ಆಗಸ್ಟ್ 15. ಇಡೀ ದೇಶವೇ ಸ್ವಾತಂತ್ರೋತ್ಸವದ ಸಂಭ್ರಮಾಚರಣೆಯಲ್ಲಿದ್ದರೆ, ಕರ್ನಾಟಕದ ಆ ಆರು ಕುಟುಂಬಗಳ ಪಾಲಿಗೆ ಮಾತ್ರ ಶೋಕದ ದಿನ. ವೀರಪ್ಪನ್ ಅಟ್ಟಹಾಸವನ್ನ ಹುಟ್ಟಡಗಿಸಲು ಹೋಗಿ ಹುತಾತ್ಮರಾಗಿದ್ದ ಆ ಪೊಲೀಸರ ಕುಟುಂಬಗಳಲ್ಲಿ ಆ ನೋವು ಇನ್ನೂ ಮಾಸಿಲ್ಲ. ರಕ್ಕಸನ ರಾಕ್ಷಸ ಕೃತ್ಯಕ್ಕೆ ಬಲಿಯಾಗಿದ್ದ ಹುತಾತ್ಮರ ಕುಟಂಬಗಳಿಗೆ ಸರ್ಕಾರ ಈವರೆಗೂ ನೆರವಿಗೆ ಬಂದಿಲ್ಲ.
ಬೆಂಗಳೂರು(ಆ.15): ನರಹಂತಕ ವೀರಪ್ಪನ್ ಹೆಸರು ಕೇಳಿದ್ರೆ ಸಾಕು ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ನಿದ್ದೆಗೆಡುತ್ತಿದ್ದರು. ಅಷ್ಟರ ಮಟ್ಟಿಗೆ ವೀರಪ್ಪನ್ ಅಟ್ಟಹಾಸ ಹೆಚ್ಚಾಗಿತ್ತು. 1990 ರಿಂದ 1992 ರವರೆಗೆ ವೀರಪ್ಪನ್ ಸೃಷ್ಟಿಸಿದ ರಕ್ತ ಸಿಕ್ತ ಅಧ್ಯಾಯಗಳನ್ನ ಕಂಡ ಪೊಲೀಸ್ರು ಮಲೆ ಮಹದೇಶ್ವರ ಬೆಟ್ಟಕ್ಕೆ ಡ್ಯೂಟಿ ಮಾಡಲು ಹಿಂದೇಟು ಹಾಕುತ್ತಿದ್ದರು. ಆ ವೇಳೆಯಲ್ಲಿ ತಮ್ಮ ಪ್ರಾಣವೇ ಪಣಕ್ಕೆ ಇಟ್ಟು ಎದೆಗುಂದದೇ ಮುನ್ನುಗ್ಗಿದ್ದು ಸಾಹಸಿ ಎಸ್ ಐ ಶಕೀಲ್ ಅಹಮದ್, ಎಸ್ಪಿ ಹರಿಕೃಷ್ಣ.
ವೀರಪ್ಪನ್ ಬೇಟೆಗೆ ಎಸ್ಟಿಎಫ್ ಪಡೆ, ಬಿಡುವಿಲ್ಲದೇ ಪ್ರಯತ್ನ ಪಡುತ್ತಿತ್ತು. ಅಂಥಾ ಸಂದರ್ಭದಲ್ಲಿಯೇ, ಎಸ್ ಐ ಶಕೀಲ್ ಅಹಮದ್ ಗೆ ವೀರಪ್ಪನ್ ಬಂಟ ಗುರುನಾಥನ್ ಹಿಡಿಯುವ ಅವಕಾಶ ಒದಗಿ ಬರುತ್ತೆ. ಶಸ್ತ್ರ ವ್ಯಾಪಾರಿಗಳ ಸೋಗಿನಲ್ಲಿ ಬಂದ ಎಸ್ಪಿ ಹರಿಕೃಷ್ಣ, ಎಸ್ ಐ ಶಕೀಲ್ ಅಹಮದ್ ಗುರುನಾಥನನ್ನ ಹಿಡಿದು ವೀರಪ್ಪನ್ಗೆ ಸೆಡ್ಡು ಹೊಡೆಯುತ್ತಾರೆ. ಆಗ ಪೊಲೀಸರ ಗುಂಡಿಗೆ ಗುರುನಾಥನ್ ಬಲಿಯಾಗ್ತಾನೆ.
