ಜೆಟ್ ಏರ್‌ವೇಸ್‌'ನ ಲಂಡನ್-ಮುಂಬೈ ವಿಮಾನದ ಕಾಕ್‌'ಪಿಟ್‌'ನೊಳಗೆ ಪೈಲಟ್ ದಂಪತಿ ಜಗಳವಾಡಿ ಪ್ರಯಾಣಿಕರ ಸುರಕ್ಷತೆಯನ್ನು ಅಪಾಯಕ್ಕೆ ಗುರಿಮಾಡಿದ ಘಟನೆ ನಡೆದಿದೆ.

ನವದೆಹಲಿ (ಜ.04): ಜೆಟ್ ಏರ್‌ವೇಸ್‌'ನ ಲಂಡನ್-ಮುಂಬೈ ವಿಮಾನದ ಕಾಕ್‌'ಪಿಟ್‌'ನೊಳಗೆ ಪೈಲಟ್ ದಂಪತಿ ಜಗಳವಾಡಿ ಪ್ರಯಾಣಿಕರ ಸುರಕ್ಷತೆಯನ್ನು ಅಪಾಯಕ್ಕೆ ಗುರಿಮಾಡಿದ ಘಟನೆ ನಡೆದಿದೆ.

ಇದೀಗ ಪೈಲಟ್ ಜೋಡಿಯನ್ನು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ ಸೇವೆಯಿಂದ ಅಮಾನತುಗೊಳಿಸಿದೆ. ಹೊಸ ವರ್ಷದ ದಿನ 324 ಪ್ರಯಾಣಿಕರು, 14 ಸಿಬ್ಬಂದಿ ಹೊತ್ತು ಲಂಡನ್‌'ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವಿಮಾನದ ಕಾಕ್‌'ಪಿಟ್‌'ನಲ್ಲಿ ಸಹ ಪೈಲಟ್‌'ಗಳಾದ ದಂಪತಿ ಜಗಳವಾಡಿದ್ದಾರೆ. ವಿಮಾನ ಹಾರಾಟದಲ್ಲಿರುವಾಗಲೇ ಕಮಾಂಡರ್, ಸಹ ಪೈಲಟ್‌ಗೆ ಕಪಾಳಮೋಕ್ಷ ಮಾಡಿದ್ದ ಎನ್ನಲಾಗಿದೆ. ಅದಕ್ಕೆ ಕಣ್ಣೀರು ಹಾಕಿಕೊಂಡು ಬಂದ ಮಹಿಳೆಯನ್ನು ಸಿಬ್ಬಂದಿ ಸಮಾಧಾನ ಪಡಿಸಿ, ಮರಳಿ ಕಾಕ್‌ಪಿಟ್‌ಗೆ ಕಳುಹಿಸಿದ್ದಾರೆ. ಆದರೆ ಮಹಿಳೆ ಮತ್ತೊಮ್ಮೆ ಹೊರಬಂದಿದ್ದು, ಹಿರಿಯ ವಿಮಾನ ಸಿಬ್ಬಂದಿ ಆಕೆಯನ್ನು ಕಾಕ್‌'ಪಿಟ್‌'ಗೆ ಮರಳುವಂತೆ ಮನವೊಲಿಸಿದ್ದಾರೆ.

ಕಾಕ್‌'ಪಿಟ್‌'ನಲ್ಲಿ ಯಾರೂ ಇಲ್ಲದಿದ್ದರೂ, ಕಮಾಂಡರ್ ಕೂಡ ಹೊರಬಂದಿದ್ದ ಎನ್ನಲಾಗಿದೆ. ಬಳಿಕ ವಿಮಾನ ಸುರಕ್ಷಿತವಾಗಿ ಭೂಸ್ಪರ್ಶವಾಗಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಡಿಜಿಸಿಎ ಮುಖ್ಯಸ್ಥ ಬಿ.ಎಸ್. ಭುಲ್ಲರ್ ಹೇಳಿದ್ದಾರೆ. ದಂಪತಿಯ ನಡುವೆ ಅಪಾರ್ಥ ಮೂಡಿತ್ತು ಎಂದು ಜೆಟ್ ಏರ್‌'ವೇಸ್ ತಿಳಿಸಿದೆ.