Asianet Suvarna News Asianet Suvarna News

2 ಕಪ್ ಟೀ ಕುಡಿದು ದಿನ ತಳ್ಳುತ್ತಿದ್ದ ವಿಜಯ್ ಈಗ ಕೋಟ್ಯಾಧೀಶ; ಇಂಗ್ಲೀಷ್ ಗೊತ್ತಿಲ್ಲದ ಇವರು ಪೇಟಿಎಂ ಸ್ಥಾಪಿಸಿದ ರೋಚಕ ಕಥೆಯಿದು

ಬೇರೆಲ್ಲ ಹುಡುಗ್ರು  15-16 ವರ್ಷಕ್ಕೆ 10 ಕ್ಲಾಸ್ ಪಾಸ್ ಮಾಡಿದ್ರೆ,  ಈತ 14 ವರ್ಷಕ್ಕೆ ಸೆಕೆಂಡ್ ಪಿಯುಸಿ ಪಾಸ್ ಮಾಡಿದ  ಜೀನಿಯಸ್ ಹುಡುಗ. ಹಾಗಂತ ಬದುಕೇನೂ ಹೂವಿನ ಹಾಸಿಗೆಯಾಗಿರಲಿಲ್ಲ. ಮಹತ್ವಾಕಾಂಕ್ಷಿ  ಹುಡುಗನಿಗೆ ನಂಬಿದವರೇ ಬೆನ್ನ ಹಿಂದೆ  ಚೂರಿ ಹಾಕಿದ್ರು. ಹುಡುಗ ಛಲ ಯಾವ ಲೆವೆಲ್‌ಗಿತ್ತು ಅಂದ್ರೆ, ಆತ ಎಲ್ಲ  ಅವಮಾನ ನೋವುಗಳಿಂದ ಫೀನಿಕ್ಸ್‌ನಂತೆ ಮೇಲೇಳ್ತಾ ಬಂದ. ಇಂಗ್ಲಿಷ್‌ನ  ಗಂಧಗಾಳಿ ಗೊತ್ತಿರದ, ಊಟದ ಹಣ ಉಳಿಸಿ ಕಂಪೆನಿ ಆರಂಭಿಸಿದ ಹುಡುಗ  ಇಂದು ತನ್ನ 36 ನೇ ವಯಸ್ಸಿಗೆ 4.8 ಬಿಲಿಯನ್ ಡಾಲರ್ (ಅಂದಾಜು 29,250 ಕೋಟಿ ರು.)ಗಳ ಒಡೆಯ.

Pay tm Founder Vijayshekhar

ಬೆಂಗಳೂರು (ಮಾ. 31): ಬೇರೆಲ್ಲ ಹುಡುಗ್ರು  15-16 ವರ್ಷಕ್ಕೆ 10 ಕ್ಲಾಸ್ ಪಾಸ್ ಮಾಡಿದ್ರೆ,  ಈತ 14 ವರ್ಷಕ್ಕೆ ಸೆಕೆಂಡ್ ಪಿಯುಸಿ ಪಾಸ್ ಮಾಡಿದ  ಜೀನಿಯಸ್ ಹುಡುಗ. ಹಾಗಂತ ಬದುಕೇನೂ ಹೂವಿನ ಹಾಸಿಗೆಯಾಗಿರಲಿಲ್ಲ. ಮಹತ್ವಾಕಾಂಕ್ಷಿ  ಹುಡುಗನಿಗೆ ನಂಬಿದವರೇ ಬೆನ್ನ ಹಿಂದೆ  ಚೂರಿ ಹಾಕಿದ್ರು. ಹುಡುಗ ಛಲ ಯಾವ ಲೆವೆಲ್‌ಗಿತ್ತು ಅಂದ್ರೆ, ಆತ ಎಲ್ಲ  ಅವಮಾನ ನೋವುಗಳಿಂದ ಫೀನಿಕ್ಸ್‌ನಂತೆ ಮೇಲೇಳ್ತಾ ಬಂದ. ಇಂಗ್ಲಿಷ್‌ನ  ಗಂಧಗಾಳಿ ಗೊತ್ತಿರದ, ಊಟದ ಹಣ ಉಳಿಸಿ ಕಂಪೆನಿ ಆರಂಭಿಸಿದ ಹುಡುಗ  ಇಂದು ತನ್ನ 36 ನೇ ವಯಸ್ಸಿಗೆ 4.8 ಬಿಲಿಯನ್ ಡಾಲರ್ (ಅಂದಾಜು 29,250 ಕೋಟಿ ರು.)ಗಳ ಒಡೆಯ.

