ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್'ಗೆ ಅನುಮತಿ ನೀಡಲು ಕೋರಿ ರಾಜ್ಯಪಾಲರಿಗೆ ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರು (ಜ.02): ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್'ಗೆ ಅನುಮತಿ ನೀಡಲು ಕೋರಿ ರಾಜ್ಯಪಾಲರಿಗೆ ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ ಅರ್ಜಿ ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ 2 ಪ್ರಕರಣಗಳ ಆರೋಪ ಕೇಳಿ ಬಂದಿದೆ.

1 ನೇ ಪ್ರಕರಣ - ಸಿಎಂ ಸಿದ್ದರಾಮಯ್ಯ ಗಣಿ ಗುತ್ತಿಗೆಯನ್ನು ಕಾನೂನುಬಾಹಿರವಾಗಿ ನವೀಕರಣ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ರಾಷ್ಟ್ರಪತಿಗಳ ಸುಗ್ರೀವಾಜ್ಞೆ ಪಡೆಯದೇ ಸಿಎಂ 5 ಗಣಿ ಕಂಪನಿ ಗುತ್ತಿಗೆ ನವೀಕರಣ ಮಾಡಿದ್ದಾರೆ ಎನ್ನಲಾಗಿದೆ. ಹರಾಜು ಪ್ರಕ್ರಿಯೆ ಮೂಲಕ ನವೀಕರಣ ನಿಗದಿಪಡಿಸಿದ್ದ ಸುಗ್ರೀವಾಜ್ಞೆಯ ಮಧ್ಯೆಯೇ ಕಾನೂನುಬಾಹಿರವಾಗಿ ಗಣಿ ಕಂಪನಿಗಳ ನವೀಕರಣದಿಂದ 400 ಕೋಟಿ ರೂ ಲಂಚ ಪಡೆದಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿ ಈ ಹಿಂದೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಈ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಕೋರ್ಟ್ ತಿರಸ್ಕರಿಸಿತ್ತು. ಈಗ ಸಿಎಂ ವಿರುದ್ಧ ಪ್ರಾಸಿಕ್ಯೂಷನ್'ಗೆ ರಾಮಮೂರ್ತಿ ಗೌಡ ಅನುಮತಿ ಕೋರಿದ್ದಾರೆ.

2ನೇ ಪ್ರಕರಣ - ಅರ್ಕಾವತಿ ಬಡಾವಣೆ ಡಿ ನೋಟಿಫಿಕೇಷನ್ ಅಕ್ರಮ ಪ್ರಕರಣ ಸಂಬಂಧ ಈಗಾಗಲೇ ನ್ಯಾ.ಕೆಂಪಣ್ಣ ಆಯೋಗ ವರದಿ ನೀಡಿದೆ. ಈ ವರದಿ ಸಿಎಂ ಸಿದ್ದರಾಮಯ್ಯಗೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆಯಿದೆ.

ಅರ್ಕಾವತಿ ಬಡಾವಣೆಯ ಒಟ್ಟು 541 ಎಕರೆ ಡಿ ನೋಟಿಫೈ ಆರೋಪ ಕೇಳಿ ಬಂದಿದ್ದು, ಸಿಎಂ 300 ಕೋಟಿ ರೂ ಲಂಚ ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಎರಡೂ ಪ್ರಕರಣಗಳಲ್ಲೂ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಲಾಗಿದೆ.