ಅದೇನೇ ಇರಲಿ, ಅರಣ್ಯಕ್ಕೂ ಮಕ್ಕಳ ಸಂತಾನಕ್ಕೂ ಎತ್ತಣಿಂದೆತ್ತಣ ಸಂಬಂಧ? ಮೌಢ್ಯತೆಯ ಈ ಪರಮಾವಧಿಯಿಂದ ಹರಕೆ ಹೊತ್ತವರಿಗೆ ಮಕ್ಕಳಾಗಿವೆಯೋ ಇಲ್ವೋ ಗೊತ್ತಿಲ್ಲ.ಅರಣ್ಯವಂತೂ ಸರ್ವನಾಶವಾಗ್ತಿರೋದಂತು ಸತ್ಯ.
ಮಂಡ್ಯ (ಫೆ.15): ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಳೆಯೋದು ಅನ್ನೋ ಗಾದೆ ಇದೆ. ಈ ಗಾದೆಗೆ ಸರಿ ಹೊಂದುವ ಸಂಪ್ರದಾಯವೊಂದು ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿದೆ. ಈ ಮೌಢ್ಯತೆಯ ಪರಮಾವಧಿಗೆ ನೂರಾರು ಎಕರೆ ಅರಣ್ಯವೇ ಭಸ್ಮವಾಗಿತ್ತಿದೆ.
ಧಗಧಗನೆ ಹೊತ್ತಿ ಉರಿಯುತ್ತಿರೋ ಕಾಡು. ನೋಡ ನೋಡುತ್ತಲೇ ವ್ಯಾಪಿಸಿಕೊಂಡ ಅಗ್ನಿಜ್ವಾಲೆ..ಇದು ಕಾಡ್ಗಿಚ್ಚಿನಿಂದ ಬಿದ್ದ ಬೆಂಕಿಯಂತು ಅಲ್ಲ. ದುಷ್ಕರ್ಮಿಗಳ ಕಿಡಿಗೇಡಿ ಕೃತ್ಯವೂ ಅಲ್ಲ. ಇದು ಮಕ್ಕಳ ಸಂತಾನಕ್ಕೆ ಭಕ್ತರು ತೀರಿಸಿದ ಹರಕೆಯ ಬೆಂಕಿ. ಆಶ್ಚರ್ಯವಾದ್ರೂ ಇದು ಸತ್ಯ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟದಲ್ಲಿ ಶ್ರೀನಿವಾಸ ದೇಗುಲವಿದೆ. ಈ ದೇಗುಲ ಚಿಕ್ಕ ತಿರುಪತಿ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ. ಕೇವಲ ಮಂಡ್ಯ ಮಾತ್ರವಲ್ಲ, ಹೊರ ರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಬರ್ತಾರೆ.
ಮಕ್ಕಳಾಗದ ದಂಪತಿ ಶ್ರೀನಿವಾಸನ ಬಳಿ ಸಂತಾನ ಭಾಗ್ಯಕ್ಕೆ ಹರಕೆ ಹೊತ್ತರೇ ಸಂತಾನ ಭಾಗ್ಯ ಕಲ್ಪಿಸುತ್ತಾನಂತೆ. ನಂತರ ಭಕ್ತರು ಫೆಬ್ರವರಿಯಲ್ಲಿ ನಡೆಯೋ ಬ್ರಹ್ಮರಥೋತ್ಸವದ ವೇಳೆ ಹೀಗೆ ಕಾಡಿಗೆ ಬೆಂಕಿ ಹಚ್ಚಿ ಹರಕೆ ತೀರಿಸೋದು ಸಂಪ್ರದಾಯವಂತೆ. ಪ್ರತಿವರ್ಷವೂ ಹೀಗೆ ಕಾಡಿಗೆ ಬೆಂಕಿ ಹಚ್ಚೋದ್ರಿಂದ ಪರಿಸರ ನಾಶವಾಗುತ್ತಿದ್ದು. ಪರಿಸರ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ..
ಭಕ್ತರ ಮೌಢ್ಯತೆಯ ಪರಮಾವಧಿ ಅರಣ್ಯ ಇಲಾಖೆಗೂ ಅಸಮಾಧಾನ ತರಿಸಿದೆ. ಸಾಕಷ್ಟು ಬಾರಿ ಭಕ್ತರಲ್ಲಿ ಜಾಗೃತ ಮೂಡಿಸೋ ಕೆಲಸ ಮಾಡಿದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ಅರಣ್ಯ ಹಾಗೂ ವನ್ಯ ಜೀವಿ ನಾಶ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಅರಣ್ಯಾಧಿಕಾರಿಗಳು ಎಚ್ಚರಿಸಿದ್ದಾರೆ..
ಅದೇನೇ ಇರಲಿ, ಅರಣ್ಯಕ್ಕೂ ಮಕ್ಕಳ ಸಂತಾನಕ್ಕೂ ಎತ್ತಣಿಂದೆತ್ತಣ ಸಂಬಂಧ? ಮೌಢ್ಯತೆಯ ಈ ಪರಮಾವಧಿಯಿಂದ ಹರಕೆ ಹೊತ್ತವರಿಗೆ ಮಕ್ಕಳಾಗಿವೆಯೋ ಇಲ್ವೋ ಗೊತ್ತಿಲ್ಲ.ಅರಣ್ಯವಂತೂ ಸರ್ವನಾಶವಾಗ್ತಿರೋದಂತು ಸತ್ಯ.
ವರದಿ: ರಾಘವೇಂದ್ರ ಗಂಜಾಂ
