ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು [ಸೆ.11]:  ರಾಜ್ಯದಲ್ಲಿ ನಡೆದಿದೆ ಎನ್ನಲಾದ ಟೆಲಿಫೋನ್‌ ಕದ್ದಾಲಿಕೆಯ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಚುರುಕುಗೊಳಿಸಿದ ಬೆನ್ನಲ್ಲೇ ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಇಬ್ಬರು ಡಿಜಿಪಿಗಳು ಹಾಗೂ ಎಡಿಜಿಪಿ ಸೇರಿದಂತೆ 10ಕ್ಕೂ ಅಧಿಕ ಹಿರಿಯ ಐಪಿಎಸ್‌ ಅಧಿಕಾರಿಗಳಿಗೆ ತನಿಖೆಯ ಸಂಕಟ ಎದುರಾಗಿದೆ.

ಸಿಬಿಐ ತನಿಖೆಯಿಂದ ಅಧಿಕಾರಿಗಳು ಸಮಸ್ಯೆಗೆ ಸಿಲುಕಿದ್ದಾರೆ ಎಂದೇನಲ್ಲ. ಆದರೆ, ಪ್ರಕರಣದ ಸಂಬಂಧ ಅವರು ತಾಸುಗಟ್ಟಲೆ ವಿಚಾರಣೆ ಎದುರಿಸಬೇಕಾಗಿ ಬಂದಿದೆ.

ಅದರಲ್ಲೂ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿರುವ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಈಗ ಕದ್ದಾಲಿಕೆಗೆ ಉತ್ತರದಾಯಿಗಳಾಗಬೇಕಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ಬೆಂಗಳೂರು ಪೊಲೀಸ್‌ ವಿಭಾಗದಲ್ಲಿ ಉನ್ನತ ಹುದ್ದೆಗಾಗಿ ಸಂಘರ್ಷಕ್ಕಿಳಿದಿದ್ದ ಇಬ್ಬರು ಹಿರಿಯ ಪೊಲೀಸ್‌ ಅಧಿಕಾರಿಗಳ ನಡುವಿನ ಜಗಳವು ಎಲ್ಲರನ್ನೂ ತೊಂದರೆಗೆ ದೂಡಿದೆ ಎಂದು ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ದ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ.

ಪೋನ್‌ ಕದ್ದಾಲಿಕೆ ಪ್ರಕರಣದ ತನಿಖೆ ವ್ಯಾಪ್ತಿ ಬೆಂಗಳೂರಿನ ಸಿಸಿಬಿಗೆ ಮಾತ್ರ ಸೀಮಿತವಾಗಿಲ್ಲ. ಹಾಗಾಗಿ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಕಾನೂನಿನ್ವಯ ಟೆಲಿಫೋನ್‌ ಕದ್ದಾಲಿಕೆಗೆ ಅವಕಾಶವಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಗುಪ್ತದಳ, ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಹಾಗೂ ಅಪರಾಧ ತನಿಖಾ ದಳ (ಸಿಐಡಿ) ಕೇಂದ್ರಗಳು ಸಹ ತನಿಖೆಗೆ ಒಳಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಿಬಿಐ, ಕಳ್ಳಗಿವಿಗಳ ಪತ್ತೆಗೆ ಆ ಐದು ವಿಭಾಗಗಳಲ್ಲಿ ಸಹ ಶೋಧನೆ ಆರಂಭಿಸಿದ್ದು, ಮೊದಲ ಹಂತದಲ್ಲಿ ಪೊಲೀಸರಿಂದ ದಾಖಲೆಗಳು ಹಾಗೂ ಆಡಿಯೋಗಳನ್ನು ವಶಪಡಿಸಿಕೊಂಡಿದೆ.

ಈ ದಾಖಲೆಗಳ ಪರಿಶೀಲನೆ ಬಳಿಕ ಆಯಾ ವಿಭಾಗದಲ್ಲಿ ಒಂದು ವರ್ಷದ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಮತ್ತು ಕದ್ದಾಲಿಕೆಗೆ ಅನುಮತಿ ನೀಡಿದ ಅಧಿಕಾರಿಗಳ ವಿಚಾರಣೆಗೆ ಸಿಬಿಐ ನಿರ್ಧರಿಸಿದೆ. ತನಿಖೆ ಚುರುಕಾದ ಕೂಡಲೇ ಎಚ್ಚೆತ್ತ ಅಧಿಕಾರಿಗಳು, ತಮ್ಮ ಅವಧಿಯಲ್ಲಿ ನಡೆದಿದ್ದ ಕದ್ದಾಲಿಕೆಗಳ ಕುರಿತು ದಾಖಲೆಗಳ ಕ್ರೋಢೀಕರಣಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಯಾವ್ಯಾವ ಅಧಿಕಾರಿಗಳಿಗೆ ತಲೆಬಿಸಿ:

ಅಪರಾಧ ಮತ್ತು ಭ್ರಷ್ಟಾಚಾರ ಪ್ರಕರಣಗಳ ಆರೋಪಿಗಳು, ಆಂತರಿಕ ಭದ್ರತೆಗೆ ಆಪಾಯಕಾರಿ ವ್ಯಕ್ತಿಗಳು ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಆತಂಕ ಸೃಷ್ಟಿಸಿರುವರ ಮೇಲೆ ನಿಗಾ ವಹಿಸಲು ಪೊಲೀಸರಿಗೆ ಘಾತುಕ ವ್ಯಕ್ತಿಗಳ ಪೋನ್‌ ಕರೆಗಳ ಕದ್ದಾಲಿಕೆಗೆ ಕಾನೂನಿನಲ್ಲಿ ಅವಕಾಶವಿದೆ. ಹೀಗೆ 40 ದಿನಗಳಿಗಿಂತ ಹೆಚ್ಚಿನ ಅವಧಿಗೆ ಫೋನ್‌ ಕದ್ದಾಲಿಕೆ ಮಾಡಬೇಕೆಂದರೆ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ, ಹತ್ತು ದಿನ ಅಥವಾ ಅದಕ್ಕಿಂತ ಕಡಿಮೆ ಅವಧಿಗೆ ಫೋನ್‌ ಕದ್ದಾಲಿಕೆ ಮಾಡುವುದಕ್ಕೆ ಎಸಿಬಿ, ಸಿಸಿಬಿ, ಐಎಸ್‌ಡಿ, ಸಿಐಡಿ ಹಾಗೂ ಗುಪ್ತದಳಕ್ಕೆ ಕಾನೂನಿನ್ವಯ ಅನುಮತಿ ಇದೆ.

ಈ ಕಾನೂನನ್ನು ದುರ್ಬಳಕೆ ಮಾಡಿಕೊಂಡ ಮೈತ್ರಿ ಸರ್ಕಾರವು, ತನ್ನ ರಾಜಕೀಯ ವಿರೋಧಿಗಳ ಪೋನ್‌ಗಳಿಗೆ ಪೊಲೀಸರ ಮೂಲಕ ಕಳ್ಳಗಿವಿ ಇಟ್ಟಿತ್ತು ಎಂಬ ಆರೋಪ ಬಂದಿತ್ತು. ಅದರಂತೆ 2018 ಜೂ.1ರಿಂದ 2019ರ ಜೂನ್‌ 31 ವರೆಗಿನ ಅವಧಿಯಲ್ಲಿ ನಡೆದಿದೆ ಎನ್ನಲಾದ ಕದ್ದಾಲಿಕೆ ಪ್ರಕರಣಗಳ ಕುರಿತು ಸಿಬಿಐ ತನಿಖೆಗೆ ಈಗಿನ ಬಿಜೆಪಿ ಸರ್ಕಾರ ಆದೇಶಿಸಿದೆ. ಪರಿಣಾಮ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ತಲೆಬೇನೆ ಶುರುವಾಗಿದೆ. ಇವರಲ್ಲದೆ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಹಾಗೂ ಸಿಐಡಿ ಡಿಜಿಪಿ ಅವರಿಗೂ ತನಿಖೆಯ ಬಿಸಿ ತಟ್ಟಿದೆ ಎಂದು ತಿಳಿದು ಬಂದಿದೆ.

