ಇಸ್ಲಮಾಬಾದ್[ನ.07]: ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ತನ್ನ ದೇಶಕ್ಕೆ ಹಣಕಾಸಿನ ನೆರವು ಪಡೆಯುವ ಸಲುವಾಗಿ ಪಾಕ್ ಪ್ರಧಾನಿ ಚೀನಾಗೆ ಭೇಟಿ ನೀಡಿದ್ದರು. ಆದರೀಗ ಅವರ ಮೊದಲ ಚೀನಾ ಭೇಟಿ ಮಾತ್ರ ಬೇರೆಯೇ ಕಾರಣಗಳಿಂದ ಸದ್ದು ಮಾಡುತ್ತಿದ್ದು, ಇಮ್ರಾನ್ ಖಾನ್ ಅವರು ಅಪಹಾಸ್ಯಕ್ಕೀಡಾಗಿದ್ದಾರೆಂದರೆ ತಪ್ಪಾಗುವುದಿಲ್ಲ.

ಎಲ್ಲಕ್ಕಿಂತಲೂ ಮೊದಲು ಚೀನಾ ಭೇಟಿಯ ವೇಳೆ ಪಾಕ್ ಪ್ರಧಾನಿ ನೀಡಿದ್ದ ಭಾಷಣವನ್ನು ನೇರ ಪ್ರಸಾರ ಮಾಡಿದ್ದ ಪಾಕಿಸ್ತಾನದ ಸರ್ಕಾರಿ ಚಾನೆಲ್ ಪಿಟಿವಿಯು ಬೀಜಿಂಗ್ ಬದಲಾಗಿ ಬೆಗಿಂಗ್[ಭಿಕ್ಷೆ ಬೇಡುವುದು] ಎಂದು ಬರೆದಿತ್ತು. ಇದು ಟ್ರೋಲ್ ಆಗಿ ಎಲ್ಲವೂ ಶಾಂತವಾಯ್ತು ಎನ್ನುವಷ್ಟರಲ್ಲಿ ಇಮ್ರಾನ್ ಖಾನ್‌ರವರ ಮತ್ತೊಂದು ಫೋಟೋ ಸೋಷಲ್ ಮೀಡಿಯಾಗಳಲ್ಲಿ ವೈರಲ್ ಆಗಿ, ಮತ್ತೆ ಮುಖಭಂಗವುಂಟು ಮಾಡಿದೆ.

ಇಮ್ರಾನ್ ಖಾನ್ ಶಾಂಗಾಯ್‌ನಲ್ಲಿ ಅಯೋಜಿಸಿದ್ದ ಚೀನಾದ ಮೊದಲ ಅಂತರಾಷ್ಟ್ರೀಯ ಇಂಪೋರ್ಟ್‌ ಎಕ್ಸ್‌ಪೋನಲ್ಲಿ ಭಾಗವಹಿಸಿದ್ದರು. ಸರ್ಕಾರವು ಎಕ್ಸ್‌ಪೋನಲ್ಲಿ ಭಾಗವಹಿಸಿದ್ದ ಇಮ್ರಾನ್‌ ಖಾನ್‌ರವರ ಫೋಟೋಗಳನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿತ್ತು. ಇದರಲ್ಲಿ ಇಮ್ರಾನ್‌ ಖಾನ್‌ 'ವಿಡಿಯೋ ಗೇಮ್‌ ಪಾರ್ಲರ್‌'ನಲ್ಲಿ ’ಸ್ಪೇಸ್‌ಶಿಪ್‌’ನಂತೆ ಕಾಣುವ ಮಷೀನ್‌ ಒಂದರಲ್ಲಿ ಕುಳಿತಿರುವಂತೆ ಕಂಡು ಬರುತ್ತದೆ. ಇಮ್ರಾನ್‌ ಖಾನ್‌ರೊಂದಿಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮೊಹಮ್ಮದ್‌ ಖುರೇಶಿ ಸೇರಿದಂತೆ ಇನ್ನಿತರ ಹಿರಿಯರೂ ನಿಂತಿರುವುದು ಕಂಡು ಬರುತ್ತದೆ.

ಕ್ರಿಕೆಟರ್‌ನಿಂದ ನಾಯಕನಾದ ಇಮ್ರಾನ್‌ ಖಾನ್‌ರವರ ಈ ಫೋಟೋವನ್ನು ಹಲವಾರು ಮಂದಿ ಪಾಕಿಸ್ತಾನಿಗರು ಟ್ರೋಲ್ ಮಾಡಿದ್ದಾರೆ. ಇವರಲ್ಲಿ ಕೆಲವರು ಹಾಸ್ಯಾಸ್ಪದವಾಗಿ ಕಮೆಂಟ್ ಮಾಡಿದ್ದಾರೆ. ಕಾಶಿಫ್‌ ಹೆಸರಿನ ವ್ಯಕ್ತಿಯೊಬ್ಬರು 'ನಿಮ್ಮ ಮನೆಗೆ ಹೊಸ ಕಂಪ್ಯೂಟರ್ ಬಂದಾಗ' ಎಂಬ ತಲೆಬರಹ ನೀಡಿ ಇಮ್ರಾನ್ ಖಾನ್‌ರವರ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಮತ್ತೊಬ್ಬ ಯುವಕ ’ಇಮ್ರಾನ್ ಖಾನ್ ವಿಡಿಯೋ ಗೇಮ್‌ ಆಡುತ್ತಿದ್ದು, ಇತರರು ತಮ್ಮ ಸರದಿಗೆ ಕಾಯುತ್ತಿರುವಂತೆ ಕಾಣುತ್ತಿದೆ’ ಎಂದು ಬರೆದಿದ್ದಾರೆ.