ದಿಲ್ಲಿಯ ಸಂಸತ್ ಭವನ, ರಾಷ್ಟ್ರಪತಿ ಭವನದ ಮಾದರಿ | ರಾಜ್ಯದ ಶಕ್ತಿ ಕೇಂದ್ರದ ಸುತ್ತ ನವಿಲು ಬಿಡುವ ಯೋಜನೆ ಸಿದ್ಧ
ಬೆಂಗಳೂರು: ಕರುನಾಡಿನ ಶಕ್ತಿ ಕೇಂದ್ರ ವಿಧಾನಸೌಧದ ಆವರಣದ ಉದ್ಯಾನದಲ್ಲಿ ರಾಷ್ಟ್ರ ಪಕ್ಷಿ ನವಿಲುಗಳನ್ನು ತಂದು ಬಿಡುವ ಪರಿಕಲ್ಪನೆ ಸರ್ಕಾರದ ಮುಂದಿದೆ. ದಿಲ್ಲಿಯ ರಾಷ್ಟ್ರಭವನ ಉದ್ಯಾನದಲ್ಲಿ ನೂರಕ್ಕೂ ಅಧಿಕ ನವಿಲುಗಳು ವಾಸಿಸುತ್ತಿವೆ. ಇವು ಆಗಾಗ್ಗೆ ಸಂಸತ್ ಭವನದ ಆವರಣಕ್ಕೂ ಬಂದು ಗರಿ ಬಿಚ್ಚಿ ಕುಣಿಯುತ್ತವೆ.
ಇದೇ ರೀತಿಯ ಕಲ್ಪನೆಯೊಂದು ಇಲ್ಲೂ ಹುಟ್ಟಿಕೊಂಡಿದೆ. ಆದರೆ, ಕಾಡಿನಲ್ಲಿರುವ ನವಿಲುಗಳನ್ನು ತಂದು ನಾಡಿಗೆ ಬಿಡುವವರು ಯಾರು?, ಅದರ ಜವಾಬ್ದಾರಿ ಯಾರು ನೋಡಿಕೊಳ್ಳಬೇಕು ಎಂಬ ಯಕ್ಷ ಪ್ರಶ್ನೆ ಸರ್ಕಾರಕ್ಕೆ ಈಗ ಕಾಡತೊಡಗಿದೆ.
ವಿಧಾನಸೌಧವನ್ನು ಮತ್ತಷ್ಟು ಆಕರ್ಷಣೀಯ ತಾಣವನ್ನಾಗಿಸುವ ಸಲುವಾಗಿ ಇಂತಹ ಪ್ರಸ್ತಾವ ಬಂದಿದ್ದು, ನವಿಲುಗಳನ್ನು ತಂದು ಬಿಡುವ ಸಂಬಂಧ ತೋಟಗಾರಿಕೆ ಮತ್ತು ಅರಣ್ಯ ಇಲಾಖೆಯ ನಡುವೆ ತಿಕ್ಕಾಟಕ್ಕೆ ಎಡೆ ಮಾಡಿಕೊಟ್ಟಿದೆ.
ವಿಧಾನಸೌಧದ ಆವರಣದ ಉದ್ಯಾನವನವನ್ನು ತೋಟಗಾರಿಕೆ ಇಲಾಖೆ ನಿರ್ವಹಣೆ ಮಾಡುತ್ತಿದ್ದು, ನವಿಲುಗಳನ್ನು ತಂದು ಬಿಡುವ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ತೋಟಗಾರಿಕೆ ಇಲಾಖೆಗೆ ಪತ್ರ ಬರೆದು ಈ ಸಂಬಂಧ ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ನಿರ್ದೇಶಿಸಿದ್ದಾರೆ. ಆದರೆ, ನವಿಲುಗಳ ರಕ್ಷಣೆ ಮತ್ತು ಪೋಷಣೆ ಮಾಡುವುದು ಅರಣ್ಯ ಇಲಾಖೆ ವ್ಯಾಪ್ತಿಗೆ ಬರಲಿದೆ. ಈ ವಿಷಯ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ನವಿಲು ವಾಸಿಸಲು ಅನುಕೂಲವಾಗಲು ವಿಧಾನಸೌಧದ ನಾಲ್ಕು ಭಾಗಗಳಲ್ಲಿ ಈಚಲು ಗಿಡ ನೆಡುವ ಸಂಬಂಧ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮುಖ್ಯಕಾರ್ಯದರ್ಶಿಗಳ ಪತ್ರಕ್ಕೆ ಉತ್ತರ ನೀಡಿ ಕೈ ತೊಳೆದು ಕೊಂಡಿದ್ದಾರೆ.
