ಬೆಂಗಳೂರು [ಜೂ.20] : ರಾಜ್ಯ ಆಹಾರ ನಿಗಮದಲ್ಲಿ ಕಳೆದ ಎರಡು ದಶಕಗಳಿಂದ ಲೋಡಿಂಗ್ ಮತ್ತು ಅನ್‌ ಲೋಡಿಂಗ್ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಎರಡು ಸಾವಿರಕ್ಕೂ ಅಧಿಕ ಮಂದಿ ಹಮಾಲಿಗಳಿಗೆ ನಿಗಮದ ಸಾರಿಗೆ ಗುತ್ತಿಗೆದಾರರು ಭವಿಷ್ಯ ನಿಧಿ (ಪಿಎಫ್) ವಂತಿಗೆ ಪಾವತಿಸದೆ ಬರೋಬ್ಬರಿ  10.72 ಕೋಟಿ ರು. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಹಮಾಲಿ ಕಾರ್ಮಿಕರು ಈ ಕುರಿತು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸಮಸ್ಯೆ ಇತ್ಯರ್ಥಪಡಿಸಬೇಕಾದ ಅಧಿಕಾರಿಗಳು ಈ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ.

ರಾಜ್ಯದಲ್ಲಿ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (ಕೆಎಫ್ ಸಿಎಸ್‌ಪಿ)ದ 191 ಗೋದಾಮುಗಳು ಇವೆ. ಈ ಗೋದಾಮುಗಳಲ್ಲಿ ಲೋಡ್ ಮತ್ತು ಅನ್‌ಲೋಡ್ ಮಾಡುವ ಸುಮಾರು 2500 ಹಮಾಲಿಗಳು  ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ ಉಳಿದ ಜಿಲ್ಲೆಗಳ ಗೋದಾಮುಗಳಲ್ಲಿ ಕೆಲಸ ಮಾಡುತ್ತಿರುವ 2416 ಕಾರ್ಮಿಕರ ಭವಿಷ್ಯ ನಿಧಿಯ ವಂತಿಗೆಯನ್ನು 2015 ರಿಂದ ಇದುವರೆಗೂ ಗುತ್ತಿಗೆದಾರರು ಪಾವತಿಸಿಲ್ಲ.

ಪ್ರತಿ ಹಮಾಲಿ ಪಡೆಯುವ ಮಾಸಿಕ ವರಮಾನದಲ್ಲಿ ತಿಂಗಳಿಗೆ ಸರಾಸರಿ 925 ರು.ಗಳಂತೆ ಭವಿಷ್ಯ ನಿಧಿಗೆ ಪಾವತಿಸಬೇಕು ಎಂದು ಆಹಾರ ಇಲಾಖೆ ಆಯುಕ್ತರು 2015 ರಲ್ಲೇ ಆದೇಶ ಮಾಡಿದ್ದರು. ಈ ಪ್ರಕಾರ ಬೆಂಗಳೂರು ನಗರ ಹೊರತುಪಡಿಸಿ ಉಳಿದ ಗೋದಾಮುಗಳಲ್ಲಿ ಲೋಡ್ ಮತ್ತು ಅನ್‌ಲೋಡ್ ಮಾಡುವ 2416  ಮಂದಿ ಹಮಾಲಿಗಳಿಗೆ ವರ್ಷಕ್ಕೆ 2.68 ಕೋಟಿ ರು.ಗಳನ್ನು ಸಾರಿಗೆ ಗುತ್ತಿಗೆದಾರರು ಪಿಎಫ್ ವಂತಿಗೆ ಕಟ್ಟಬೇಕು. ಒಟ್ಟಾರೆ ನಾಲ್ಕು ವರ್ಷದಲ್ಲಿ ಅಂದಾಜು 10,72,70,400 ರು. ಕಟ್ಟಬೇಕಾಗಿತ್ತು. 

ಆದರೆ ಇದುವರೆಗೂ ಸಾರಿಗೆ  ಗುತ್ತಿಗೆದಾರರು ಬಿಡಿಗಾಸು ಕೂಡ ಕಟ್ಟಿಲ್ಲ. ಈ ಬಗ್ಗೆ ಆಹಾರ ಇಲಾಖೆ ಸಚಿವರು, ಆಯುಕ್ತರು, ನಿರ್ದೇಶಕರು ಹೀಗೆ ಯಾರಿಗೆ ದೂರು ನೀಡಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆಎಫ್‌ಸಿಎಸ್‌ಸಿ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕಾರ್ಮಿಕರ ಯೂನಿಯನ್ ಅಧ್ಯಕ್ಷ ಜಿ.ಆರ್. ಶಿವಶಂಕರ್ ಹೇಳುತ್ತಾರೆ.

