ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿರುವ ಸರ್ಕಾರ, ಬೋರ್‌ವೆಲ್ ಕೊರೆಸಲು ಹಣ ನೀಡುತ್ತದೆ. ಆದರೆ ಈ ಹಣ ಅರ್ಹ ರೈತನಿಗೆ ತಲುಪುವುದೇ ಇಲ್ಲ. ಸರ್ಕಾರದ ಹಣ ಪಡೆಯಲು ಫೋಟೋ ಸ್ಟುಡಿಯೋದಲ್ಲೇ ನಡೆಯುತ್ತದೆ ನಕಲಿ ಬಿಲ್ ಸೃಷ್ಟಿಸುವ ದಂಧೆ. ಗ್ರಾಮ ಪಂಚಾಯತ್ ಪಿಡಿಓ ಹಾಗೂ ಉಪಾಧ್ಯಕ್ಷನ ಜೇಬಿಗೆ ಸೇರುತ್ತದೆ ಲಕ್ಷ ಲಕ್ಷ ಹಣ.

ಬೀದರ್(ನ.24): ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿರುವ ಸರ್ಕಾರ, ಬೋರ್‌ವೆಲ್ ಕೊರೆಸಲು ಹಣ ನೀಡುತ್ತದೆ. ಆದರೆ ಈ ಹಣ ಅರ್ಹ ರೈತನಿಗೆ ತಲುಪುವುದೇ ಇಲ್ಲ. ಸರ್ಕಾರದ ಹಣ ಪಡೆಯಲು ಫೋಟೋ ಸ್ಟುಡಿಯೋದಲ್ಲೇ ನಡೆಯುತ್ತದೆ ನಕಲಿ ಬಿಲ್ ಸೃಷ್ಟಿಸುವ ದಂಧೆ. ಗ್ರಾಮ ಪಂಚಾಯತ್ ಪಿಡಿಓ ಹಾಗೂ ಉಪಾಧ್ಯಕ್ಷನ ಜೇಬಿಗೆ ಸೇರುತ್ತದೆ ಲಕ್ಷ ಲಕ್ಷ ಹಣ.

ಬೀದರ್ ಜಿಲ್ಲೆಯ ಕಮಲನಗರ ಗ್ರಾಮ ಪಂಚಾಯತ್‌ನ 14 ನೇ ಹಣಕಾಸು ಯೋಜನೆ ಅಡಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದ್ದು, ಫೋಟೋಶಾಪ್‌'ನಲ್ಲಿ ಹಳೆ ಫೋಟೊವೊಂದನ್ನು ಎಡಿಟ್ ಮಾಡಿ ಹೊಸ ಸ್ವರೂಪ ನೀಡಿ ಇಂತಹ ಕೆಲಸ ಮಾಡಲಾಗುತ್ತಿದೆ. ಇನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಲು ಗೈಡ್ ಮಾಡುವವರು ಬೇರೆ ಯಾರೂ ಅಲ್ಲ ಪಂಚಾಯತಿ ಉಪಾಧ್ಯಕ್ಷ. 

ಹಳೆ ಬೋರ್​ವೆಲ್​ ಫೋಟೋಗಳನ್ನ ಎಡಿಟ್​ ಮಾಡಿ ಹೊಸ ಬೋರ್​ವೆಲ್​ ಕೊರೆಸಲಾಗಿದೆ ಎಂದು ತೋರಿಸಿ ಲಕ್ಷ ಲಕ್ಷ ಲೂಟಿ ಮಾಡಲಾಗುತ್ತಿದೆ. ಗ್ರಾಮ ಪಂಚಾಯತ್ ಪಿಡಿಓ, ಉಪಾಧ್ಯಕ್ಷ ಇಬ್ಬರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಂಚಾಯತ್​'ಗೆ ಬರುವ ಅನುದಾನವನ್ನು ನುಂಗಿ ನೀರು ಕುಡಿದಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಗ್ರಾಮ ಪಂಚಾಯತ್ ಪಿಡಿಓ ಸುಭಾಷ್ ಮತ್ತು ಗ್ರಾ.ಪಂ ಉಪಾಧ್ಯಕ್ಷ ಸಂತೋಷ ಬಿರಾದರ, ನಕಲಿ ದಾಖಲೆ ಸೃಷ್ಟಿಸಿ 60 ಲಕ್ಷಕ್ಕೂ ಹೆಚ್ಚು ಅನುದಾನವನ್ನು ಗೋಲ್ ಮಾಲ್ ಮಾಡಿದ್ದಾರೆ. ಇವ್ರ ದಂಧೆಗೆ ಹಿರಿಯ ಅಧಿಕಾರಿಗಳು ಕೂಡ ಸಾಥ್ ನೀಡಿದ್ದಾರೆ. ಇದನ್ನು ಕೇಳಲು ಹೋದವರಿಗೆ ಈ ಲೂಟಿಕೋರರು ಜೀವ ಬೆದರಿಕೆ ಹಾಕುತ್ತಾರಂತೆ.

ಒಟ್ಟಿನಲ್ಲಿ ಗ್ರಾಮ ಪಂಚಾಯತನಲ್ಲಿ ಹೀಗೆ ಫೋಟೋಗಳು ಎಡಿಟ್ ಮಾಡಿ 60 ಲಕ್ಷ ಅನುದಾನ ಜೇಬಿಗೆ ಇಳಿಸಿಕೊಂಡಿದ್ದಾರೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳ ಈ ಲೂಟಿಕೋರರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ದಂಧೆಗೆ ಬ್ರೇಕ್ ಹಾಕಬೇಕಾಗಿದೆ.