ಅಮರಾವತಿ: ನೂತನ ರಾಜ್ಯ ರಚನೆಯ ಯೋಜನೆಗಳಿಗೆ ಕೇಂದ್ರ ಸೂಕ್ತ ಹಣಕಾಸು ನೆರವು ನೀಡುತ್ತಿಲ್ಲ ಎಂದು ಆರೋಪಿಸಿ, ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು, ಇದೀಗ ನೂತನ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ ಕ್ರೌಡ್‌ಫಂಡಿಂಗ್‌ ಯೋಜನೆ ಅನುಸರಿಸಲು ಚಿಂತಿಸಿದ್ದಾರೆ.

ಅದಕ್ಕಾಗಿ ಈಗ ಅವರು ಸ್ವದೇಶ ಹಾಗೂ ವಿದೇಶದಲ್ಲಿರುವ ಅಂತರ್ಜಾಲತಾಣಿಗರ ಮೊರೆ ಹೋಗಿದ್ದಾರೆ. ಇದೀಗ ಸರ್ಕಾರಿ ಬಾಂಡ್‌ಗಳ ಆಧಾರದಲ್ಲಿ ಅಮರಾವತಿಯಲ್ಲಿ ಹೂಡಿಕೆ ಮಾಡುವಂತೆ ಸಾರ್ವಜನಿಕರನ್ನು ಕೋರುವ ಬಗ್ಗೆ ಅವರು ತಮ್ಮ ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ತಮ್ಮ ಹೂಡಿಕೆಗೆ ವಾಣಿಜ್ಯ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿದರವನ್ನು ನೀಡುವ ಪ್ರಸ್ತಾಪ ಅವರು ನೀಡಿದ್ದಾರೆ.