ಬೆಂಗಳೂರು ಪೊಲೀಸ್‌ ಆಯುಕ್ತರು, ಇಬ್ಬರು ಮಾಜಿ ಆಯುಕ್ತರು, ಗುಪ್ತದಳದ ಮುಖ್ಯಸ್ಥರಾಗಿ ಈಗ ಬೇರೆಡೆ ಕಾರ್ಯನಿರ್ವಹಿಸುತ್ತಿರುವ ಎಡಿಜಿಪಿ, ಐಜಿಪಿ, ಎಸಿಬಿ ಐಜಿಪಿ ಹಾಗೂ ಸಿಐಡಿ ಆರ್ಥಿಕ ವಂಚನೆ ತನಿಖೆ ವಿಭಾಗದ ಐಜಿಪಿ ಹುದ್ದೆಯಲ್ಲಿದ್ದ, ಕಾಂಗ್ರೆಸ್‌ ಶಾಸಕರ ಕುಟುಂಬದ ಸದಸ್ಯರೂ ಆಗಿರುವ ಅಧಿಕಾರಿ ಸೇರಿದಂತೆ ಘಟಾನುಘಟಿ ಐಪಿಎಸ್‌ ಅಧಿಕಾರಿಗಳಿಗೆ ಕದ್ದಾಲಿಕೆ ತನಿಖೆ ಸಮಸ್ಯೆಯೊಡ್ಡಿದೆ. ಅದೇ ರೀತಿ ಹಿಂದಿನ ಸಿಸಿಬಿ ಡಿಸಿಪಿ ಹಾಗೂ ತನಿಖಾ ದಳಗಳ ತಾಂತ್ರಿಕ ವಿಭಾಗದಲ್ಲಿದ್ದ ಪೊಲೀಸರಿಗೂ ಸಿಬಿಐ ತನಿಖೆ ತಲ್ಲಣ ಸೃಷ್ಟಿಸಿದೆ ಎಂದು ಮೂಲಗಳು ಹೇಳುತ್ತಿವೆ.

ವಿಶ್ವಾಸದ ಮೇಲೆ ಸಹಿ ಹಾಕಿದ್ದೇ ತಪ್ಪಾಯ್ತೆ?

ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಪೊಲೀಸರು ನೀಡಿದ ಮಾಹಿತಿ ಮೇರೆಗೆ ಕದ್ದಾಲಿಕೆಗೆ ಅನುಮತಿ ನೀಡುತ್ತಾರೆ. ಈಗ ತಾವು ಪೊಲೀಸರ ಮೇಲಿಟ್ಟಿದ್ದ ವಿಶ್ವಾಸವೇ ಅವರಿಗೆ ಮುಳ್ಳಾಗಿ ಪರಿಣಮಿಸುವಂತಾಗಿದೆ ಎನ್ನಲಾಗುತ್ತಿದೆ. ಸಿಸಿಬಿಯಲ್ಲಿ ನಡೆದಿದೆ ಎನ್ನಲಾದ ಪೋನ್‌ ಕದ್ದಾಲಿಕೆಗೆ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಂದಲೇ ಅನುಮತಿ ಪಡೆಯಲಾಗಿತ್ತು ಎಂದು ತಿಳಿದುಬಂದಿದೆ. ಈ ಬಗ್ಗೆ ದಾಖಲೆಗಳನ್ನು ಸಹ ಗೃಹ ಇಲಾಖೆಯಿಂದ ಸಿಬಿಐ ಕೋರಿದೆ ಎನ್ನಲಾಗಿದೆ.

ಎಸಿಬಿ ಕೇಸಿನ ನೆಪದಲ್ಲಿ ಕದ್ದಾಲಿಕೆ?

ಅನರ್ಹಗೊಂಡಿರುವ ಬೆಂಗಳೂರಿನ ಶಾಸಕರಾದ ಮುನಿರತ್ನ, ಎಸ್‌.ಟಿ.ಸೋಮಶೇಖರ್‌ ಹಾಗೂ ಬೈರತಿ ಬಸವರಾಜು ವಿರುದ್ಧ ಎಸಿಬಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳನ್ನು ಮುಂದಿಟ್ಟು ಶಾಸಕರ ಚಲನವಲನದ ಮೇಲೆ ಎಸಿಬಿ ಕಣ್ಣಿಟ್ಟಿತ್ತು ಎನ್ನಲಾಗಿದೆ.