ದೆಹಲಿ (ಸೆ.19): ಕಾವೇರಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಶಿಶೇಖರ್ ನೇತೃತ್ವದಲ್ಲಿ ನಡೆಯುತ್ತಿರುವ ಕಾವೇರಿ ಸಮಿತಿ ಸಭೆ ಮುಕ್ತಾಯಗೊಂಡಿದೆ.
ಪ್ರತಿ ದಿನ 3 ಸಾವಿರ ಕ್ಯೂಸೆಕ್ ನಂತೆ 10 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸಲು ಸಮಿತಿ ಆದೇಶಿಸಿದೆ. ತಮಿಳುನಾಡಿಗೆ ಒಟ್ಟು 30 ಸಾವಿರ ಕ್ಯೂಸೆಕ್ ನೀರು ಬಿಡಿ ಎಂದು ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಆದೇಶ ನೀಡಿದೆ. ಕರ್ನಾಟಕದ ಮೇಲೆ ಮತ್ತೆ ಬರೆ ಎಳೆದಂತಾಗಿದೆ.
ಕೆಆರ್'ಎಸ್'ನಲ್ಲಿ ನೀರಿಲ್ಲ, ಬರಗಾಲ, ಬೆಳೆಗಳಿಗೂ ನೀರು ಕೊಡುತ್ತಿಲ್ಲ ಎಂದ ಕರ್ನಾಟಕದ ವಾದಕ್ಕೆ ಕಿವಿಗೊಡದ ಕಾವೇರಿ ಮೇಲುಸ್ತುವಾರಿ ಸಮಿತಿ ತದ್ವಿರುದ್ಧ ಆದೇಶ ನೀಡಿದೆ. ಕುಡಿಯಲೂ ನೀರು ಸಿಗುವುದಿಲ್ಲ ಎಂಬ ವಾದಕ್ಕೆ ಮನ್ನಣೆ ನೀಡಲಿಲ್ಲ. ಕರ್ನಾಟಕ ಮಂಡಿಸಿದ ಯಾವ ಅಂಕಿ-ಅಂಶಗಳನ್ನೂ ಪರಿಗಣಿಸದ ಸಮಿತಿ ಆದೇಶ ನೀಡಿದೆ. ತಮಿಳುನಾಡಿನ ವಾದವನ್ನೇ ಪರಿಗಣಿಸಿ ನೀರು ಬಿಡುಗಡೆ ಆದೇಶ ನೀಡಿದೆ.
ತಮಿಳುನಾಡಿಗೆ ನೀರು ಬಿಡುವುದಕ್ಕೆ ಕರ್ನಾಟಕ ಒಪ್ಪಿದೆ ಎಂದು ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಶಶಿಶೇಖರ್ ಹೇಳಿದ್ದಾರೆ. ಸುಪ್ರೀಂಕೋರ್ಟ್ಗೆ ಯಾವುದೇ ವರದಿ ಸಲ್ಲಿಸುವುದಿಲ್ಲ. ಸಭೆ ನಡೆಸಿ ನಿರ್ಣಯ ಕೈಗೊಳ್ಳುವಂತೆ ಸುಪ್ರೀಂ ಸೂಚಿಸಿತ್ತು. ನಾವು ಸುಪ್ರೀಂಕೋರ್ಟ್ ಆದೇಶ ಪಾಲಿಸಿದ್ದೇವೆ. ಅಕ್ಟೋಬರ್ನಲ್ಲಿ ಮತ್ತೆ ಮೇಲುಸ್ತುವಾರಿ ಸಮಿತಿ ಸಭೆ ನಡೆಸಲಾಗುತ್ತದೆ ಎಂದು ಶಶಿಶೇಖರ್ ಹೇಳಿದ್ದಾರೆ.
