ಜೋಡೆತ್ತುಗಳಾಗಿ ಉಳುಮೆ ಮಾಡುವ ಅಣ್ಣ-ತಂಗಿ!
ಜೋಡೆತ್ತುಗಳಾಗಿ ಉಳುಮೆ ಮಾಡುವ ಅಣ್ಣ-ತಂಗಿ! ಕುಟುಂಬ ನಿರ್ವಹಣೆಗಾಗಿ ಅಂಗವೈಕಲ್ಯ ಮೆಟ್ಟಿನಿಂತ ಗಿರಿಧರ ಗುನಗಿ | ಅಣ್ಣ ಎತ್ತಾಗಿ ಎಳೆದರೆ, ತಂಗಿ ನೇಗಿಲು ಹೊಡೆದು ಉಳುಮೆ ಮಾಡುತ್ತಾರೆ
ಕಾರವಾರ (ಜೂ. 01): ಕುಟುಂಬ ನಿರ್ವಹಣೆಗಾಗಿ ಇಲ್ಲಿ ಅಣ್ಣ-ತಂಗಿಯೇ ಜೋಡೆತ್ತು. ಅಂಗವೈಕಲ್ಯಕ್ಕೆ ತುತ್ತಾಗಿರುವ ಅಣ್ಣ ಎತ್ತಾಗಿ ನೇಗಿಲು ಎಳೆದರೆ, ತಂಗಿ ನೇಗಿಲು ಹೊಡೆದು ಉಳುಮೆ ಮಾಡುತ್ತಾರೆ. ಸುಡುವ ಬಿಸಿಲಲ್ಲಿ ಈ ಅಣ್ಣ-ತಂಗಿಯ ಸ್ವಾವಲಂಬಿ ಬದುಕಿಗಾಗಿ ಮಾಡುತ್ತಿರುವ ಹೋರಾಟ ಕಲ್ಲು ಹೃದಯವನ್ನೂ ಕರಗಿಸುವಂತಿದೆ!
ಕಾರವಾರ ನಗರಕ್ಕೆ ಹೊಂದಿಕೊಂಡೇ ಇರುವ ಗುನಗಿವಾಡದ ಗಿರಿಧರ ಗುನಗಿ ಹುಟ್ಟು ಅಂಗವಿಕಲ. ಹಾಗಂತ ಅವರು ಕೈಲಾಗದು ಎಂದು ಮೂಲೆ ಸೇರಿದವರಲ್ಲ. ಸ್ವಾವಲಂಬಿ ಬದುಕಿಗಾಗಿ 8-10 ವರ್ಷಗಳಿಂದ ದೊಡ್ಡ ಹೋರಾಟವನ್ನೇ ಮಾಡುತ್ತಿದ್ದಾರೆ.
ಅಂಗವೈಕಲ್ಯವನ್ನು ಮರೆತು ದೈಹಿಕ, ಮಾನಸಿಕ ನೋವನ್ನು ನುಂಗಿಕೊಂಡು ಸಹೋದರಿ ಸುಜಾತಾ ಜತೆಗೆ ಗದ್ದೆಯಲ್ಲಿ ಬೆವರು ಸುರಿಸುತ್ತ ಜೋಡೆತ್ತಿನಂತೆ ಕೃಷಿ ಮಾಡುವುದನ್ನು ನೋಡಿದರೆ ಯಾರಿಗಾದರೂ ಅಯ್ಯೋ ಅನಿಸಲೇಬೇಕು.
ಗಿರಿಧರ ಅವರಿಗೆ ಕುಟುಂಬದಿಂದ ಬಂದ 20 ಗುಂಟೆ ಭೂಮಿ ಇದೆ. ಈ ತುಂಡು ಭೂಮಿಯಲ್ಲೇ ಕ್ಯಾರೆಟ್, ಅಲಸಂದೆ, ಚವಳಿಕಾಯಿ, ಬದನೆಕಾಯಿ, ಬೆಂಡೆಕಾಯಿ, ಪಾಲಕ್, ಕೆಂಪು ಹರಿವೆ, ನವಿಲುಕೋಸು ಹೀಗೆ ಹತ್ತಾರು ವಿಧದ ತರಕಾರಿ ಬೆಳೆದು ಜೀವನ ನಿರ್ವಹಣೆ ಮಾಡುತ್ತಾರೆ.
ಉಳಿದ ತರಕಾರಿ ಬೆಳೆಯುವ ಇವರು, ಮಳೆಗಾಲದಲ್ಲಿ ಮಾತ್ರ ಬತ್ತ ಬೆಳೆಯುತ್ತಾರೆ. ಬತ್ತ ಬೆಳೆಯುವ ಸಂದರ್ಭದಲ್ಲಿ 4-5 ತಿಂಗಳ ಕಾಲ ಆದಾಯ ಬರದು. ಆ ಸಮಯದಲ್ಲಿ ಅರಬ್ಬೀ ಸಮುದ್ರದಲ್ಲಿ ಎಂಡಿ ಬಲೆ ಬೀಸಿ ಮೀನು ಹಿಡಿಯುತ್ತಾರೆ. ಬತ್ತದ ಬೆಳೆ ಬರುವ ತನಕ ಮೀನುಗಾರಿಕೆಯೇ ಅವರ ಬದುಕಿಗೆ ಆಧಾರ.
ಹುಟ್ಟು ಅಂಗವೈಕಲ್ಯ:
ಗಿರಿಧರ ಗುನಗಿ ಅವರ ಒಂದು ಕಾಲು ಚಿಕ್ಕದಿದೆ. ಬೆರಳುಗಳೆಲ್ಲ ಅಡ್ಡಾದಿಡ್ಡಿಯಾಗಿವೆ. ಮೇಲಾಗಿ ವಿಪರೀತ ಸಂದು ನೋವು. ಶ್ರಮ ಹಾಕಿ ಕೆಲಸ ಮಾಡಿದರೆ ಪ್ರತಿದಿನ ನೋವಿನ ಗುಳಿಗೆ ಸೇವಿಸಬೇಕು. ಗದ್ದೆ ಉಳುಮೆ ಹಂಗಾಮು ಮುಗಿಸಿದ ತರುವಾಯ ನೋವು ನಿವಾರಣೆಗೆ ಚುಚ್ಚುಮದ್ದು ತೆಗೆದುಕೊಳ್ಳಲೇಬೇಕು.
ಅಷ್ಟರಮಟ್ಟಿಗೆ ಇವರ ಬದುಕು ಯಾತನಾಮಯ. ಹಾಗಂತ ಇವರು ಕೈಕಟ್ಟಿಕೂತಿಲ್ಲ, ಕಾಣದ ದೇವರಿಗೆ ನನಗ್ಯಾಕೆ ಈ ಶಿಕ್ಷೆ ಎಂದು ಕೊರಗಿ ಕೂತವರಲ್ಲ. ಬದಲಾಗಿ ತಮ್ಮ ತಾಯಿ-ತಂಗಿಯ ಬದುಕಿಗೆ ಆಧಾರವಾಗಲು ಕೃಷಿಯ ಮೂಲಕ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ.
ತಮ್ಮ ಗದ್ದೆಯಲ್ಲಿ ಬೆಳೆದ ಕಾಯಿಪಲ್ಲೆಯನ್ನೆಲ್ಲ ಇವರ ತಾಯಿ ಲೋಲಿ ಅವರು ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎದುರು ಕಾಜುಬಾಗ ರಸ್ತೆ ಪಕ್ಕದಲ್ಲಿ ಕುಳಿತು ಮಾರಾಟ ಮಾಡುತ್ತಾರೆ.
ಪ್ರತಿದಿನ ಮಾರಾಟಕ್ಕೆ ಎಷ್ಟುಬೇಕೋ ಅಷ್ಟು ಕಾಯಿಪಲ್ಲೆಯನ್ನು ಮಾತ್ರ ತೆಗೆಯುತ್ತಾರೆ. ಹೀಗಾಗಿ ಹಾನಿಯ ಪ್ರಶ್ನೆ ಇಲ್ಲ. ಕಾಯಿಪಲ್ಲೆ ಬೆಳೆದು ಇವರೇ ಮಾರಾಟ ಮಾಡುವುದರಿಂದ ಉಳಿದ ರೈತರಿಗೆ ಹೋಲಿಸಿದರೆ ಸ್ವಲ್ಪ ಕಾಸು ಹೆಚ್ಚು ಸಿಗುತ್ತದೆ ಎನ್ನುವುದಷ್ಟೇ ನೆಮ್ಮದಿ.
ಕುಟುಂಬಕ್ಕೆ ಬದುಕು ಅರ್ಪಣೆ:
ಗಿರಿಧರ ಗುನಗಿಗೆ ಈಗ ವಯಸ್ಸು 41. ಇನ್ನೂ ವಿವಾಹವಾಗಿಲ್ಲ, ವಿವಾಹವಾಗುವ ಯೋಚನೆಯೂ ಅವರಿಗಿಲ್ಲ. ನನ್ನ ತಾಯಿ, ತಂಗಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ಮದುವೆಯಾದರೆ ಮುಂದೆ ತಾನು ಬದಲಾಗಬಹುದು.