ಹಮಾಲಿಗಳದ್ದು ಅತಂತ್ರ ಜೀವನ: 1972 ರಿಂದಲೂ ಹಮಾಲಿಗಳಾಗಿ ಈ ಗೋದಾಮುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಯಾರೂ ಇಲ್ಲಿ ಕಾಯಂ ನೌಕರರಲ್ಲ. ವಿಶೇಷವೆಂದರೆ ಇವರನ್ನು ನಮ್ಮ ಸಂಸ್ಥೆಯ ನೌಕರರು ಎಂದು ಒಪ್ಪಿಕೊಳ್ಳಲು ಕೆಎಫ್‌ಸಿಎಸ್‌ಸಿ ಅಥವಾ ಭಾರತ ಆಹಾರ ನಿಗಮ ಎರಡೂ ಸಂಸ್ಥೆಗಳು ತಯಾರಿಲ್ಲ. ಹತ್ತಾರು ವರ್ಷಗಳಿಂದ ಭಾರತ ಆಹಾರ ನಿಗಮದಿಂದ ಆಹಾರ ಧಾನ್ಯಗಳನ್ನು ಲೋಡ್ ಮಾಡಿಕೊಂಡು ಕೆಎಫ್‌ಸಿಎಸ್‌ಪಿ ಗೋದಾಮುಗಳಲ್ಲಿ ಅನ್‌ಲೋಡ್ ಮಾಡುವ ಕೆಲಸವನ್ನು ಇವರು ನಿರ್ವಹಿಸುತ್ತಿದ್ದಾರೆ. ಆದರೂ ಅವರು ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಎರಡೂ ಸಂಸ್ಥೆಗಳ ಅಧಿಕಾರಿಗಳು ಘೋಷಿಸಿದ್ದು, ಹಮಾಲಿಗಳ ಜೀವನ ಅತಂತ್ರವಾಗಿದೆ ಎನ್ನುತ್ತಾರೆ ಯೂನಿಯನ್ ಕಾರ್ಯದರ್ಶಿ ಅಹಮದ್.

ಸರ್ಕಾರದ ಆದೇಶಕ್ಕೂ ಕಿಮ್ಮತ್ತಿಲ್ಲ: ರಾಜ್ಯದ 191 ಕೆಎಫ್‌ಸಿಎಸ್‌ಸಿ ಗೋದಾಮುಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಬೇಡಿಕೆ ಈಡೇರಿಸುವ ಕುರಿತು 2016 ರ ಜುಲೈ 2 ರಂದು ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ಈಗಿನ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಸಮಿತಿಯೊಂದನ್ನು ರಚನೆ ಮಾಡಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಕೆಎಫ್‌ಸಿಎಸ್‌ಸಿ ಗೋದಾಮಿನಲ್ಲಿ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸ ಮಾಡುವ ಕಾರ್ಮಿರನ್ನು 1948 ರ ಕನಿಷ್ಠ ವೇತನ ಕಾಯ್ದೆಯಡಿ ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು.

ಎಲ್ಲ ಗೋದಾಮುಗಳ ವ್ಯವಸ್ಥಾಪಕರು ಕಾರ್ಮಿಕರ ದಾಖಲೆ ನಿರ್ವಹಿಸಬೇಕು. ಕಾರ್ಮಿಕರ ಗುರುತಿನ ಚೀಟಿ, ಕೆಎಫ್‌ಸಿಎಸ್‌ಸಿಯವರು ಸಾರಿಗೆ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡ ವರ್ಷದಿಂದ ಇದುವರೆಗೂ ಕಾರ್ಮಿಕರಿಗೆ ಇಪಿಎಫ್ ಅಡಿ ಪಿಎಫ್, ಇಎಸ್‌ಐ ಕಾಯ್ದೆಯಡಿ ಇಎಸ್‌ಐ ವಂತಿಗೆ ಪಾವತಿಸಬೇಕು. ಗುತ್ತಿಗೆದಾರರು ನೌಕರರಿಗೆ ಉದ್ಯೋಗ ಪತ್ರ, ವೇತನದ ಚೀಟಿ ನೀಡಬೇಕು. ಅಪಘಾತವಾದರೆ ಪರಿಹಾರ ನೀಡಬೇಕು ಮತ್ತು ರಜಾ ಸೌಲಭ್ಯ ನೀಡಬೇಕು ಎಂಬ ನಿಯಮಗಳನ್ನು ರೂಪಿಸಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು. ಆದರೆ ಇದುವರೆಗೂ ಯಾವುದೂ ಜಾರಿಗೆ ಬಂದಿಲ್ಲ.