ಹೆಸರು ವಿಜಯ್‌ಶೇಖರ್ ಶರ್ಮಾ. ಒನ್‌೯೭ ಕಮ್ಯೂನಿಕೇಶನ್‌ನ ಸ್ಥಾಪಕ.  ದೇಶಾದ್ಯಂತ ಎಲ್ಲರ ಮನೆ ಮಾತಾಗಿರುವ ಪೇಟಿಎಂನ ಎಂಡಿ. ಪೇಟಿಎಂನ  ಕ್ಷಿಪ್ರ ಬೆಳವಣಿಗೆಗೆ ಸಾಕ್ಷಿಯೆಂಬಂತೆ, ಕೆಲವೇ ದಿನಗಳ ಹಿಂದೆ ಅನಿಲ್ ಅಂಬಾನಿ ಅವರ ರಿಲಯನ್ಸ್ ಕ್ಯಾಪಿಟಲ್ ತನ್ನ ಬಳಿಯಿದ್ದ ಪೇಟಿಎಂನ ಷೇರಿನ ಒಂದು  ಭಾಗವನ್ನಷ್ಟೇ 275  ಕೋಟಿಗೆ ಮಾರಾಟ ಮಾಡಿತ್ತು! 2010  ರಲ್ಲಿ ರಿಲಯನ್ಸ್ ಈ  ಷೇರು ಖರೀದಿಸಿದಾಗ ಇದ್ದ ಬೆಲೆಗಿಂತ ಈಗ ಅದು 29 ಪಟ್ಟು ಹೆಚ್ಚಾಗಿತ್ತು!

