ರಾಜ್ಯ ಸರ್ಕಾರ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತರಲೇಬೇಕು ಅನ್ನೋ ಸಿದ್ಧತೆಯಲ್ಲಿದೆ. ಆದರೆ ಆ ಗ್ರಾಮದ ಜನರು ಮೂಢನಂಬಿಕೆಯ ವಿಚಿತ್ರ ಆಚರಣೆಗೆ ಮುಂದಾಗಿದ್ದಾರೆ. ಅಪ್ರಾಪ್ತ ಮಕ್ಕಳನ್ನ ಮುಳ್ಳಿನ ಮೇಲೆ ಬೀಳಿಸುವಂತಹ ಅಮಾನವೀಯ ಪದ್ದತಿಯನ್ನ ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಅಷ್ಟಕ್ಕೂ ಅಂತಹ ವಿಚಿತ್ರ ಆಚರಣೆ ನಡೀತಿರೋದಾದ್ರೂ ಎಲ್ಲಿ ಅಂತೀರಾ? ಈ ವರದಿ ನೋಡಿ.
ಚಿತ್ರದುರ್ಗ(ಅ.03): ಹೀಗೆ ಮುಳ್ಳಿನ ಮೇಲೆ ಬೀಳುವ ದೃಶ್ಯ ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಐಲಾಪುರ ಎಂಬ ಗ್ರಾಮದಲ್ಲಿ. ನವರಾತ್ರಿ ಆಚರಣೆಯ ಕೊನೆಯ ದಿನದಂದು ದುರ್ಗಾಂಬಿಕಾ ದೇವಿ ಜಾತ್ರೆ ವೇಳೆ ದೇವಸ್ಥಾನದ ಮುಂಭಾಗದಲ್ಲಿ ಜಾಲಿ ಮುಳ್ಳಿನ ಗುಡ್ಡೆ ಹಾಕುತ್ತಾರೆ. ಅಪ್ರಾಪ್ತ ಮಕ್ಕಳನ್ನ ಮುಳ್ಳಿನ ಮೇಲೆ ಬೀಳುವಂತೆ ಮಾಡುವ ಅಮಾನವೀಯ ಆಚರಣೆ ಮಾಡ್ತಿದ್ದಾರೆ.
ಇನ್ನೂ ಮುಳ್ಳಿನ ಮೇಲೆ ಮಕ್ಕಳನ್ನು ಮಲಗಿಸಿ ಹರಕೆ ತೀರಿಸುವ ತಾಯಂದಿರನ್ನ ಕೇಳಿದರೆ, ನಾವು ತಲೆ ತಲಾಂತರದಿಂದ ದುರ್ಗಾಂಬಿಕಾ ದೇವಿಯ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಮುಳ್ಳಿನ ಮೇಲೆ ಮಕ್ಕಳು ಬೀಳುವುದರಿಂದ ಮಕ್ಕಳಿಗೆ ಹಿಡಿಯುವ ಪೀಡೆ ಪಿಶಾಚಿಗಳು, ರೋಗ ರುಜಿನಗಳು ದೂರಾಗುತ್ತವೆ. ಮಕ್ಕಳಾಗದವರಿಗೆ ಮಕ್ಕಳಾಗುತ್ತವೆ, ಮಳೆ, ಬೆಳೆ ಚೆನ್ನಾಗಿ ಆಗುತ್ತವೆ ಎನ್ನುತ್ತಾರೆ.
ಒಟ್ಟಿನಟ್ನಲ್ಲಿ, ದೇವರ ಹೆಸರಿನಲ್ಲಿ ಪುಟ್ಟ ಪುಟ್ಟ ಮಕ್ಕಳನ್ನ ಮುಳ್ಳಿನ ಮೇಲೆ ಬೀಳಲು ಪ್ರಚೋದಿಸುವ, ಹಸುಗೂಸುಗಳನ್ನು ಮುಳ್ಳಿನ ಗುಡ್ಡೆಗೆ ಮುಟ್ಟಿಸಿ ಹರಕೆ ತೀರಿಸುವ ಆಚರಣೆ ಇಂದಿಗೂ ಜೀವಂತವಿದೆ. ಇನ್ನಾದ್ರೂ ಮಕ್ಕಳ ಹಕ್ಕುಗಳ ರಕ್ಷಣಾ ಇಲಾಖೆ ಅಧಿಕಾರಿಗಳು ಜನರ ಮನ ಪರಿವರ್ತನೆ ಮಾಡುವ ಅಗತ್ಯವಿದೆ.
