ನಿಮ್ಮ ಬಳಿ ಆ್ಯಂಡ್ರಾಯ್ಡ್ ಫೋನ್ ಇದೆಯಾ..? ಎಚ್ಚರ ನಿಮ್ಮ ಖಾಸಗಿ ತನಕ್ಕೆ ಬೀಳುತ್ತಿದೆ ಕನ್ನ

First Published 4, Aug 2018, 9:11 AM IST
People clueless UIDAI number enters their phone contact list
Highlights

ನಿಮ್ಮ ಬಳಿ ಆ್ಯಂಡ್ರಾಯ್ಡ್ ಮೊಬೈಲ್ ಇದೆಯಾ. ಹಾಗಾದರೆ ನೀವು ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಯಾಕೆಂದರೆ ನಿಮ್ಮ ಖಾಸಗಿ ಮಾಹಿತಿ ಲೀಕ್  ಆಗಬಹುದಾಗಿದೆ. 

ನವದೆಹಲಿ: ಆಧಾರ್ ಸುರಕ್ಷತೆ ಕುರಿತು ಚರ್ಚೆಗಳು ನಡೆಯುತ್ತಿರುವಾಗಲೇ, ಆ್ಯಂಡ್ರಾಯ್ಡ್ ಮೊಬೈಲ್ ಫೋನ್‌ಗಳಲ್ಲಿ ಶುಕ್ರವಾರದಿಂದ ಆಧಾರ್ ಪ್ರಾಧಿಕಾರದ ಸಹಾಯವಾಣಿ ಹೆಸರಿನಲ್ಲಿ ‘18003001947’ ಎಂಬ ಸಂಖ್ಯೆ ಪ್ರತ್ಯಕ್ಷವಾಗಿದೆ. ಈ ಸುದ್ದಿ ಒಬ್ಬರಿಂದ ಇನ್ನೊಬ್ಬರಿಗೆ ಹರಡಿ ವೈರಲ್ ಆಗಿದ್ದು, ಇದನ್ನು ಸೇರಿಸಿದ್ದು ಯಾರು, ಸೇರ್ಪಡೆಗೆ ಸೂಚನೆ ಕೊಟ್ಟಿದ್ದು ಯಾರು ಎಂಬೆಲ್ಲಾ ಪ್ರಶ್ನೆಗಳು ಹರಿದಾಡಿವೆ. ಜೊತೆಗೆ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಆಧಾರ್ ಪ್ರಾಧಿಕಾರದ ವಿರುದ್ಧ ನಾಗರಿಕರು ಹರಿಹಾಯತ್ತಿದ್ದಾರೆ.  

ಈ ನಡುವೆ ಪ್ರಕರಣ ಭಾರೀ ಸದ್ದು ಮಾಡುತ್ತಲೇ ಘಟನೆ ಕುರಿತು ಕ್ಷಮೆಯಾಚಿಸಿರುವ ಆ್ಯಂಡ್ರಾಯ್ಡ್ ಆ್ಯಪ್‌ನ ನಿರ್ಮಾತೃ ಸಂಸ್ಥೆಯಾದ ‘ಗೂಗಲ್’, 2018 ರಲ್ಲಿ ಆ್ಯಂಡ್ರಾಯ್ಡ್ ಸೆಟಪ್ ವಿಜರ್ಡ್ ರೂಪಿಸುವಾಗ ಅಚಾತುರ್ಯವಾಗಿ ಆಧಾರ್‌ನ ಅಂದಿನ ಹೆಲ್ಪ್‌ಲೈನ್ ನಂಬರ್ ಮತ್ತು ತುರ್ತು ಸಂದರ್ಭದಲ್ಲಿ ಬಳಸಲು ಇರುವ 112  ಸಂಖ್ಯೆ ಸೇರ್ಪಡೆ ಯಾಗಿತ್ತು. ಇದು ಇದೀಗ ಆ್ಯಪ್ ಆಪ್‌ಡೇಟ್ ಆದ ಸಂದರ್ಭದಲ್ಲಿ ಮೊಬೈಲ್‌ನ ಫೋನ್‌ಬುಕ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಗೊಂದಲಕ್ಕೆ ಕಾರಣವಾಗಿದೆ. ಇದು ಯಾವುದೇ ರೀತಿಯಲ್ಲೂ ಮೊಬೈಲ್ ಬಳಕೆದಾರರ ಖಾಸಗಿತನವನ್ನು ಭೇದಿಸುವ ಯತ್ನವಲ್ಲ. ಶೀಘ್ರವೇ ನಾವು ಈ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದೆ. 

