ಮಕ್ಕಳು ದೊಡ್ಡ-ದೊಡ್ಡ ಬಂಗಲೆಯಲ್ಲಿ ಐಶಾರಾಮಿ ಬದುಕು ಸಾಗಿಸ್ತಿದ್ರೆ, ಜನ್ಮ ನೀಡಿದೋರು ವೃದ್ಧಾಶ್ರಮಗಳಲ್ಲಿ ತುತ್ತು ಅನ್ನಕ್ಕೂ ಹೋರಾಡ್ತಿರೋ ಎಷ್ಟೋ ನಿದರ್ಶನಗಳನ್ನ ನೋಡಿದ್ದೇವೆ. ಆದ್ರೆ, ಇಲ್ಲೊಬ್ಬ ತನ್ನ ತಂದೆ-ತಾಯಿಯನ್ನ ಕಳೆದುಕೊಂಡು 36 ವರ್ಷ ಕಳೆದಿದೆ. ಅವರು ಎಲ್ಲಿದ್ದಾರೋ ಗೊತ್ತಿಲ್ಲ. ಆದ್ರೆ, ಅವರ ಹುಡುಕಾಟವನ್ನು ಮಾತ್ರ ನಿಲ್ಲಿಸಿಲ್ಲ. ಹೆತ್ತವರಿಗಾಗಿ ಬೀದಿ ಬೀದಿಯಲ್ಲಿ ಅಲೆಯುತ್ತಿರುವ ವ್ಯಕ್ತಿಯೊಬ್ಬನ ಕರುಣಾಜನಕ ಸ್ಟೋರಿ ಇಲ್ಲಿದೆ ನೋಡಿ.

ಚಿಕ್ಕಮಗಳೂರು(ಅ.27): ಅಬ್ಬಾಸ್, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ನಿವಾಸಿ. ಐದು ವರ್ಷದವನಿದ್ದಾಗ ಅಚಾನಕ್ಕಾಗಿ ಮನೆಯಿಂದ ಹೊರ ಬಂದ ಅಬ್ಬಾಸ್. ಈಗ ಹೆತ್ತವರಿಗಾಗಿ ಊರೂರು ಅಲೆಯುತ್ತಿದ್ದಾರೆ. ಕಂಡ ಕಂಡಲ್ಲಿ ಕರಪತ್ರ ಅಂಟಿಸಿ ಪೋಷಕರ ಹುಡುಕಾಟಕ್ಕೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಅಬ್ಬಾಸ್ ಐದು ವರ್ಷದವನಿದ್ದಾಗ ಕುರಿ ಜೊತೆ ಆಟವಾಡುತ್ತಿದ್ದಾಗ ಅದಕ್ಕೆ ಹೊಡೆದಿದ್ದಾರಂತೆ. ಕುರಿ ಸತ್ತೇ ಹೋಗಿದೆ. ಅಪ್ಪ-ಅಮ್ಮ ಬೈಯ್ಯೋದು ಗ್ಯಾರಂಟಿ ಎಂದುಕೊಂಡ ಅಬ್ಬಾಸ್ ಭಯದಲ್ಲಿ ಮನೆ ಬಿಟ್ಟು ಅಜ್ಜಿಮನೆಗೆಂದು ಬಸ್ ಹತ್ತಿದ್ದಾರಂತೆ ಆದ್ರೆ ಬಸ್ ಹೋಗಿದ್ದೇ ಬೇರೆ ಕಡೆ.

ದಿಕ್ಕು ತೋಚದೆ ಬಸ್​ ನಿಲ್ದಾಣದಲ್ಲಿ ಅಳುತ್ತಾ ಕೂತಿದ್ದ ಇವರನ್ನು ಬಸ್ ಡ್ರೈವರ್ ಸಿಖಂದರ್ ಎಂಬವರು ಮನೆಗೆ ಕರೆದೊಯ್ದು ಸಾಕಿ, ದೊಡ್ಡವರನ್ನಾಗಿಸಿ ಮದುವೆಯನ್ನೂ ಮಾಡಿದ್ದಾರೆ. ನಾಲ್ಕು ಮಕ್ಕಳು ಕೂಡ ಇದ್ದಾರೆ. ಸುಖವಾಗಿ ಜೀವನ ಸಾಗಿಸುತ್ತಿದ್ದರೂ ಅಬ್ಬಾಸ್​ಗೆ ಹೆತ್ತವರ ನೆನಪು ಬಿಟ್ಟಿಲ್ಲ. ಹೆತ್ತವರಿಗಾಗಿ ಹುಡುಕಾಡುತ್ತಲೇ ಇದ್ದಾರೆ.

ಇನ್ನೂ ಅಬ್ಬಾಸ್ ಊರು ಬಿಟ್ಟಾಗ ಚಿಕ್ಕವನಿದ್ದ ಕಾರಣ ಊರ ಬಗ್ಗೆ ಏನೇನೂ ಗೊತ್ತಿಲ್ಲ. ಬಯಲುಸೀಮೆ ಭಾಗದ ನೆನೆಪು, ತನಗೊಬ್ಬಳು ಸೋದರಿ ಇದ್ದಳು ಅನ್ನೋ ನೆನಪಿದೆ. ಅದೇನೆ ಇರಲಿ 36 ವರ್ಷಗಳಿಂದ ಹಗಲಿರುಳು ಹೆತ್ತೋರ ಹುಡುಕಾಟದಲ್ಲಿರುವ ಅಬ್ಬಾಸ್ ಕುಟುಂಬ ಪ್ರೇಮ ನಿಜಕ್ಕೂ ಬೇಶ್ ಎನ್ನಿಸುವಂತಿದೆ.