ಪಕ್ಷಕ್ಕೆ ನಿಮ್ಮಿಂದ ದೇಣಿಗೆ ಬೇಕು | ನಾಳೆ 63ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಆ್ಯಪ್ ಬಿಡುಗಡೆ

ಚೆನ್ನೈ: ನಟ ಕಮಲ್‌ಹಾಸನ್ ತಾವು ರಾಜಕೀಯ ಪ್ರವೇಶ ಮಾಡುವುದು ಖಚಿತ ಎಂದು ಘೋಷಿಸಿದ್ದಾರೆ. ಆದರೆ ಅಭಿಮಾನಿಗಳು ಇದಕ್ಕಾಗಿ ಸ್ವಲ್ಪ ದಿನ ಕಾಯಬೇಕು ಎಂದು ಮನವಿ ಮಾಡಿದ್ದಾರೆ.

ಭಾನುವಾರ ಇಲ್ಲಿ ನಡೆದ ತಮ್ಮ ಅಭಿಮಾನಿ ಸಂಘಟನೆಯ 39ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಕಮಲ್, ಖಂಡಿತವಾಗಿಯೂ ನಾನು ಪಕ್ಷ ಕಟ್ಟಿ, ರಾಜಕೀಯ ಪ್ರವೇಶ ಮಾಡುತ್ತೇನೆ.

ಆದರೆ ಇದಕ್ಕೆ ಇನ್ನಷ್ಟು ದಿನ ಕಾಯಬೇಕು. ಆದರೆ ಇದರ ಮೊದಲ ಹಂತವಾಗಿ ನನ್ನ 63ನೇ ಹುಟ್ಟುಹಬ್ಬದ ದಿನ ಆ್ಯಪ್ ಒಂದನ್ನು ಬಿಡುಗಡೆ ಮಾಡುತ್ತೇನೆ.

ಇದರ ಮೂಲಕ ನಿಮ್ಮೊಂದಿಗೆ ನನ್ನ ಸಂವಹನ ಇನ್ನಷ್ಟು ಸುಲಭವಾಗಲಿದೆ ಜೊತೆಗೆ ನೀವು ಕೊಡುವ ದೇಣಿಗೆಯ ಮೇಲೆ ಲೆಕ್ಕ ಇಡಲು ನೆರವಾಗಲಿದೆ ಎಂದು ಹೇಳಿದ್ದಾರೆ.

ಹೀಗಾಗಿ ಮಂಗಳವಾರದ ಕಮಲ್ ಹುಟ್ಟುಹಬ್ಬದ ಕಾರ್ಯಕ್ರಮ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಜೈಲಲ್ಲಿ ಜಾಗ ಇಲ್ಲ; ಹೀಗಾಗಿ ನನ್ನ ಹತ್ಯೆಗೆ ಉದ್ದೇಶಿಸಿದ್ದಾರೆ 

ತಮ್ಮ ಹತ್ಯೆಗೆ ಕರೆ ನೀಡಿರುವ ಹಿಂದು ಮಹಾಸಭಾಕ್ಕೆ ನಟ ಕಮಲ್ ಹಾಸನ್ ತಿರುಗೇಟು ನೀಡಿದ್ದಾರೆ.

‘ಅವರು ನಮ್ಮನ್ನು ಜೈಲಿಗೆ ಹಾಕಲು ಬಯಸಿದ್ದಾರೆ. ಈಗ ಜೈಲಿನಲ್ಲಿ ಜಾಗ ಇಲ್ಲದೇ ಇರುವುದರಿಂದ ಅವರು ನಮ್ಮನ್ನು ಗುಂಡಿಟ್ಟು ಹತ್ಯೆ ಮಾಡಲು ಬಯಸಿದ್ದಾರೆ. ಬೇಕಾದರೆ ನಮ್ಮನ್ನು ಹತ್ಯೆ ಮಾಡಲಿ’ ಎಂದು ಭಾನುವಾರ ತಿರುಗೇಟು ನೀಡಿದ್ದಾರೆ.