ಭಾರೀ ಗೊಂದಲ: ಶುಕ್ರವಾರ ಆ್ಯಂಡ್ರಾಯ್ಡ್ ಆಧರಿತ ಮೊಬೈಲ್ ಫೋನ್‌ಗಳಲ್ಲಿನ ದೂರವಾಣಿ ಸಂಖ್ಯೆಗಳೊಂದಿಗೆ ‘ಯುಐಡಿಎಐ ನಂಬರ್’ ಎಂಬ ಹೆಸರಿನಲ್ಲಿ ಸಂಖ್ಯೆ ತನ್ನಿಂತಾನೆ  ಸೇರ್ಪಡೆಯಾಗಿತ್ತು. ಗೂಗಲ್ ಕಂಪನಿ ಕೇಂದ್ರ ಸರ್ಕಾರ ಅಥವಾ ಆಧಾರ್ ಪ್ರಾಧಿಕಾರದ ಸೂಚನೆ ಮೇರೆಗೆ ಈ ಸಂಖ್ಯೆಯನ್ನು ಸೇರಿಸಿರಬಹುದು ಎಂಬ ವಾದಗಳು ಕೇಳಿಬಂದಿದ್ದವು. ಆದರೆ ಇದನ್ನು ತಳ್ಳಿ ಹಾಕಿದ್ದ ಆಧಾರ್ ಪ್ರಾಧಿಕಾರ, ಆ್ಯಂಡ್ರಾಯ್ಡ್ ಮೊಬೈಲ್ ಫೋನ್ ಗಳಲ್ಲಿ ಪತ್ತೆಯಾಗಿರುವ ಸಂಖ್ಯೆ ತನ್ನ ಸಹಾಯವಾಣಿಯೇ ಅಲ್ಲ ಎಂದು ಸ್ಪಷ್ಟಪಡಿಸಿತ್ತು. ಫೋನ್‌ಬುಕ್‌ನಲ್ಲಿ ಸಹಾಯವಾಣಿ ಸಂಖ್ಯೆ ಸೇರಿಸಲು ಯಾವುದೇ ಮೊಬೈಲ್ ಉತ್ಪಾದಕ ಕಂಪನಿ ಅಥವಾ ಸೇವಾದಾತ ಕಂಪನಿಗೆ ಸೂಚನೆ ನೀಡಲಾಗಿಲ್ಲ. ಮೊಬೈಲ್‌ಗಳಲ್ಲಿ ಕಂಡುಬರುತ್ತಿರುವುದು ಈ ಹಿಂದೆ ಬಳಸುತ್ತಿದ್ದ ಸಹಾಯವಾಣಿ ಸಂಖ್ಯೆ. ಕಳೆದ ಎರಡು ವರ್ಷಗಳಿಂದ ಆಧಾರ್ ಸಹಾಯವಾಣಿ ‘1947 ’ ಆಗಿದೆ ಎಂದಿತ್ತು.

ಐಟಿ ರೀ ಫಂಡ್ ಹೆಸರಲ್ಲಿ ಸಂದೇಶ ಕಳಿಸಿ ವಂಚನೆ

ಆದಾಯ ತೆರಿಗೆ ಇಲಾಖೆಯ ಸಂದೇಶವಿದು ಎಂದು ಹೇಳಿಕೊಂಡು ತೆರಿಗೆದಾರರನ್ನು ವಂಚಿಸುವ ಎಸ್ಸೆಮ್ಮೆಸ್ ಸಂದೇಶವು ಮೊಬೈಲ್‌ಗೆ ಬರುತ್ತಿರುವುದನ್ನು ಮುಂಬೈ ಪೊಲೀಸರು ಪತ್ತೆ ಮಾಡಿದ್ದು, ಈ ಜಾಲವನ್ನು ಭೇದಿಸಲು ಜಾಲ ಬೀಸಿದ್ದಾರೆ. ಅಲ್ಲದೆ, ಈ ರೀತಿಯ ಎಸ್ಸೆಮ್ಮೆಸ್‌ಗಳಿಗೆ ಉತ್ತರ ನೀಡಬೇಡಿ ಎಂದು ತೆರಿಗೆದಾರರಿಗೆ ಮನವಿ ಮಾಡಿದ್ದಾರೆ. ದೇಶಾದ್ಯಂತ ಈ ಜಾಲ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ. ಈಗ ತೆರಿಗೆದಾರರು ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸುವ ಸಮಯ.

