ಪತಂಜಲಿ ಹೆಸರಿನಡಿಯಲ್ಲಿರುವ ಉತ್ತನ್ನಗಳಲ್ಲಿ ಸುಧಾರಣೆ ಕಾಣದೇ ಇದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹರಿದ್ವಾರದ ಜಿಲ್ಲಾ ಆಹಾರ ಸುರಕ್ಷಾ ಇಲಾಖೆಗೆ ಕೋರ್ಟ್ ಆದೇಶಿಸಿದೆ.

ಹರಿದ್ವಾರ(ಡಿ. 15): ಯೋಗ ಗುರು ಬಾಬಾ ರಾಮದೇವ್ ಅವರ ಮಾಲಕತ್ವದ ಪತಂಜಲಿ ಆಯುರ್ವೇದ ಸಂಸ್ಥೆಗೆ ಸ್ಥಳೀಯ ನ್ಯಾಯಾಲಯವೊಂದು ದಂಡ ವಿಧಿಸಿದೆ. ಜನರಿಗೆ ದಾರಿ ತಪ್ಪಿಸುವ ರೀತಿಯಲ್ಲಿ ಜಾಹೀರಾತುಗಳನ್ನು ನೀಡುತ್ತಿದೆ ಎಂಬ ಕಾರಣಕ್ಕೆ ಪತಂಜಲಿ ಸಂಸ್ಥೆಯ ಮೇಲೆ ದಂಡ ಹೇರಲಾಗಿದೆ. ಬೇರೆ ಸಂಸ್ಥೆಯಿಂದ ಉತ್ಪಾದನೆಯಾದ ಕೆಲ ವಸ್ತುಗಳಿಗೆ ತನ್ನ ಲೇಬಲ್ ಅಂಟಿಸಿ ತನ್ನದೇ ಉತ್ಪನ್ನವೆಂಬಂತೆ ಪತಂಜಲಿ ಸಂಸ್ಥೆ ಮಾರಾಟ ಮಾಡುತ್ತಿರುವುದು ರುಜುವಾತಾಗಿದೆ. ಈ ಹಿನ್ನೆಲೆಯಲ್ಲಿ ಹರಿದ್ವಾರದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ರಾಮದೇವ್ ಅವರ ಸಂಸ್ಥೆಗೆ 11 ಲಕ್ಷ ದಂಡ ವಿಧಿಸಿ ತೀರ್ಪು ಹೊರಡಿಸಿದೆ. ಪತಂಜಲಿ ಸಂಸ್ಥೆಯು ಒಂದು ತಿಂಗಳೊಳಗೆ ದಂಡವನ್ನು ಪಾವತಿಸಬೇಕಾಗಿದೆ. ಅಷ್ಟೇ ಅಲ್ಲ, ಪತಂಜಲಿ ಹೆಸರಿನಡಿಯಲ್ಲಿರುವ ಉತ್ತನ್ನಗಳಲ್ಲಿ ಸುಧಾರಣೆ ಕಾಣದೇ ಇದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹರಿದ್ವಾರದ ಜಿಲ್ಲಾ ಆಹಾರ ಸುರಕ್ಷಾ ಇಲಾಖೆಗೆ ಕೋರ್ಟ್ ಆದೇಶಿಸಿದೆ.

ಯಾವಾಗ ಈ ಕೇಸು?
2012ರ ಆಗಸ್ಟ್ 16ರಂದು ಜೇನುತುಪ್ಪ, ಉಪ್ಪು, ಸಾಸಿವೆ ಎಣ್ಣೆ, ಜ್ಯಾಮ್, ಕಡಲೆಹಿಟ್ಟುಇತ್ಯಾದಿ ಪತಂಜಲಿ ಉತ್ತನ್ನಗಳ ಮೇಲೆ ಉತ್ತರಾಖಂಡ್’ನ ರುದ್ರಾಪುರದ ಲ್ಯಾಬ್’ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಇವುಗಳ ಗುಣಮಟ್ಟವು ನಿಗದಿತ ಮಟ್ಟದಲ್ಲಿಲ್ಲವೆಂದು ಲ್ಯಾಬ್’ನ ವರದಿ ತಿಳಿಸಿತ್ತು. ಆಗ, ಪತಂಜಲಿ ಸಂಸ್ಥೆಯ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ಇಷ್ಟು ದಿನಗಳವರೆಗೆ ವಿಚಾರಣೆ ನಡೆದಿತ್ತು.