ಇಂಗ್ಲಿಷ್ ಭೂತ!
ವಿಜಯ ಶೇಖರ ಶರ್ಮಾ ಉತ್ತರಪ್ರದೇಶದ ಅಲಿಘರ್‌ನ ಕೆಳಮಧ್ಯಮ ವರ್ಗದಿಂದ ಬಂದ ಹಿಂದಿಯಲ್ಲೇ ಪಿಯುಸಿವರೆಗೆ ಓದಿದ ಪ್ರೈಮರಿ ಶಾಲೆ  ಶಿಕ್ಷಕರ ಮಗ. 14 ವರ್ಷದಲ್ಲಿ ಪಿಯುಸಿ ಪಾಸ್ ಮಾಡಿ ಜೀನಿಯಸ್ ಎನಿಸಿಕೊಂಡ ವಿಜಯ್, ದೆಹಲಿಯ ಇಂಜಿನಿಯರಿಂಗ್ ಕಾಲೇಜಿಗೆ ಬಂದರೆ  ಪರಿಸ್ಥಿತಿ ಶೋಚನೀಯವಾಗಿತ್ತು. ಇಂಗ್ಲಿಷ್‌ನ ಗಂಧಗಾಳಿಯೂ ಇಲ್ಲದ ಈತ ಕ್ಲಾಸ್‌ನಲ್ಲಿ ಹಿಂದಿನ ಬೆಂಚ್‌ನಲ್ಲಿ ಕೀಳರಿಮೆಯಲ್ಲಿ ನರಳುತ್ತ ಕೂತಿರುತ್ತಿದ್ದ. ಲೆಕ್ಚರರ್ಸ್‌ ಇಂಗ್ಲೀಷ್‌ನಲ್ಲಿ ಕೇಳುವ ಪ್ರಶ್ನೆಗಳು ನಡುಗಿಸುತ್ತಿದ್ದವು. ಸಹಪಾಠಿಗಳ  ಅಪಹಾಸ್ಯ ನೋಯಿಸುತ್ತಿತ್ತು. ಒಮ್ಮೆ ಇಂಜಿನಿಯರಿಂಗ್ ಕಂಪ್ಲೀಟ್ ಮಾಡಿ 10,000 ಸಂಬಳ ಪಡೆಯುವುದೇ ಆ ದಿನಗಳ ದೊಡ್ಡ ಕನಸಾಗಿತ್ತು. ಅದೃಷ್ಟವಶಾತ್ ಈತ ವಾಸವಿದ್ದ ಹಾಸ್ಟೆಲ್‌ನ ಹುಡುಗರು ಈತನ ಬೆಂಬಲಕ್ಕೆ  ನಿಲ್ಲುತ್ತಿದ್ದರು. ಹಾಗಾಗಿ ಕೊಂಚ ಉಸಿರಾಡಲಾಗುತ್ತಿತ್ತು.  ತಾನು ಇಂಗ್ಲಿಷ್ ಕಲಿತೇ ಕಲಿಯುತ್ತೇನೆ ಎಂಬ ಛಲದಲ್ಲಿ ಲೈಬ್ರೆರಿಯಲ್ಲಿ  ಒಂದೇ ಸವನೆ ಇಂಗ್ಲಿಷ್ ಪೇಪರ್ ಓದಲಾರಂಭಿಸಿದೆ. ಇಂಟರ್‌ನೆಟ್
ಜಾಲಾಡುವುದೂ ಅಭ್ಯಾಸವಾಯ್ತು. ಆಗ ಟೆಕ್ನೋ ಉದ್ಯಮದ ದಂತಕತೆ  ಸಬೀರ್ ಭಾಟಿಯಾ ಬಗ್ಗೆ ತಿಳಿಯಿತು. ಸಾಮಾನ್ಯ ಇಂಜಿನಿಯರ್ ಆಗಿ ಹತ್ತು  ಸಾವಿರ ದುಡಿಯುವುದಕ್ಕಿಂತ ಸ್ವತಃ ಏನಾದ್ರೂ ಮಾಡಿ ದೇಶಕ್ಕೊಂದು ಹೆಸರು
ತರುವಂತಾದರೆ.. ಎಂಬ ಕನಸು ಹುಟ್ಟಿದ್ದು ಈ ದಿನಗಳಲ್ಲೇ.

ಮೊದಲ ಕಲರ್ ಟಿವಿ
‘ಕಂಪೆನಿ ಮಾರಿ ಬಂದ ಹಣದಲ್ಲಿ ಮನೆಗೊಂದು ಕಲರ್ ಟಿವಿ ಖರೀದಿಸಿದೆ. ನಮ್ಮ ಮನೆಯಲ್ಲಿ ಆವರೆಗೆ ಟಿವಿ ಇರಲಿಲ್ಲ. ಅಮ್ಮ ನಾನು ಕೊಟ್ಟ ಅತ್ಯುತ್ತಮ  ಸೀರೆ ಕಂಡು ಬೆರಗಾದಳು. ನನ್ನ ಸಹೋದರಿಯರ ಮದುವೆಗೆ ಅಪ್ಪ ಮಾಡಿದ  ಸಾಲವನ್ನೆಲ್ಲ ತೀರಿಸಿದೆ. ನಾವೀಗ ಸಾಲ ಮುಕ್ತಗೊಂಡ ನಿರಾಳತೆ  ಅನುಭವಿಸಿದೆವು. ಇಷ್ಟಾಗಿಯೂ ಕೈಯಲ್ಲಿ ಸ್ವಲ್ಪ ಹಣ ಉಳಿಯಿತು. ನನ್ನ ಪೋಷಕರಿಗೆ ನನ್ನ ಕೆಲಸದಿಂದ ಇಷ್ಟೆಲ್ಲ ಸಂಪಾದಿಸಲು ಹೇಗೆ ಸಾಧ್ಯವಾಯಿತು ಅನ್ನೋದು ಅರ್ಥವೇ ಆಗಲಿಲ್ಲ. ಆದರೆ ನನ್ನ ಬಗ್ಗೆ ಹೆಮ್ಮೆ ಇತ್ತು..’ ಎನ್ನುತ್ತ ಆ ದಿನಗಳನ್ನು ಸ್ಮರಿಸುತ್ತಾರೆ ವಿಜಯ್.

ಮತ್ತೊಂದು ಕಂಪೆನಿ
ವಿಜಯ್ ಕೈಯಲ್ಲಿ ೨ ಲಕ್ಷದಷ್ಟು ಹಣವಿತ್ತು. ಸುಮ್ಮನೆ ಕೂರುವ ಆಸಾಮಿ  ಅಲ್ಲ. ಹಳೆಯ ಗೆಳೆಯರೊಂದಿಗೆ ಸೇರಿ ಇನ್ನೊಂದು ಕಂಪೆನಿ ಆರಂಭಿಸಲು ಮುಂದಾದರು. ಅದುವೇ ಒನ್‌97. ಬಿಎಸ್‌ಎನ್‌ಎಲ್ ದೂರವಾಣಿಗೆ  ಡೈರೆಕ್ಟರಿ ಎನ್‌ಕ್ವಾಯರಿ ನೀಡುವ ಸೇವೆ. ಕೆಲವೇ ದಿನ ನಡೆದ ಈ ಕಂಪೆನಿ,  9/11 ನ ಘಟನೆಯ ಬಳಿಕ ನೆಲಕ್ಕಚ್ಚಿತ್ತು. ಜೊತೆಗಿದ್ದ ಗೆಳೆಯರು ಕಂಪೆನಿ  ತೊರೆದು ಹೋದರು. ‘ಕೈಯಲ್ಲಿ ಕಾಸಿರಲಿಲ್ಲ. ಕಾರಲ್ಲಿ ಓಡಾಡುತ್ತಿದ್ದವನು ಬಸ್‌ನಲ್ಲಿ  ಓಡಾಡಲಾರಂಭಿಸಿದೆ. ಬರೀ 2 ಕಪ್ ಟೀಯಲ್ಲಿ ದಿನ ದೂಡುತ್ತಿದ್ದೆ. ಬಹಳ  ಕ್ರೂರವಾಗಿದ್ದ ದಿನಗಳವು.ತಂದೆ ಮತ್ತೆ ಕೆಲಸಕ್ಕೆ ಸೇರಿಕೊಳ್ಳಲು ಹೇಳಿದರು.  ನನಗಾಗ 25 ವರ್ಷ ವಯಸ್ಸು. ಮನೆಯವರು ಮದುವೆಯಾಗಲು  ಒತ್ತಾಯಿಸುತ್ತಿದ್ದರು. ಆದರೆ ಕೈಯಲ್ಲೊಂದು ಕೆಲಸವಿಲ್ಲದವನನ್ನು ಯಾರು ಮದುವೆಯಾಗುತ್ತಾರೆ’ ಅನ್ನುವಾಗ ವಿಜಯ್ ಮುಖದಲ್ಲಿ ನೋವಿನ ಗೆರೆ.  ಹೊಟ್ಟೆಪಾಡು, ಕೆಲಸ ಮಾಡಲೇಬೇಕಿತ್ತು. ಕಂಪೆನಿಯೊಂದರಲ್ಲಿ ಕನ್ಸಲ್ಟೆಂಟ್  ಆಗಿ ಸೇರಿಕೊಂಡರು. ಆಗಷ್ಟೇ ಸ್ಮಾರ್ಟ್‌ಫೋನ್ ಜಮಾನ ಶುರುವಾಗಿತ್ತು. ಅಸಾಮಾನ್ಯ ಯೋಚನೆಗಳಿದ್ದ ವಿಜಯ್‌ಗೆ, ಈ ಸ್ಮಾರ್ಟ್‌ಫೋನ್ ಗಳನ್ನಿಟ್ಟುಕೊಂಡೇ ಜನರ ಜೀವನಶೈಲಿಯಲ್ಲೇ ಬದಲಾವಣೆ ತರುವಂಥಾ  ಏನಾದ್ರೂ ಮಾಡಬೇಕು ಅನ್ನೋ ಯೋಚನೆ.
 