ಈ ವಿಚಾರ ತಿಳಿದ ವೀರಪ್ಪನ್ ಶಕೀಲ್ ಅಹಮದ್, ಹರಿಕೃಷ್ಣ ಅವರ ಹೆಣ ಉರುಳಿಸಲೇಬೇಕು ಅಂತಾ ಪಣ ತೊಡ್ತಾನೆ. ಆಗಸ್ಟ್ 14 -1992ರಂದು ಆಯುಧ ವ್ಯಾಪಾರಿಗಳ ಸೋಗಿನಲ್ಲಿ ವೀರಪ್ಪನ್ ಹಿಡಿಯಲು ಹೊರಟ ಎಸ್ಪಿ ಹರಿಕೃಷ್ಣ ಮತ್ತು ಎಸ್ಐ ಶಕೀಲ್ ಅಹಮದ್ ಮೀಣ್ಯಂ ಬಳಿ ವೀರಪ್ಪನ್ ದಾಳಿಗೆ ಬಲಿಯಾಗ್ತಾರೆ. ಇವರ ಜೊತೆಗೆ ಬೆನಗೊಂಡ, ಅಪ್ಪಚ್ಚು, ಸುಂದರ್ ಮತ್ತು ಕಾಳಪ್ಪ ಕೂಡಾ ವೀರಪ್ಪನ್ ಹಾರಿಸಿದ ಗುಂಡುಗಳಿಗೆ ಪ್ರಾಣ ಬಿಡುತ್ತಾರೆ. ೬ ಜನರ ಜೀವ ತೆಗೆದ ವೀರಪ್ಪನ್ ಅಟ್ಟಹಾಸದ ಆ ಕರಾಳ ನೆನಪು ಇನ್ನೂ ಆ ಕುಟುಂಬಗಳಲ್ಲಿ ಮಾಸಿಲ್ಲ.
ಇನ್ನು ನರಹಂತಕನನ್ನ ಹಿಡಿಯುವ ಪ್ರಯತ್ನದಲ್ಲಿ ಪ್ರಾಣಬಿಟ್ಟ ಆರು ಮಂದಿಯ ಶೌರ್ಯದ ಬಗ್ಗೆ ಸರ್ಕಾರವಾಗಲೀ ಅಥವಾ ಪೊಲೀಸ್ ಇಲಾಖೆಯಾಗಲಿ, ಯಾರೂ ಕೂಡಾ ಗಮನಹರಿಸಿಲ್ಲ. ಕೆಲ ಸ್ಥಳೀಯರೇ ಆ ವೀರಯೋಧರ ನೆನಪಿಗಾಗಿ ದಾಳಿ ನಡೆದ ಸ್ಥಳದಲ್ಲಿ ಎರಡು ವರ್ಷಗಳ ಹಿಂದೆಯೇ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಈ ಸ್ಮಾರಕಕ್ಕೆ ನಿನ್ನೆ ಹರಿಕೃಷ್ಣ ಪತ್ನಿ ಪ್ರೀತಾ ಹರಿಕೃಷ್ಣ ಮತ್ತು ಶಕೀಲ್ ಅಹಮದ್ ಸಹೋದರ ಪುಷ್ಪ ನಮನ ಸಲ್ಲಿಸಿದ್ರು.
ಒಟ್ಟಿನಲ್ಲಿ ವೀರಪ್ಪನ್ ಅಟ್ಟಹಾಸ ಮಟ್ಟಹಾಕಲು ಹೋರಾಡಿ ಪ್ರಾಣತೆತ್ತ ಪೊಲೀಸ್ ಕುಟುಂಬಗಳ ನೆರವಿಗೆ ಸರ್ಕಾರ ಧಾವಿಸದೇ ಇರೋದು ದುರದೃಷ್ಟಕರ. ಇನ್ನಾದ್ರೂ ಸರ್ಕಾರ ಇತ್ತ ಗಮನ ಹರಿಸಲಿ ಎಂಬುದೇ ನಮ್ಮ ಆಶಯ.