ನವಿಲುಗಳನ್ನು ವಿಧಾನಸೌಧ, ರಾಜಭವನ ಹಾಗೂ ನಗರದ ಇತರೆ ಉದ್ಯಾನಗಳಲ್ಲಿ ಬಿಟ್ಟರೆ ಅಲ್ಲಿನ ಸೌಂದರ್ಯ ಹೆಚ್ಚಾಗುವುದು. ಜತೆಗೆ ಈ ಭಾಗದಲ್ಲಿನ ಹಾವು, ಚೇಳುಗಳನ್ನು ಆಹಾರಕ್ಕಾಗಿ ತಿನ್ನಲಿವೆ. ಇದಕ್ಕೆ ಹೆಚ್ಚಿನ ಹಣ ಸಹ ಖರ್ಚು ಮಾಡುವ ಅಗತ್ಯವೂ ಇಲ್ಲ. ದೆಹಲಿಯಲ್ಲಿ ಕೇಂದ್ರ ಸಚಿವರ ಮನೆಗಳಲ್ಲಿಯೂ ಇದೇ ರೀತಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯೂ ಮಾಡಿದರೆ ಉತ್ತಮ.
ವಿ.ಎಸ್. ಉಗ್ರಪ್ಪ. ವಿಧಾನ ಪರಿಷತ್ ಸದಸ್ಯ
ಇಲ್ಲಿ ಬದುಕುತ್ತವೆಯೇ?: ಸುಂದರವಾದ ಪರಿಸರದಲ್ಲಿ ನೆಲೆಸುವಂತಹ ನವಿಲುಗಳು ಸಾವಿರಾರು ವಿಧಾನಸೌಧ ಸುತ್ತ ಸಂಚರಿಸುವ ವಾಹನಗಳ ಶಬ್ದ ಮಾಲಿನ್ಯ, ವಾಯುಮಾಲಿನ್ಯಗಳ ಮಧ್ಯ ಎಷ್ಟರ ಮಟ್ಟಿಗೆ ನೆಮ್ಮದಿಯಿಂದ ಜೀವಿಸುತ್ತದೆಯೇ ಎಂಬ ಜಿಜ್ಞಾಸೆ ಎದುರಾಗಿದೆ ಪಕ್ಷಿ ಮತ್ತು ಪರಿಸರ ತಜ್ಞರು ಹೇಳುವಂತೆ, ನವಿಲುಗಳು ಜನ ವಸತಿ ಪ್ರದೇಶದಿಂದ ದೂರ ಉಳಿದು, ಕುರುಚಲು ಗಿಡಗಳ ಮಧ್ಯದಲ್ಲಿ ಗೂಡು ಕಟ್ಟಿಕೊಂಡು ನೆಲೆಸುತ್ತವೆ. ಅಂತಹ ಪಕ್ಷಿಯನ್ನು ನಾಡಿಗೆ ತಂದು ಬಿಟ್ಟಲ್ಲಿ ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟ. ಜತೆಗೆ ಬೆಂಗಳೂರಿನ ಹೃದಯಭಾಗದಲ್ಲಿರುವ ವಿಧಾನಸೌಧದ ಆವರಣದವಂತೂ ವಾಹನ ಸಂಚಾರದಿಂದ ವಾಯು ಮತ್ತು ಶಬ್ದ ಮಾಲಿನ್ಯದಿಂದ ಕೂಡಿರುತ್ತದೆ. ಇಂತಹ ವಾತಾವರಣದಲ್ಲಿ ನವಿಲುಗಳು ವಾಸಿಸಲು ಸಾಧ್ಯವೇ? ಒಂದು ವೇಳೆ ಒತ್ತಾಯಪೂರ್ವಕವಾಗಿ ತಂದು ಬಿಟ್ಟರೂ ಬದುಕುಳಿಯಲಿವೆ ಎಂಬುದನ್ನು ಹೇಳಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಸುತ್ತಮುತ್ತಲ ಅರಣ್ಯವಿರುವಲ್ಲಿ ನವಿಲುಗಳು ವಾಸಿಸುತ್ತಿವೆ. ಆದರೆ, ನಗರದ ಹೃದಯ ಭಾಗವಾದ ವಿಧಾನಸೌಧದ ಆವರಣದಲ್ಲಿ ಜೀವಿವುದು ಕಷ್ಟಸಾಧ್ಯ. ನಗರದಲ್ಲಿ ಪ್ರತಿ ದಿನ ಲಕ್ಷಾಂತರ ವಾಹನಗಳ ಸಂಚರಿಸುತ್ತಿದ್ದು, ಪರಿಸರದಲ್ಲಿನ ಗಾಳಿ ಶುದ್ಧವಾಗಿಲ್ಲ. ಅಲ್ಲದೆ, ನಿರಂತರವಾಗಿ ಶಬ್ದ ಮಾಲಿನ್ಯವಾಗುತ್ತಿದೆ. ಈ ವಾತಾವರಣ ನವಿಲುಗಳು ಜೀವಿಸುವುದು ಕಷ್ಟ.
ದೀಪಿಕಾ ಬಾಜಪೇಯಿ, ಬೆಂಗಳೂರು ನಗರದ ಅರಣ್ಯ ಉಪಸಂರಕ್ಷಣಾಧಿಕಾರಿ
ವಿ.ಎಸ್. ಉಗ್ರಪ್ಪ ಕಲ್ಪನೆ: ನವಿಲುಗಳನ್ನು ತಂದು ಬಿಡುವ ಪರಿಕಲ್ಪನೆ ವಿಧಾನಪರಿಷತ್ ಸದಸ್ಯ ವಿ. ಎಸ್. ಉಗ್ರಪ್ಪ ಅವರದ್ದಾಗಿದ್ದು, ವಿಧಾನಸೌಧ, ರಾಜಭವನ, ಕಬ್ಬನ್‌ಪಾರ್ಕ್ ಹಾಗೂ ಲಾಲ್‌ಬಾಗ್ ಗಳಲ್ಲಿನ ಸೌಂದರ್ಯ ಹೆಚ್ಚಿಸಬೇಕು. ಈ ಹಿನ್ನೆಲೆಯಲ್ಲಿ ರಾಷ್ಟ್ರ ಪಕ್ಷಿ ನವಿಲುಗಳನ್ನು ತಂದು ಇಲ್ಲಿ ಬಿಡಬೇಕು. ಆ ಮೂಲಕ ಸಾರ್ವಜನಿಕರು ಹಾಗೂ ಪ್ರವಾಸಿಗರನ್ನು ರಂಜಿಸಲು ಅವಕಾಶ ಕಲ್ಪಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ ಅಲ್ಲದೆ, ನವಿಲು ವಾಸಿಸಲು ಅನುಕೂಲವಾಗುವಂತೆ ಈಚಲು ಗಿಡಗಳನ್ನು ವಿಧಾನಸೌಧದ ನಾಲ್ಕು ಭಾಗಗಳಲ್ಲಿ ನೆಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈ ಮನವಿ ಪತ್ರ ಸ್ವೀಕರಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪತ್ರವನ್ನು ತೋಟಗಾರಿಕಾ ಇಲಾಖೆ ಆಯುಕ್ತರಿಗೆ ರವಾನಿಸಿ ಈ ಸಂಬಂಧ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
