ಬೆಂಗಳೂರಿಗರಿಗೆ ಸಂತಸದ ಸುದ್ದಿವೊಂದಿದೆ. ಇನ್ನು ಮುಂದೆ ಪೆಟ್ರೋಲ್‌ ಬಂಕ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಪೆಟ್ರೋಲ್‌ಗೆ ಕಾಯುವ ಅಗತ್ಯವಿಲ್ಲ. ಒಂದು ಫೋನ್‌ ಕರೆ ಮಾಡಿದರೆ ಪೆಟ್ರೋಲ್‌ ಟ್ಯಾಂಕರೇ ನಿಮ್ಮ ಮನೆ ಬಳಿ ಬರಲಿದೆ.

ಬೆಂಗಳೂರು(ಜೂ.21): ಬೆಂಗಳೂರಿಗರಿಗೆ ಸಂತಸದ ಸುದ್ದಿವೊಂದಿದೆ. ಇನ್ನು ಮುಂದೆ ಪೆಟ್ರೋಲ್‌ ಬಂಕ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಪೆಟ್ರೋಲ್‌ಗೆ ಕಾಯುವ ಅಗತ್ಯವಿಲ್ಲ. ಒಂದು ಫೋನ್‌ ಕರೆ ಮಾಡಿದರೆ ಪೆಟ್ರೋಲ್‌ ಟ್ಯಾಂಕರೇ ನಿಮ್ಮ ಮನೆ ಬಳಿ ಬರಲಿದೆ.

ಹೌದು, ‘ಮೈ ಪೆಟ್ರೋಲ್‌ ಪಂಪ್‌ ಡಾಟ್‌ ಕಾಮ್‌' ಹೆಸರಿನ ವೆಬ್‌ಸೈಟ್‌ವೊಂದು ನಗರದಲ್ಲಿ ಈ ರೀತಿಯ ವಿನೂತನ ಸೇವೆ ಆರಂಭಿಸಿದೆ. ಒಂದು ಕರೆ ಮಾಡಿದರೆ ಸಾಕು ಮನೆ ಬಾಗಿಲಿಗೆ ಪೆಟ್ರೋಲ್‌ ತಂದು ಕೊಡುವ ವ್ಯವಸ್ಥೆ ಮಾಡಲಾಗಿದೆ. ಕಳೆದ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರ ಮನೆ ಬಾಗಿಲಿಗೇ ಪೆಟ್ರೋಲ್‌, ಡೀಸೆಲ್‌ ಪೂರೈಸುವ ಯೋಜನೆಯೊಂದನ್ನು ಘೋಷಿಸಿದ್ದು ಅದಿನ್ನೂ ಜಾರಿಗೆ ಬಂದಿಲ್ಲ. ಆಷ್ಟರಲ್ಲಾಗಲೇ ರಾಜಧಾನಿಯಲ್ಲಿ ಇಂತಹ ಸೇವೆ ಪ್ರಾರಂಭವಾಗಿದೆ.

ಮೊದಲ ಹಂತದಲ್ಲಿ ಬೆಂಗಳೂರಿನ ಕೆಲವೇ ಪ್ರದೇಶಗಳಲ್ಲಿ ಮನೆ, ಮನೆಗೇ ಪೆಟ್ರೋಲ್‌, ಡೀಸೆಲ್‌ ತಂದುಕೊಡುವ ಯೋಜನೆ ಜಾರಿಗೊಳಿಸಲಾಗಿದೆ. ಇದಕ್ಕೆ ಕನಿಷ್ಠ ಶುಲ್ಕ ಕೂಡ ಉಂಟು
ಆದರೆ, ಕೆಲ ಪೆಟ್ರೋಲ್‌ ಬಂಕ್‌ ಮಾಲೀಕರು, ಇದು ಕಾನೂನುಬಾಹಿರವಾಗಿ ನಡೆಯುತ್ತಿರುವ ದಂಧೆ ಎಂದು ಆರೋಪಿಸಿದ್ದಾರೆ. ನಗರದ ಹಲವೆಡೆ ಈ ರೀತಿಯ ದಂಧೆ ನಡೆಯುತ್ತಿದ್ದು, ಗ್ರಾಹಕರಿಗೆ ಕಲಬೆರೆಕೆ ಪೆಟ್ರೋಲ್‌- ಡೀಸೆಲ್‌ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸಲಾಗುತ್ತಿದೆ. ಈ ರೀತಿ ವಾಹನದಲ್ಲಿ ಪೆಟ್ರೋಲ್‌-ಡೀಸೆಲ್‌ ಸಾಗಾಣೆ ಮಾಡಿ ಮಾರಾಟ ಮಾಡಲು ಸಂಬಂಧಪಟ್ಟಇಲಾಖೆಗಳಿಂದ ಅನುಮತಿ ಪಡೆಯಬೇಕು. ಆದರೆ, ಯಾವುದೇ ಪರವಾನಗಿ ಪಡೆಯದೇ ಅಕ್ರಮವಾಗಿ ಪೆಟ್ರೋಲ್‌- ಡೀಸೆಲ್‌ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು.

