ಬೆಂಗಳೂರು (ಸೆ. 08): ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಸೆ.10 ರಂದು ಕಾಂಗ್ರೆಸ್ ಪಕ್ಷ ಕರೆ ಕೊಟ್ಟಿರುವ ಭಾರತ್ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಸೆ . 10 ರಂದು ರಾಜ್ಯದಲ್ಲಿಯೂ ಭಾರತ್ ಬಂದ್ ಬಿಸಿ ತಟ್ಟುವ ಸಾಧ್ಯತೆಯಿದೆ.   

ಎಐಟಿಯುಸಿ ನೇತೃತ್ವದ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕ್ಸ್ ಫೆಡರೇಷನ್‌, ಓಲಾ, ಉಬರ್, ಟ್ಯಾಕ್ಸಿ ಮಾಲಿಕರ ಮತ್ತು ಚಾಲಕ ಸಂಘ, ಕೆಲ ಆಟೋ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ. ಹಾಗಾಗಿ ಕೆಎಸ್‌ಆರ್‌ಟಿಸಿ ರಸ್ತೆಗಿಳಿಯುವುದು ಬಹುತೇಕ ಅನುಮಾನ. ಕಚೇರಿಗೆ ಸಾರ್ವಜನಿಕ ಸಾರಿಗೆಯನ್ನು ನಂಬಿಕೊಂಡವರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. 

ಲಾರಿ ಮಾಲೀಕರ ಸಂಘ , ಬೆಂಗಳೂರು ಪ್ರವಾಸಿ ವಾಹನಗಳ ಮಾಲೀಕ ಸಂಘ ಬಂದ್ ಗೆ ಬೆಂಬಲ ನೀಡಿಲ್ಲ.  ಹೂವು, ಹಣ್ಣಿನ ವ್ಯಾಪಾರದ ಮೇಲೆ ಬಂದ್ ಎಫೆಕ್ಟ್ ಕಡಿಮೆ ಇದೆ.  ಸೋಮವಾರ ಶಾಲಾ ಕಾಲೇಜುಗಳು ಎಂದಿನಂತೆ ನಡೆಯುತ್ತದೆಯಾ? ಇಲ್ಲವಾ? ಎಂಬುದು ಇನ್ನೂ ನಿರ್ಧಾರವಾಗಿಲ್ಲ. 

ಒಂದೇ ಸಮನೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ. ಜನಸಾಮಾನ್ಯರಿಗೆ ಇದರಿಂದ ಹೊರೆಯಾಗುತ್ತಿದೆ. ಇದನ್ನು ಖಂಡಿಸಿ ಕಾಂಗ್ರೆಸ್ ಸೆ. 10 ಕ್ಕೆ ಭಾರತ್ ಬಂದ್ ಗೆ ಕರೆ ನೀಡಿದೆ. ಈ ಪ್ರತಿಭಟನೆಗೆ ಎಡಪಕ್ಷಗಳು ಸೇರಿದಂತೆ ಎನ್ ಡಿಎ ವಿರೋಧಿಗಳು ಬೆಂಬಲ ಸೂಚಿಸಿದ್ದಾರೆ. 

-ಸಾಂದರ್ಭಿಕ ಚಿತ್ರ