ಪೇಟಿಎಂ ಎಂಬ ಅದೃಶ್ಯ ಪರ್ಸ್
2010 ರಲ್ಲಿ ಪೇಟಿಎಂ ಎಂಬ ಮೊಬೈಲ್ ವಾಲೆಟ್ ಶುರುವಾದದ್ದು ಹೀಗೆ. ಪೇಟಿಎಂ ಅಂದರೆ ಪೇ ಥ್ರೂ ಮೊಬೈಲ್.ಬಹಳ ಸುಲಭದಲ್ಲಿ ಸ್ಮಾರ್ಟ್‌ಫೋನ್'ನಲ್ಲಿ ಕೋಡ್‌ಅನ್ನು ಬಳಸಿ ಹಣ ವರ್ಗಾವಣೆ ಮಾಡುವ ವ್ಯವಸ್ಥೆ. ಆರಂಭದಲ್ಲಿ ಇದರಲ್ಲಿ ಹೂಡಿಕೆ ಮಾಡಲು ಯಾರೂ ಮುಂದಾಗಲಿಲ್ಲ. ಕಣ್ಣೆದುರಿಗೆ ಇಲ್ಲದ ಹಣ, ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವ ಐಡಿಯಾವನ್ನು ಅರಗಿಸಿಕೊಳ್ಳವುದು ಅವರಿಗೆ ಸಾಧ್ಯವಿರಲಿಲ್ಲ. ಆದರೆ  2011 ರಲ್ಲಿ ಕಂಪೆನಿಯ ಅದ್ಭುತ ಕಾರ್ಯನಿರ್ವಹಣೆ ಕಂಡು ಹಲವರು
ಹೂಡಿಕೆಗೆ ಮುಂದಾದರು. ‘ನಮಗೆ ಜನರಲ್ಲಿ ಈ ವ್ಯವಹಾರದ ಬಗ್ಗೆ ವಿಶ್ವಾಸ ಮೂಡಿಸುವುದು ಮೊದಲ ಸವಾಲಾಗಿತ್ತು. ಅದಕ್ಕಾಗಿ ನಾವು ದಿನದ ೨೪ ಗಂಟೆ ಕಸ್ಟಮರ್ ಕೇರ್ ವ್ಯವಸ್ಥೆ ಮಾಡಿದೆವು. ಜನರ ಸಂದೇಹಕ್ಕೆ ಸಮರ್ಪಕ ಉತ್ತರ ನೀಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸಫಲವಾದೆವು. ಇದಕ್ಕಾಗಿ ಕಂಪೆನಿ ತನ್ನ ವಹಿವಾಟಿನ  ಶೇ.30 ರಷ್ಟು ವ್ಯಯಿಸಿತ್ತು’ ಅಂತಾರೆ ವಿಜಯ್.