ನಗರದಲ್ಲಿ ಈ ಅಕ್ರಮ ದಂಧೆಯ ದೊಡ್ಡ ಜಾಲವೇ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಹಕರನ್ನು ವಂಚಿಸುತ್ತಿವೆ. ಇದು ಶುದ್ಧ ಪೆಟ್ರೋಲ್‌-ಡೀಸೆಲ್‌ ಎಂಬುದಕ್ಕೆ ಖಾತರಿ ಇಲ್ಲ. ದಂಧೆಕೋರರು ಪೆಟ್ರೋಲ್‌ಗೆ ಸೀಮೆಎಣ್ಣೆ ಬೆರೆಸಿಯೂ ಮಾರಾಟ ಮಾಡುತ್ತಿದ್ದಾರೆ. ಎಚ್‌ಎಸ್‌ಆರ್‌ ಲೇಔಟ್‌, ಸರ್ಜಾಪುರ ರಸ್ತೆ, ಮೈಸೂರು ರಸ್ತೆ, ಯಶವಂತಪುರ, ಹಳೇ ವಿಮಾನ ನಿಲ್ದಾಣ ರಸ್ತೆ ಸೇರಿದಂತೆ ನಗರದ ವಿವಿಧೆಡೆ ಈ ದಂಧೆ ವ್ಯಾಪಕವಾಗಿದೆ. ಈ ಕುರಿತು ಸಂಬಂಧಪಟ್ಟಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೆಟ್ರೋಲ್‌ ಬಂಕ್‌ ಮಾಲೀಕರೊಬ್ಬರು ಆರೋಪಿಸಿದರು.

ದಂಧೆಕೋರರು ಮನೆ ಬಾಗಲಿಗೆ ಸೇವೆ ನೀಡುತ್ತೇವೆ ಎಂದು ಹೇಳಿಕೊಂಡು ಕಲಬೆರೆಕೆ ಪೆಟ್ರೋಲ್‌-ಡೀಸೆಲ್‌ ಮಾರಾಟ ಮಾಡಿ 1 ಲೀಟರ್‌ಗೆ ಎರಡು-ಮೂರುಪಟ್ಟು ಹಣ ಪಡೆಯುತ್ತಿದ್ದಾರೆ. ನಗರದ ವಿವಿಧೆಡೆ ಹಲವು ಪೆಟ್ರೋಲ್‌ ಬಂಕ್‌ ಹೊಂದಿರುವವರು ಈ ದಂಧೆಕೋರರ ಜತೆಗೆ ಕೈ ಜೋಡಿಸಿರುವ ಸಾಧ್ಯತೆ ಇದೆ. ನಗರದ ಹೊರವಲಯದಲ್ಲಿ ದಂಧೆ ಜೋರಾಗಿದೆ. ಇದನ್ನು ಯಾರೊಬ್ಬರು ಪ್ರಶ್ನಿಸುತ್ತಿಲ್ಲ. ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ. ಇದನ್ನು ಹೀಗೆ ಬಿಟ್ಟರೆ ರಾಜ್ಯಾದ್ಯಂತ ಈ ಜಾಲ ವ್ಯಾಪಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸೇವೆ ನೀಡುತ್ತಿರೋದು ಯಾರು?

ಮೈ ಪೆಟ್ರೋಲ್‌ ಪಂಪ್‌ ಡಾಟ್‌ ಕಾಮ್‌

ಎಲ್ಲೆಲ್ಲಿ ಹೋಮ್‌ ಡೆಲಿವರಿ?

ಎಚ್‌ಎಸ್‌ಆರ್‌ ಲೇಔಟ್‌, ಸರ್ಜಾಪುರ ರಸ್ತೆ, ಮೈಸೂರು ರಸ್ತೆ, ಯಶವಂತಪುರ, ಹಳೇ ವಿಮಾನ ನಿಲ್ದಾಣ ರಸ್ತೆ ಸೇರಿದಂತೆ ನಗರದ ಹಲವೆಡೆ ಸೇವೆ