ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ವಿವಿಧ ಪಕ್ಷಗಳು ಸಕಲ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಈ ವೇಳೆ ಮೈತ್ರಿಯನ್ನು 28 ಕ್ಷೇತ್ರಗಳಲ್ಲಿ ಗೆಲ್ಲಿಸಬೇಕು ಎಂದು ಕಾಂಗ್ರೆಸ್ ಮುಖಂಡ ಈಶ್ವರ್ ಖಂಡ್ರೆ ಹೇಳಿದ್ದಾರೆ. 

ಬೆಂಗಳೂರು : ಈ ಬಾರಿಯ ಲೋಕಸಭಾ ಚುನಾವಣೆ ಮಾಡು ಇಲ್ಲವೇ ಮಡಿ ಚುನಾವಣೆಯಾಗಿದ್ದು, ರಾಜ್ಯದ 28 ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ಶುಕ್ರವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಾರ್ಮಿಕ ವಿಭಾಗದ ವತಿಯಿಂದ ನಗರದ ದೇವರಾಜ್‌ ಅರಸ್‌ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕ ಸಮಾವೇಶ ಉದ್ಘಾಟಿಸಿ ಮತನಾಡಿದ ಅವರು, ಭಾರತ ಸಂವಿಧಾನ, ಪ್ರಜಾಪ್ರಭುತ್ವ ಅಪಾಯದಲ್ಲಿದ್ದು, ಬಿಜೆಪಿ ಸರ್ವಾಧಿಕಾರಿ ಧೋರಣೆ ಮಾಡುತ್ತಿದೆ. ಸುಳ್ಳು ಭರವಸೆಗಳು, ಮೋಸ, ಅಪಪ್ರಚಾರ ಮಾಡುತ್ತಿರುವ ಬಿಜೆಪಿ ವಿರುದ್ಧ ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ಆಧುನಿಕ ರಾಷ್ಟ್ರ ನಿರ್ಮಾಣದ ಶ್ರೇಯಸ್ಸು ಕಾಂಗ್ರೆಸ್‌ಗೆ ಸಲ್ಲುತ್ತದೆ. ಆದರೆ ಬಿಜೆಪಿ ಮುಖಂಡರು ಎಲ್ಲವನ್ನೂ ನಾವೇ ಮಾಡಿದ್ದೇವೆ ಎನ್ನುತ್ತಿದ್ದಾರೆ. ಕಪ್ಪುಹಣ ತರಲಿಲ್ಲ. ಭಯೋತ್ಪಾದನೆ ನಿಗ್ರಹವಾಗಲಿಲ್ಲ. ಅಚ್ಛೇದಿನ ಬರಲಿಲ್ಲ. ಬಡವರ ಖಾತೆಗೆ .15 ಲಕ್ಷ ಇಂದಿಗೂ ಸಂದಾಯವಾಗಿಲ್ಲ. ಹೇಳಿದ್ದನ್ನು ಮಾಡದ ಬಿಜೆಪಿ ರಾಜಕೀಯಕ್ಕಾಗಿ ಸೇನಾ ಸಾಧನೆಯನ್ನು ಬಳಸಿಕೊಳ್ಳಲು ಯತ್ನಿಸುತ್ತಿದೆ. ಬಾಲುಕೋಟ್‌ ದಾಳಿಯಿಂದ ದೇಶದಲ್ಲಿ ಮೋದಿ ಅಲೆ ಎದ್ದಿದ್ದು, ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 22 ಸ್ಥಾನ ಗೆಲ್ಲುತ್ತೇವೆ ಎಂದಿರುವ ಬಿಜೆಪಿ ಮುಖಂಡರ ಹೇಳಿಕೆ ಮೂರ್ಖತನದ್ದು. ರಾಜಕೀಯಕ್ಕಾಗಿ ಸೇನೆ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವ್ಯಂಗ್ಯವಾಡಿದರು.

ಮಾ.4ರಂದು ಮೈತ್ರಿ ಸರ್ಕಾರದ ಲೋಕಸಭಾ ಅಭ್ಯರ್ಥಿಗಳನ್ನು ಬಹು​ತೇಕ ಅಂತಿ​ಮ​ಗೊ​ಳಿ​ಸ​ಲಾ​ಗು​ವುದು. ಮೈತ್ರಿ ಸರ್ಕಾರದ ಯಾವುದೇ ಅಭ್ಯರ್ಥಿ ಇದ್ದರೂ ಅವರನ್ನು ಗೆಲ್ಲಿಸಬೇಕು. ಈ ಮೂಲಕ ಸರ್ವಾಧಿಕಾರಿ ಧೋರಣೆಯ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದರು.

ಕಾಂಗ್ರೆಸ್‌ ಕಾರ್ಮಿಕ ವಿಭಾಗದ ಆಧ್ಯಕ್ಷ ಎಸ್‌.ಎಸ್‌.ಪ್ರಕಾಶಂ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ವೀರಣ್ಣ ಮತ್ತೀಕಟ್ಟೆ, ವಿಧಾನ ಪರಿಷತ್ತು ಮಾಜಿ ಸದಸ್ಯಲಕ್ಷ್ಮೇನಾರಾಯಣ, ಮುಖಂಡ ಶಾಂತವೀರ ನಾಯಕ್‌, ಆರ್‌.ವಿ.ವೆಂಕಟೇಶ್‌ ಸೇರಿದಂತೆ ಇತರರು ಪಾಲ್ಗೊಂಡಿದ್ದರು.