ಜನರ ಬಾಯಿಂದ ಬಾಯಿಗೆ ಪೇಟಿಎಂ ವ್ಯವಸ್ಥೆಯ ಪ್ರಯೋಜನ ತಲುಪಿತು. ಟ್ವಿಟರ್, ಫೇಸ್‌ಬುಕ್ ಮೊದಲಾದ ಸಾಮಾಜಿಕ ತಾಣಗಳಲ್ಲೆಲ್ಲ  ಪ್ರಚಾರ ಶುರು ಮಾಡಿದರು. ಕಂಪೆನಿಯ ವ್ಯವಹಾರದ ಬಗ್ಗೆ ಸಣ್ಣದೊಂದು ಕಂಪ್ಲೇಂಟ್ ಬಂದರೂ ತ್ವರಿತವಾಗಿ ಸರಿಪಡಿಸಲಾಗುತ್ತಿತ್ತು. ಜನ ನಂಬಿದರು. ಅವರ ನಂಬಿಕೆ, ವಿಶ್ವಾಸ ಯಶಸ್ಸಿನ ಮೊದಲ ಮೆಟ್ಟಿಲಾಯ್ತು. ಹೀಗೆ ಶುರುವಾದ ಸಕ್ಸಸ್‌ಗ್ರಾಫ್ ಏರುತ್ತಲೇ ಹೋಯಿತು. ಜಾಗತಿಕ ಮಟ್ಟದ ದೈತ್ಯ ಹೂಡಿಕೆದಾರರೆಲ್ಲ ಪೇಟಿಎಂನ ಶೇರು ಖರೀದಿಗೆ  ಮುಗಿಬಿದ್ದರು. ಆಲಿಬಾಬದಂಥ ಜಾಗತಿಕ ಮಟ್ಟದ ಕಂಪೆನಿ ಇದರಲ್ಲಿ ಹೂಡಿಕೆ  ಮಾಡಿತು. ಹೂಡಿಕೆದಾರರನ್ನು ಕಂಪೆನಿ ಪಾಲುದಾರರು ಎನ್ನುವ ವಿಜಯ್, ವ್ಯವಹಾರದಲ್ಲಿ ಪಾರದರ್ಶಕತೆ ಬಹಳ ಮುಖ್ಯ ಅನ್ನುತ್ತಾರೆ.
‘ಒಂದು ಹಂತದವರೆಗೆ ಕಂಪೆನಿ ಬೆಳೆಯುತ್ತ ಹೋಗುತ್ತದೆ. ಒಮ್ಮೆ ತನ್ನ  ಬೆಳವಣಿಗೆಯ ತುದಿ ತಲುಪಿದ ಮೇಲೆ ಅದನ್ನು ಹಾಗೇ ಮುಂದುವರಿಸಿಕೊಂಡು  ಹೋಗುವುದೂ ಒಂದು ಸವಾಲು. ತನ್ನೆಲ್ಲ ಉದ್ಯೋಗಿಗಳನ್ನು ಟೀಮ್ ಮೇಟ್ಸ್
ಅಂತ ಕರೀತಾರಿವರು.  ಯಾವುದೇ ಬ್ಯುಸಿನೆಸ್ ಡಿಗ್ರಿಗಳಿಲ್ಲದೇ, ಕೆಳಮಧ್ಯಮವರ್ಗದಿಂದ  ಬಂದು ‘ಪೇಟಿಎಂ’ ಕಟ್ಟಿ ಬೆಳೆಸಿದ ವಿಜಯ್ ಶೇಖರ್ ಶರ್ಮಾ ಯುವ ಉದ್ಯಮಿಗಳ ದಂತಕಥೆಯಾಗಿದ್ದಾರೆ. ರತನ್ ಟಾಟಾರಂಥ ದೈತ್ಯ  ಉದ್ಯಮಿಗಳು ಇವರ ಕಾರ್ಯವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.  ‘ಉದ್ಯಮದಲ್ಲಿ ಹುಡುಗರಿಗೂ ಗಂಡಸರಿಗೂ ವ್ಯತ್ಯಾಸ ಇದೆ. ಹುಡುಗರು  ಉದ್ಯಮವನ್ನು ಚಿಮ್ಮಿಸಿ ಎತ್ತರಕ್ಕೇರಿಸಿ ಮಾರಿಹೋಗಬಲ್ಲರು. ಆದರೆ ಒಬ್ಬ ಗಂಡಸು ಕಂಪೆನಿಯನ್ನು ಕಟ್ಟಿ ಸ್ವಂತ ಮಗುವಿನಂತೆ ಪೋಷಿಸುತ್ತಾನೆ’ ಎನ್ನುವ ವಿಜಯ್ ಉದ್ಯಮಿಗಳಿಗೆ ಮಾದರಿ.
 

Follow Us:
Download App:
  • android
  • ios