 ಇದರ ದುರ್ಲಾಭ ಪಡೆಯುತ್ತಿರುವ ಸೈಬರ್ ವಂಚಕರು, ಜನರ ಮೊಬೈಲ್‌ಗಳಿಗೆ ‘ಇದು ಆದಾಯ ತೆರಿಗೆ ಇಲಾಖೆ ಸಂದೇಶ’ ಎಂಬ ಎಸ್ಸೆಮ್ಮೆಸ್ ಕಳಿಸುತ್ತಾರೆ. ಈ ಮೂಲಕ ಕೆಲವು ಮಾಹಿತಿಗಳನ್ನು ಕ್ರೋಡೀಕರಿಸಿ ತೆರಿಗೆದಾರರ ಖಾತೆಯಲ್ಲಿದ್ದ ಹಣ ಲಪಟಾಯಿಸುವ ಮೂಲಕ ಭಾರಿ ಮೋಸ ಮಾಡುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವಂಚನೆ ಮಾಡೋದು ಹೇಗೆ?: ಇದು ಆದಾಯ ತೆರಿಗೆ ಇಲಾಖೆಯ ಸಂಂದೇಶ ಎಂದು ಹೇಳಿಕೊಂಡು ತೆರಿಗೆದಾರರ ಮೊಬೈಲ್ ಗೆ ಒಂದು ಎಸ್ಸೆಮ್ಮೆಸ್ ಬರುತ್ತದೆ. ಅದರಲ್ಲಿ, ‘ನಿಮ್ಮ ಐಟಿ-ರೀಫಂಡ್ ಅನ್ನು ಅನುಮೋದಿಸ ಲಾಗಿದೆ. ಇದು ನಿಮ್ಮದೇ ಬ್ಯಾಂಕ್ ಖಾತೆ ಸಂಖ್ಯೆಯೇ’ ಎಂದು ಹೇಳಿ ಯಾವುದೋ ಒಂದು ಅಕೌಂಟ್ ನಂಬರ್ ಬರೆದಿರ ಲಾಗುತ್ತದೆ.

ಬಳಿಕ, ‘ಇದು ತಪ್ಪು ಬ್ಯಾಂಕ್ ಖಾತೆ ಸಂಖ್ಯೆಯಾಗಿದ್ದರೆ, ಇಲ್ಲಿ ಕೊಟ್ಟಿರುವ ಲಿಂಕ್‌ಗೆ ಕ್ಲಿಕ್ ಮಾಡಿ ನಿಮ್ಮ ಸರಿಯಾದ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಿ’ ಎಂದು ಸೂಚಿಸಲಾಗುತ್ತದೆ. ಸಹಜವಾಗೇ ಅದು ಖಾತೆದಾರರ ನೈಜ ಬ್ಯಾಂಕ್ ಖಾತೆ ಸಂಖ್ಯೆ ಆಗಿರದ ಕಾರಣ ತೆರಿಗೆ ದಾರರು ನಿಜವಾದ ಖಾತೆ ಸಂಖ್ಯೆ ನಮೂದಿಸಲು ಲಿಂಕ್ ಮೇಲೆ ಕ್ಲಿಕ್ ಮಾಡುತ್ತಾರೆ. ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟನ್ನೇ ಹೋಲುವ ವೆಬ್‌ಸೈಟೊಂದು ತೆರೆದುಕೊಳ್ಳುತ್ತದೆ. ಅದರಲ್ಲಿ ತೆರಿಗೆದಾರರಿಗೆ ತಮ್ಮ ಮೂಲ ಆದಾಯ ತೆರಿಗೆ ಇಲಾಖೆ ಇಲಾಖೆಯ ಲಾಗಿನ್ ನೇಮ್ ಮತ್ತು ಪಾಸ್‌ವರ್ಡ್ ಹಾಕಲು ಸೂಚಿಸಲಾಗುತ್ತದೆ. ಇವುಗಳನ್ನು ತೆರಿಗೆದಾರರು ನಮೂದಿಸಿದಾಗ, ಈ ಎಲ್ಲ ಮಾಹಿತಿಗಳನ್ನು ವಂಚಕರು ಕದಿಯತ್ತಾರೆ.

ಕದ್ದ ಮಾಹಿತಿಯನ್ನು ಬಳಸಿಕೊಂಡು ತೆರಿಗೆದಾರರ ಮೂಲ ಆದಾಯ ತೆರಿಗೆ ಪಾಸ್ ವರ್ಡ್, ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ಬದಲಿಸುತ್ತಾರೆ. ತೆರಿಗೆದಾರರು ನೀಡಿರುವ ನಿಜವಾದ ಬ್ಯಾಂಕ್ ಖಾತೆಯ ಮೂಲಕ ತೆರಿಗೆ ರೀಫಂಡ್ ಹಾಗೂ ಇತರ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸುವ ಹುನ್ನಾರವನ್ನೂ ಅವರು ರೂಪಿಸಿದ್ದಾರೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

loader