ನವದೆಹಲಿ[ಡಿ.09]: ತೈಲ ಉತ್ಪಾದನೆಯನ್ನು ಪ್ರತಿ ನಿತ್ಯ 12 ಲಕ್ಷ ಬ್ಯಾರೆಲ್‌ನಷ್ಟು ಕಡಿತಗೊಳಿಸಲು 14 ತೈಲ ರಫ್ತು ರಾಷ್ಟ್ರಗಳ ಕೂಟ ‘ಒಪೆಕ್’ ಒಮ್ಮತಕ್ಕೆ ಬಂದಿದೆ. ಕಳೆದ ಹಲವು ತಿಂಗಳುಗಳಿಂದ ಏರಿಕೆಯಾಗಿದ್ದ ತೈಲ ಬೆಲೆ ಈಚೆಗೆ ಇಳಿಯುತ್ತಿರುವುದರಿಂದ ನಿಟ್ಟುಸಿರು ಬಿಡುತ್ತಿರುವ ಕೇಂದ್ರ ಸರ್ಕಾರಕ್ಕೆ ಒಪೆಕ್ ನಿರ್ಧಾರ ಚಿಂತೆಗೆ ಕಾರಣವಾಗುವ ಸಂಭವವಿದೆ. ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರ ಅದರಲ್ಲೂ ವಿಶೇಷವಾಗಿ ಬಿಜೆಪಿಗೆ ತೈಲಬೆಲೆ ಹೆಚ್ಚಳದ
ಬಿಸಿ ತಟ್ಟುವ ಸಾಧ್ಯತೆಯೂ ಇದೆ.

ಭಾರತ ತನ್ನ ಬಳಕೆಗೆ ಬೇಕಾದ ತೈಲದ ಪೈಕಿ ಶೇ.80 ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಆ ಪೈಕಿ ಶೇ.82ರಷ್ಟು ಕಚ್ಚಾ ತೈಲ, ಶೇ.75ರಷ್ಟು ನೈಸರ್ಗಿಕ ಅನಿಲ ಹಾಗೂ ಶೇ.97ರಷ್ಟು ಅಡುಗೆ ಅನಿಲ ಬರುವುದು ಒಪೆಕ್ ದೇಶಗಳಿಂದಲೇ. ಒಪೆಕ್ ಕಡಿತಗೊಳಿಸಲು ಉದ್ದೇಶಿಸಿರುವ 12 ಲಕ್ಷ ಬ್ಯಾರೆಲ್ ಭಾರತದ ಒಂದು ದಿನದ ಅಗತ್ಯದ ಶೇ.25ಕ್ಕೆ ಭಾಗಕ್ಕೆ ಸಮ. ಉತ್ಪಾದನೆಯನ್ನು ಒಪೆಕ್ ಕಡಿತಗೊಳಿಸಿದರೆ ಚುನಾವಣೆ ಸಂದರ್ಭದಲ್ಲಿ ಸರ್ಕಾರಕ್ಕೆ ಬೆಲೆ ಏರಿಕೆ ಇಕ್ಕಟ್ಟು
ಎದುರಾಗುವ ಸಂಭವ ಇದೆ ಎಂದು ಹೇಳಲಾಗುತ್ತಿದೆ.

ಆದರೆ ಅಮೆರಿಕ ತೈಲ ರಫ್ತು ಹೆಚ್ಚಳ ಮಾಡಿರುವುದು ಸರ್ಕಾರಕ್ಕೆ ವರವಾಗುವ ಸಾಧ್ಯತೆ ಇದೆ. ಒಪೆಕ್ ಕೂಟದಲ್ಲಿ ಇಲ್ಲದ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಗಮನಾರ್ಹ ಪ್ರಭಾವ ಹೊಂದಿರುವ ರಷ್ಯಾ ಒಪೆಕ್ ನಿಯಮವನ್ನು ಯಾವ ರೀತಿ ನೋಡುತ್ತದೆ ಎಂಬುದು ಮುಖ್ಯವಾಗುತ್ತದೆ.