ಸೈಕಲ್‌'ನಲ್ಲಿ ಬಂದ ಶರ್ಮಾರ ಬಗ್ಗೆ ಅಖಿಲೇಶ್‌ ಸಂತಸ ವ್ಯಕ್ತಪಡಿಸಿದ್ದಾರೆ. ರಿಕ್ಷಾ ಚಾಲಕನಿಗೆ ದೀಪಾವಳಿ ಕೊಡುಗೆಯಾಗಿ 6 ಸಾವಿರ ರೂ. ನೀಡಿ​ದ್ದಾರೆ.

ಲಖನೌ: ಸಾಮಾನ್ಯವಾಗಿ ಕಂಪನಿಗಳ ಮುಖ್ಯಸ್ಥರು ಅಥವಾ ಶ್ರೀಮಂತರೆಂದರೆ ಐಶಾರಾಮಿ ಕಾರುಗಳಲ್ಲೇ ಓಡಾಡುತ್ತಾರೆ ಎಂಬ ಕಲ್ಪನೆ ನಮ್ಮದು, ಅದು ಸತ್ಯವೂ ಹೌದು. ಆದರೆ, ಪ್ರಮುಖ ಅಂತರ್ಜಾಲ ಮಾರಾಟ ಸಂಸ್ಥೆ ‘ಪೇಟಿಎಂ' ಮುಖ್ಯಸ್ಥ ವಿಜಯ್‌ ಶೇಖರ್‌ ಅವ​ರು ಉತ್ತರಪ್ರದೇಶ ಸಿಎಂ ಅಖಿಲೇಶ್‌ ಯಾದವ್‌ರನ್ನು ಭೇಟಿ ಮಾಡಲು ಸೈಕಲ್‌ ರಿಕ್ಷಾದಲ್ಲಿ ಬಂದಿದ್ದಾರೆ. 

‘ಯಶ್‌ ಭಾರ್ತಿ' ಪ್ರಶಸ್ತಿ ಸ್ವೀಕರಿಸಲು ಲಖನೌಗೆ ಬಂದಿದ್ದ ಶರ್ಮಾ ಅವರು ಅಖಿ​ಲೇಶ್‌'ರನ್ನು ಭೇಟಿ ಮಾಡಲು ಹೊರಟಿದ್ದರು. ಅರ್ಧ​ದ​ಲ್ಲೇ ಲಖನೌನ ಸಂಚಾರದಟ್ಟಣೆಯಲ್ಲಿ ​ಅ​ವರ ಕಾರು ಸಿಲುಕಿಕೊಂಡಿ​ತು. ಕೂಡಲೇ ಅವರು ಕಾರಿ​ನಿಂದ ಇಳಿದು, ಅಲ್ಲೇ ಇದ್ದ ಸೈಕಲ್‌ ರಿಕ್ಷಾ​ವನ್ನು ಏರಿ​ದರು.
ಕಾಳಿದಾಸ ಮಾರ್ಗದಲ್ಲಿರುವ ಅಖಿಲೇಶ್‌ ಅವರ ನಿವಾಸಕ್ಕೆ ಬಂದೊಡನೆ, ಶರ್ಮಾ ಹಾ​ಗೂ ರಿಕ್ಷಾ ಚಾಲಕನನ್ನು ಸಂಪೂರ್ಣ ಭದ್ರತಾ ಪರೀಕ್ಷೆ ನಡೆಸಿ ಪ್ರವೇಶ ನೀಡಲಾ​ಯಿ​ತು.

ಸೈಕಲ್‌'ನಲ್ಲಿ ಬಂದ ಶರ್ಮಾರ ಬಗ್ಗೆ ಅಖಿಲೇಶ್‌ ಸಂತಸ ವ್ಯಕ್ತಪಡಿಸಿದ್ದಾರೆ. ರಿಕ್ಷಾ ಚಾಲಕನಿಗೆ ದೀಪಾವಳಿ ಕೊಡುಗೆಯಾಗಿ 6 ಸಾವಿರ ರೂ. ನೀಡಿ​ದ್ದಾರೆ. ಅಷ್ಟೇ ಅಲ್ಲ, ಚಾಲಕನಿಗೆ ಮನೆ, ಇ-​ರಿಕ್ಷಾ ಹಾಗೂ ಆತನ ಪತ್ನಿಗೆ ಸಮಾಜ​ವಾದಿ ಪಿಂಚಣಿ ಯೋಜನೆಯ ಲಾಭ​ವನ್ನು ನೀಡು​ವುದಾಗಿ ಭರವಸೆ ನೀಡಿದ್ದಾರೆ. ಶರ್ಮಾ ಸೈಕಲ್‌ ರಿಕ್ಷಾ​ದಲ್ಲಿ ಬಂದ ಫೋಟೋ​ವನ್ನು ಅಖಿಲೇಶ್‌ ಟ್ಟಿಟ​ರ್‌'​ನಲ್ಲಿ ಅಪ್‌​ಲೋಡ್‌ ಮಾಡಿ​ದ್ದಾರೆ.