ಖಂಡಿತವಾಗಿ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಯಾಗಬೇಕು -  ಶೇ. 30ಪ್ರತ್ಯೇಕ ಧರ್ಮ ಆಗಲೇಬೇಕು, ಆಗಲೇಬಾರದು ಎಂದೇನು ಇಲ್ಲ – ಶೇ. 27ಪ್ರತ್ಯೇಕ ಧರ್ಮ ಖಂಡಿತವಾಗಿಯೂ ಆಗಬಾರದು – ಶೇ.26ಆಗಬೇಕೆ-ಬೇಡವೇ ಎನ್ನುವ ಬಗ್ಗೆ  ನಮಗೆ ಗೊತ್ತಿಲ್ಲ – ಶೇ.15

ಬೆಂಗಳೂರು(ಡಿ.6): ವೀರಶೈವ ಲಿಂಗಾಯತರು ಬಿಜೆಪಿಯ ಪ್ರಬಲ ವೋಟ್ ಬ್ಯಾಂಕ್ ಆಗಿರುವುದರಿಂದ ಅದನ್ನು ಛಿದ್ರಗೊಳಿಸಲು ಸಿದ್ದರಾಮಯ್ಯ ಪ್ರಯೋಗಿಸಿರುವ ಬಾಣವೇ ಲಿಂಗಾಯತ ಪ್ರತ್ಯೇಕ ಧರ್ಮ. ಇದಕ್ಕಾಗಿ ರಾಜ್ಯದಲ್ಲೀಗ ಹೋರಾಟವೇ ನಡೆದಿದೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿರುವುದೂ ಹೌದು.

ಆದರೆ, ಪ್ರತ್ಯೇಕ ಧರ್ಮವೆಂಬ ಜೇನುಗೂಡಿಗೆ ಕೈಹಾಕಿರುವ ಕಾಂಗ್ರೆಸ್ಸಿಗೆ ಜೇನುತುಪ್ಪ ಸಿಗುವುದೋ ಅಥವಾ ಜೇನು ಹುಳುಗಳು ಕಡಿಯಲಿವೆಯೋ ಎಂಬುದು ಸ್ಪಷ್ಟವಿರಲಿಲ್ಲ. ಈಗಿನ ಸಮೀಕ್ಷೆಯ ಪ್ರಕಾರ ಶೇ.57 ರಷ್ಟು ಜನರು ಪ್ರತ್ಯೇಕ ಧರ್ಮದ ಪರವಾಗಿರುವುದು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ನಿಟ್ಟುಸಿರು ಬಿಡಬಹುದು ಮತ್ತು ಬಿಜೆಪಿಗೆ ತಲೆನೋವು ಜಾಸ್ತಿಯಾಗಬಹುದು.

ಅದರಲ್ಲೂ ಶೇ.66ರಷ್ಟು ಲಿಂಗಾಯತರೇ ಪ್ರತ್ಯೇಕ ಧರ್ಮದ ಪರ ವಾಗಿದ್ದಾರೆ ಎಂಬ ಅಂಶ ಕಾಂಗ್ರೆಸ್ಸಿನ ಖುಷಿಯನ್ನು ಹೆಚ್ಚಿಸಲಿದೆ. ಗಮನಾರ್ಹ ಸಂಗತಿಯೆಂದರೆ ಇನ್ನೂ ಪ್ರಬಲ ಒಕ್ಕಲಿಗ, ಕುರುಬ ಮತ್ತು ಒಬಿಸಿಗಳಲ್ಲೂ ಪ್ರತ್ಯೇಕ ಲಿಂಗಾಯತ ಧರ್ಮ ಆಗಲಿ ಎನ್ನುವವರ ಸಂಖ್ಯೆ ಶೇ.50ಕ್ಕಿಂತ ಹೆಚ್ಚಿದೆ. ಇದೂ ಕೂಡ ಬಿಜೆಪಿಗೆ ಎಚ್ಚರಿಕೆಯ ಗಂಟೆ ಮತ್ತು ಸಿದ್ದರಾಮಯ್ಯ ಅವರ ತಂತ್ರಗಾರಿಕೆ ಫಲಿಸುತ್ತಿರುವುದರ ಸೂಚನೆ.