ಆಗ ತಾಯಿ, ತಂಗಿ ಪರಿಸ್ಥಿತಿ ಏನಾದೀತೋ ಎಂಬ ಅಂಜಿಕೆ ಅವರಲ್ಲಿದೆ. ಜತೆಗೆ ತಮ್ಮ ದೈಹಿಕ ಸ್ಥಿತಿಯೂ ಚೆನ್ನಾಗಿಲ್ಲ. ಮದುವೆಯಾಗಿ ಕೈಹಿಡಿದ ಹೆಣ್ಣಿಗೆ ಯಾಕೆ ಸಂಕಟ ಕೊಡಬೇಕು ಎಂದು ಗಿರಿಧರ ವೇದಾಂತಿಯಾಗುತ್ತಾರೆ. ಈ ಮೂಲಕ ತಮ್ಮ ಇಡೀ ಬದುಕನ್ನೇ ತಾಯಿ-ತಂಗಿಗಾಗಿ ಅರ್ಪಿಸಿದ್ದಾರೆ.
ಮೊದಲು ಇವರ ಬಳಿ ಜೋಡೆತ್ತುಗಳಿದ್ದವಂತೆ. ಆದರೆ, ಅದಕ್ಕೆ ಮೇವು, ಆಹಾರ ಒದಗಿಸುವುದೇ ಕಷ್ಟವಾದಾಗ ಅವುಗಳನ್ನು ಮಾರಾಟ ಮಾಡಿದ್ದಾರೆ. ಕೈಯಲ್ಲಿ ಕಾಸಿಲ್ಲ, ಹಾಗಂತ ಉಳುಮೆಯನ್ನು ನಿಲ್ಲಿಸುವಂತೆಯೂ ಇರಲಿಲ್ಲ. ಅಂಥ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಅಂಗವೈಕಲ್ಯವಿದ್ದರೂ ಖುದ್ದು ತಾವೇ ಎತ್ತಾಗಿ ನೇಗಿಲು ಎಳೆಯಲು ಶುರು ಮಾಡಿದ್ದಾರೆ. ನಿರಂತರ 8 ವರ್ಷಗಳಿಂದ ನೇಗಿಲು ಎಳೆಯುತ್ತಿದ್ದಾರೆ.
ಸಹಾಯ ಬೇಕಿದೆ:
ಹಲವು ವರ್ಷಗಳಿಂದ ಶ್ರಮಪಟ್ಟು ಕೃಷಿ ಮಾಡುತ್ತಿರುವ ಗಿರಿಧರ ಗುನಗಿ ಅವರ ನೆರವಿಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೆಲಸಮಯದಿಂದ ನೆರವಿಗೆ ಬರುತ್ತಿದ್ದಾರಂತೆ. ಅದರಂತೆ ತೋಟಗಾರಿಕೆ ಇಲಾಖೆಯಿಂದ ಧಾರವಾಡಕ್ಕೆ ತರಬೇತಿಗೂ ಹೋಗಿ ಬಂದಿದ್ದಾರೆ.
ಕೃಷಿಯಿಂದ ಜನ ವಿಮುಖರಾಗುತ್ತಿರುವ ಈ ಹೊತ್ತಿನಲ್ಲಿ ಅಂಗವೈಕಲ್ಯವನ್ನು ಮೆಟ್ಟಿನಿಂತು ತುಂಡುಭೂಮಿಯಲ್ಲೇ ಬೇಸಾಯ ಮಾಡುತ್ತಿರುವ ಗಿರಿಧರ ಅಂಥವರು ಅಪರೂಪದಲ್ಲಿ ಅಪರೂಪ. ಇಂಥ ಕೃಷಿಕರಿಗೆ ಪ್ರೋತ್ಸಾಹ, ನೆರವಿನ ಹಸ್ತದ ಅಗತ್ಯವಿದೆ. ಸರ್ಕಾರ, ಸಂಘ-ಸಂಸ್ಥೆಗಳು ಇಂಥವರ ನೆರವಿಗೆ ಮುಂದೆ ಬರಬೇಕಿದೆ.
- ವಸಂತ್‌ಕುಮಾರ್ ಕತಗಾಲ