ರಾಷ್ಟ್ರೀಕೃತ ಬ್ಯಾಂಕುಗಳೂ ಸೇರಿದಂತೆ ರೈತರಿಗೆ ಕೇಂದ್ರ ಸರ್ಕಾರ ನೀಡಿರುವ ಎಲ್ಲ ಬಗೆಯ ಸಾಲಗಳನ್ನು ಮನ್ನಾ ಮಾಡಬೇಕು ಹಾಗೂ ದೇಶದ ಕೃಷಿ ವಲಯದ ಪುನಶ್ಚೇತನಕ್ಕಾಗಿ ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಫೆಬ್ರವರಿ 23ರಂದು ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ರೈತ ಸಂಘಟನೆಗಳು ನಿರ್ಧರಿಸಿವೆ.
ಬೆಂಗಳೂರು(ಡಿ.30): ರಾಷ್ಟ್ರೀಕೃತ ಬ್ಯಾಂಕುಗಳೂ ಸೇರಿದಂತೆ ರೈತರಿಗೆ ಕೇಂದ್ರ ಸರ್ಕಾರ ನೀಡಿರುವ ಎಲ್ಲ ಬಗೆಯ ಸಾಲಗಳನ್ನು ಮನ್ನಾ ಮಾಡಬೇಕು ಹಾಗೂ ದೇಶದ ಕೃಷಿ ವಲಯದ ಪುನಶ್ಚೇತನಕ್ಕಾಗಿ ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಫೆಬ್ರವರಿ 23ರಂದು ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ರೈತ ಸಂಘಟನೆಗಳು ನಿರ್ಧರಿಸಿವೆ.
ದೆಹಲಿಯಲ್ಲಿ ನಡೆಯುವ ರೈತರ ಹೋರಾಟದಲ್ಲಿ ಪಾಲ್ಗೊಳ್ಳುವ ಕುರಿತಂತೆ ಶುಕ್ರವಾರ ಗಾಂಧಿಭವನದಲ್ಲಿ ನಡೆದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಮುಖಂಡರ ಸಭೆಯ ಬಳಿಕ ರೈತ ನಾಯಕ ಕುರಬೂರು ಶಾಂತಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.
ಅಖಿಲ ಭಾರತ ಕಿಸಾನ್ ಸಂಘದ ನೇತೃತ್ವದಲ್ಲಿ ದೇಶಾದ್ಯಂತ ರೈತರ ನಡೆಸುವ ಕ್ರಾಂತಿಕಾರಿ ಹೋರಾಟದಲ್ಲಿ ರಾಜ್ಯದಿಂದ ಕನಿಷ್ಠ ಒಂದು ಲಕ್ಷ ರೈತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ರೈತರ ಸಂಪೂರ್ಣ ಸಾಲ ಮನ್ನಾ ಹಾಗೂ ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿ ಆಗಬೇಕು. ಅಲ್ಲದೇ ಡಾ. ಎಂ.ಎಸ್.ಸ್ವಾಮಿನಾಥನ್ ವರದಿಯ ಶಿಫಾರಸಿನಂತೆ ಎಲ್ಲ ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿಯಾಗಬೇಕು.
ಅಲ್ಲಿಯವರೆಗೆ ರೈತರ ಹೋರಾಟ ನಿಲ್ಲುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಕುರಿತಂತೆ ಪ್ರಧಾನಿಗಳೇ ನಿರ್ಣಯ ತೆಗೆದು ಕೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದರು. ಕಬ್ಬು ಬೆಳೆಯನ್ನು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು ಹಾಗೂ ಕಬ್ಬಿನ ಎಫ್‌ಆರ್‌ಪಿ ದರವನ್ನು ಶೇ.8.5 ಇಳುವರಿಗೆ ನಿಗದಿ ಮಾಡುವ ಮಾನದಂಡವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
