ನೌಕರರ ಕ್ವಾರ್ಟರ್ಸ್‌ಗೆ ಬಂದು ನಿಂತಿದೆ. ಶಾಸಕರ ವಿನೋದಕ್ಕಾಗಿ ಕಳೆದ ಹಲವು ವರ್ಷಗಳಿಂದ ಶಾಸಕರ ಕ್ಲಬ್‌ ನಿರ್ಮಿಸುವ ಸರ್ಕಾರದ ಯೋಜನೆಗೆ ಹಲವು ವಿಘ್ನಗಳು ಎದುರಾಗುತ್ತಲೇ ಇದ್ದವು. ಯಾವ ಸ್ಥಳವನ್ನೂ ಅಂತಿಮಗೊಳಿಸಲು ಸಾಧ್ಯವಾಗದೆ ಯೋಜನೆ ನೆನೆಗುದ್ದಿಗೆ ಬಿದ್ದಿತ್ತು. ಇದೀಗ ಶಾಸಕರ ಕ್ಲಬ್‌ ಯೋಜನೆಗೆ ಚಾಲನೆ ನೀಡುವ ಸಂಬಂಧ ಪ್ರಾಥಮಿಕ ಹಂತದ ಕಾರ್ಯಗಳು ಸದ್ದಿಲ್ಲದೆ ಆರಂಭಗೊಂಡಿವೆ. ಈ ನಡುವೆ, ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ಕೂಡ ನಡೆಸಿದೆ ಎಂದು ತಿಳಿದು ಬಂದಿದೆ.

ಡಿ ಗ್ರೂಪ್‌ ನೌಕರರ ಕ್ವಾರ್ಟ್‌ರ್ಸ್‌ ಜಾಗದಲ್ಲಿ ಪರಿಸರವು ಅತ್ಯುತ್ತಮವಾಗಿದ್ದು, ಹಲವು ವರ್ಷಗಳ ಕಾಲದಿಂದ ಇರುವ ಮರಗಳಿಗೂ ಕೊಡಲಿಪೆಟ್ಟು ಬೀಳಲಿದೆ. ಡಿ ಗ್ರೂಪ್‌ ನೌಕರರಾಗಿರುವ ಕಾರಣ ಸರ್ಕಾರದ ಯೋಜನೆಗೆ ವಿರೋಧ ಪಡಿಸುವುದು ಅಲ್ಲಿ ನೆಲೆಸಿರುವವರಿಗೆ ಕಷ್ಟವಾಗಿದೆ. ಯೋಜನೆಗೆ ಯಾವುದೇ ಅಡ್ಡಿ ಆತಂಕಗಳು ಎದುರಾಗುವುದಿಲ್ಲ ಎಂಬುದು ಸಹ ಸರ್ಕಾರದ ಲೆಕ್ಕಾಚಾರ ಎನ್ನಲಾಗಿದೆ.

ಶಾಸಕರ ಕ್ಲಬ್‌ನಲ್ಲಿ ಮನರಂಜನೆ, ಕ್ರೀಡೆ, ಈಜುಕೊಳ, ಅಧ್ಯಯನ ಸೇರಿ ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಶಾಸಕರು, ಸಂಸದರು, ಮಾಜಿ ಶಾಸಕರು, ಸಂಸದರಿಗೆ ಮೀಸಲಾಗಿರುವ ಈ ಪ್ರಸ್ತಾವಿತ ಕ್ಲಬ್‌ಗೆ 10 ಸಾವಿರ ರು. ನೀಡಿ ಸದಸ್ಯತ್ವವನ್ನು ಈಗಾಗಲೇ ಹಲವು ಮಂದಿ ಪಡೆದುಕೊಂಡಿದ್ದಾರೆ. ಎಲ್ಲಾ ರೀತಿಯ ಸೌಕರ್ಯಗಳನ್ನು ಹೊಂದಿರುವ ಶಾಸಕರ ಕ್ಲಬ್‌ ನಿರ್ಮಾಣಕ್ಕೆ ಯಾರ ವಿರೋಧ ಇಲ್ಲ. ಆದರೆ, ಸ್ಥಳ ನಿಗದಿ ಪಡಿಸುವುದೇ ಸರ್ಕಾರಕ್ಕೆ ದೊಡ್ಡ ಸಮಸ್ಯೆಯಾಗಿತ್ತು. ವಿವಾದಾತ್ಮಕವಲ್ಲದ ಜಾಗಕ್ಕೆ ಹುಡುಕಾಟ ನಡೆಸಿದ ಸರ್ಕಾರಕ್ಕೆ ಡಿ ಗ್ರೂಪ್‌ ನೌಕರರ ಕ್ವಾರ್ಟರ್ಸ್‌ ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ.

