ಚರಣ್ ರೆಡ್ಡಿ ನೀಡಿರುವ ದೂರಿನ ಪ್ರಕಾರ, ಅಜಯ್ ಹಿಲೋರಿ ಅವರು ಈ ಫೋನ್ ಕದ್ದಾಲಿಕೆಯ ಕೆಲಸವನ್ನು ಬೇಕಾಬಿಟ್ಟಿಯಾಗಿ, ಬೇಜವ್ದಾರಿಯುತವಾಗಿ ನಿರ್ವಹಿಸಿದ್ದಾರೆ. ಫೋನ್ ಟ್ಯಾಪಿಂಗ್'ನ ಆಡಿಯೋ ಕ್ಲಿಪ್'ಗಳನ್ನು ಅಕ್ರಮವಾಗಿ ನಕಲು ಮಾಡಿಸಿಕೊಂಡು ಹೊರಗೆ ಲೀಕ್ ಆಗಲು ಕಾರಣರಾದರು ಎಂದು ಚರಣ್ ರೆಡ್ಡಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಬೆಂಗಳೂರು(ಜೂನ್ 06): ಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಡಿಸಿಪಿ ಅಜಯ್ ಹಿಲೋರಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ನಂಜುಂಡಸ್ವಾಮಿ ಅರ್ಧ ಗಂಟೆಗಳ ಕಾಲ ಅಜಯ್ ಹಿಲೋರಿಯವರ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಬಳಿಕ ಹೊರಬಂದ ಡಿಸಿಪಿ ಅಜಯ್ ಹಿಲೋರಿ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಐಪಿಎಸ್ ಅಧಿಕಾರಿಯೊಬ್ಬರ ಫೋನ್ ಕದ್ದಾಲಿಕೆ ಪ್ರಕರಣ ಕುರಿತ ಸುವರ್ಣನ್ಯೂಸ್ ವರದಿ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದು, ಸತ್ಯ ಶೋಧನೆ ಸಮಿತಿಯಿಂದ ತನಿಖೆ ಮುಂದುವರೆದಿದೆ.
ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಕೆಎಸ್'ಆರ್ ಚರಣ್ ರೆಡ್ಡಿಯವರು ನೀಡಿದ ದೂರಿನ ಮೇಲೆ ಡಿಜಿಪಿ ಆರ್.ಕೆ.ದತ್ತಾ ಅವರು ಮಾರ್ಚ್ ತಿಂಗಳಲ್ಲೇ ಪ್ರಕರಣದ ತನಿಖೆಗೆ ಡಿಜಿಪಿ ಆದೇಶಿಸಿದ್ದರೆನ್ನಲಾಗಿದೆ. ಆದರೆ, ಪ್ರವೀಣ್ ಸೂದ್ ಈ ವಿಚಾರವನ್ನು ಅಲ್ಲಿಯೇ ಬಿಟ್ಟಿದ್ದರು. ಈಗ ಸುವರ್ಣನ್ಯೂಸ್'ನ ವರದಿಯಿಂದ ಎಚ್ಚೆತ್ತುಕೊಂಡ ಡಿಜಿಪಿ ಆರ್.ಕೆ.ದತ್ತಾ ಅವರು ಕೂಡಲೇ ಪ್ರವೀಣ್ ಸೂದ್ ಅವರನ್ನು ಕರೆಸಿ ತತ್'ಕ್ಷಣವೇ ತನಿಖೆ ಚುರುಕುಗೊಳಿಸುವಂತೆ ಸೂಚನೆ ನೀಡಿದ್ದಾರೆ. ಆದರೆ, ಈ ಬಗ್ಗೆ ಮಾಧ್ಯಮಗಳಿಗೆ ಇಬ್ಬರಿಂದಲೂ ಯಾವುದೇ ಮಾಹಿತಿ ಲಭಿಸಿಲ್ಲ. ಫೋನ್ ಕದ್ದಾಲಿಕೆಯ ಮಾಹಿತಿಯನ್ನು ಬೇರೆಯವರಿಗೆ ಹಂಚಿಕೆ ಮಾಡಿದ್ದು ತಪ್ಪು ಎಂದು ಸ್ಪಷ್ಟಪಡಿಸಿರುವ ಪ್ರವೀಣ್ ಸೂದ್, ಮಾಹಿತಿ ಹಂಚಿಕೆಯಾಗಿದೆಯೇ ಇಲ್ಲವೇ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ತಿಳಿಸಿದ್ದಾರೆ.
ಸಂದರ್ಭ ಬಂದರೆ ತನಿಖೆಯನ್ನು ಸಿಐಡಿಗೆ ವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ಸುವರ್ಣನ್ಯೂಸ್'ಗೆ ತಿಳಿಸಿವೆ.
ಚರಣ್ ರೆಡ್ಡಿ ದೂರಿನಲ್ಲೇನಿದೆ?
ಕಾವೇರಿ ನೀರಿನ ವಿವಾದ ಸಂದರ್ಭದಲ್ಲಿ ಕನ್ನಡ ಸಂಘಟನೆಗಳು ಸೇರಿದಂತೆ ಕೆಲ ನಿರ್ದಿಷ್ಟ ವ್ಯಕ್ತಿಗಳ ಮೊಬೈಲ್ ನಂಬರ್'ಗಳನ್ನು ಟ್ಯಾಪ್ ಮಾಡಲು ಆಗಿನ ಡಿಸಿಪಿ ಅಜಯ್ ಹಿಲೋರಿ ನಿರ್ಧರಿಸಿದ್ದರು. ಆದರೆ, ಚರಣ್ ರೆಡ್ಡಿ ನೀಡಿರುವ ದೂರಿನ ಪ್ರಕಾರ, ಅಜಯ್ ಹಿಲೋರಿ ಅವರು ಈ ಫೋನ್ ಕದ್ದಾಲಿಕೆಯ ಕೆಲಸವನ್ನು ಬೇಕಾಬಿಟ್ಟಿಯಾಗಿ, ಬೇಜವ್ದಾರಿಯುತವಾಗಿ ನಿರ್ವಹಿಸಿದ್ದಾರೆ. ಫೋನ್ ಟ್ಯಾಪಿಂಗ್'ನ ಆಡಿಯೋ ಕ್ಲಿಪ್'ಗಳನ್ನು ಅಕ್ರಮವಾಗಿ ನಕಲು ಮಾಡಿಸಿಕೊಂಡು ಹೊರಗೆ ಲೀಕ್ ಆಗಲು ಕಾರಣರಾದರು ಎಂದು ಚರಣ್ ರೆಡ್ಡಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಕರವೇ ಕಾರ್ಯಕರ್ತ ಕನ್ನಡ ಪ್ರಕಾಶ್ ಎಂಬುವವರ ಫೋನ್ ಕದ್ದಾಲಿಕೆಯ ಆಡಿಯೋದಲ್ಲಿರುವ ವಿವರವು ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿ ಕನ್ನಡ ಸಂಘಟನೆಗಳ ಮಾನ ಹರಾಜಿಗೆ ಕಾರಣವಾಗಿತ್ತು. ಇಂಥ ಬೇಜವಾಬ್ದಾರಿ ಕೆಲಸ ಮಾಡಿದ ಆಗಿನ ಡಿಸಿಪಿ ಅಜಯ್ ಹಿಲೋರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚರಣ್ ರೆಡ್ಡಿ ಡಿಜಿಪಿಗೆ ನೀಡಿದ ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.