ವಿರೋಧ: ಬಾಲಬ್ರೂಯಿ ಕೈಬಿಟ್ಟಸರ್ಕಾರ

ಬೆಂಗಳೂರಿನ ಪಾರಂಪರಿಕ ಕಟ್ಟಡ ಬಾಲಬ್ರೂಯಿ ಕಟ್ಟಡವನ್ನು ನೆಲಸಮಗೊಳಿಸಿ ಆ ಸ್ಥಳದಲ್ಲಿ ಶಾಸಕರ ಕ್ಲಬ್‌ ನಿರ್ಮಿಸುವ ಉದ್ದೇಶವನ್ನು ಸರ್ಕಾರ ಮೊದಲು ಹೊಂದಿತ್ತು. ಆದರೆ, ಸರ್ಕಾರದ ಈ ಆಲೋಚನೆಗೆ ತೀವ್ರ ವಿರೋಧ ವ್ಯಕ್ತವಾಯಿತು. ಸಾಮಾಜಿಕ ಕಾರ್ಯಕರ್ತರು, ಹಲವು ಗಣ್ಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟುಚರ್ಚೆಯಾಗಿ ಬಾಲಬ್ರೂಯಿ ಕಟ್ಟಡ ಉಳಿಸಿ ಎಂಬ ಅಭಿಯಾನವೇ ಆರಂಭವಾಗಿತ್ತು. ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿ ಜನಜಾಗೃತಿ ಕಾರ್ಯಕ್ರಮಗಳು ನಡೆದವು. ವ್ಯಾಪಕ ಟೀಕೆ ವ್ಯಕ್ತವಾದ ಬಳಿಕ ರಾಜ್ಯಸರ್ಕಾರವು ಬಾಲಬ್ರೂಯಿಯಲ್ಲಿ ಶಾಸಕರ ಕ್ಲಬ್‌ ನಿರ್ಮಾಣ ಯೋಜನೆ ಕೈಬಿಟ್ಟಿತ್ತು.

ಬಾಲಬ್ರೂಯಿ ಬಳಿಕ ಕೆ.ಆರ್‌.ವೃತ್ತದಲ್ಲಿನ ಸರ್ವೇಕ್ಷಣ ಇಲಾಖೆ ಬಳಿ, ಸಿಐಡಿ ಕಚೇರಿ ಹೊಂದಿರುವ ಕಾರ್ಲಟನ್‌, ಅದರ ಸಮೀಪದ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಕಟ್ಟಡ ಬಳಿಯೂ ಶಾಸಕರ ಕ್ಲಬ್‌ ನಿರ್ಮಿಸುವ ಹೊಂದಿರುವ ಚಿಂತನೆ ನಡೆಸಿತ್ತು. ಆದರೆ ಅಲ್ಲಿಯೂ ವಿರೋಧ ವ್ಯಕ್ತ ಕಾರಣ ಆ ಪ್ರದೇಶಗಳನ್ನು ಕೈಬಿಡಲಾಯಿತು ಎಂದು ತಿಳಿದುಬಂದಿದೆ.

ವರದಿ :  ಪ್ರಭುಸ್ವಾಮಿ ನಟೇಕರ್‌