ನವದೆಹಲಿ[ಜು.09]: ಭ್ರಷ್ಟಾಚಾರ ರಹಿತವಾಗಿ ಸಬ್ಸಿಡಿ ಮತ್ತು ಸವಲತ್ತುಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡುವಲ್ಲಿ ಆಧಾರ್‌ ಕಾರ್ಡ್‌ ಪ್ರಮುಖ ಪಾತ್ರ ವಹಿಸಲಿದ್ದು, ಆಧಾರ್‌ ಮತ್ತಿತರ ಕಾನೂನುಗಳ(ತಿದ್ದುಪಡಿ) ಮಸೂದೆಯನ್ನು ಎಲ್ಲ ಸದಸ್ಯರು ಬೆಂಬಲಿಸಬೇಕು ಎಂದು ರಾಜೀವ್‌ ಚಂದ್ರಶೇಖರ್‌ ಮನವಿ ಮಾಡಿದ್ದಾರೆ.

ರಾಜ್ಯಸಭೆಯಲ್ಲಿ ಆಧಾರ್‌ ತಿದ್ದುಪಡಿ ಮಸೂದೆಯ ಬಗ್ಗೆ ಮಾತನಾಡಿದ ಅವರು, ಆಧಾರ್‌ ಕಾರ್ಡ್‌ನಿಂದಾಗಿ ನರೇಂದ್ರ ಮೋದಿ ಸರ್ಕಾರ ಕೋಟ್ಯಾಂತರ ಭಾರತೀಯರಿಗೆ ಭ್ರಷ್ಟಾಚಾರ ರಹಿತವಾಗಿ, ಸೋರಿಕೆ ರಹಿತ ಮತ್ತು ದಕ್ಷ ರೀತಿಯಲ್ಲಿ ಸರ್ಕಾರಿ ಸೌಲಭ್ಯವನ್ನು ವಿತರಿಸುತ್ತಿದೆ ಎಂದು ವಿವರಿಸಿದರು.

ವಾಜಪೇಯಿ ಅವರ ಸರ್ಕಾರದ ರಾಷ್ಟ್ರೀಯ ಗುರುತು ಪತ್ರ ಯೋಜನೆಯಿಂದ ಸ್ಪೂರ್ತಿ ಪಡೆದು ಯುಪಿಎಯು ಆಧಾರ್‌ ಜಾರಿಗೆ ತಂದಿತ್ತು. ಆದರೆ ಸೂಕ್ತ ಕಾನೂನು ರೂಪಿಸದೆ, ಸಂಸತ್ತಿನಲ್ಲಿ ಚರ್ಚಿಸದೇ ಸಾವಿರಾರು ಕೋಟಿ ರೂಗಳನ್ನು ಆಧಾರ್‌ ಯೋಜನೆಗಾಗಿ ವ್ಯಯಿಸಲಾಗಿತ್ತು. ನಾನು 2010ರಲ್ಲಿ ಈ ಯೋಜನೆಯನ್ನು ವಿರೋಧಿಸಿದ್ದೆ. ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದೆ. ಆಧಾರ್‌ ಜಾರಿಗೆ ಮುನ್ನ ಯಾವುದೆ ಚರ್ಚೆ ನಡೆದಿಲ್ಲ, ಪರಿಶೀಲನೆ ಆಗಿಲ್ಲ, ಕಾನೂನು ರೂಪುಗೊಂಡಿಲ್ಲ, ಗ್ರಾಹಕರ ದತ್ತಾಂಶ ರಕ್ಷಣೆಗೆ ಸೂಕ್ತ ವ್ಯವಸ್ಥೆ ಆಗಿಲ್ಲ ಎಂದು ಪ್ರತಿಪಾದಿಸಿದ್ದೆ. ಅಕ್ರಮ ವಲಸಿಗರು ಕೂಡ ಆಧಾರ್‌ ಪಡೆಯುವಂತೆ ಆಗಿತ್ತು. ಬಿಜೆಪಿ ಹೊರತು ಪಡಿಸಿ ಬೇರೆ ಯಾವುದೇ ಪಕ್ಷಗಳು ಇದನ್ನು ವಿರೋಧಿಸಿರಲಿಲ್ಲ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಂಸತ್ತಿನಲ್ಲಿ ಆಧಾರ್‌ ಬಗ್ಗೆ ಚರ್ಚೆ ನಡೆಯಿತು, ನ್ಯಾಯಾಂಗದ ಪರಾಮರ್ಶೆ, ಪರಿಶೀಲನೆ ನಡೆಯಿತು. 2016ರಲ್ಲಿ ಸಂಸತ್ತು ಆಧಾರ್‌ ಮಸೂದೆಯನ್ನು ಅಂಗೀಕರಿಸಿತ್ತು. ಎನ್‌ಡಿಎ ಅವಧಿಯಲ್ಲಿ ಆಧಾರ್‌ ನೋಂದಣಿ, ಪರಿಶೀಲನೆ, ದತ್ತಾಂಶ ರಕ್ಷಣೆಯನ್ನು ಬಲಿಷ್ಠಗೊಳಿಸಿ, ಏಜೆನ್ಸಿಗಳನ್ನು ಉತ್ತರದಾಯಿಯನ್ನಾಗಿಸಲಾಯಿತು ಎಂದು ಹೇಳಿದರು.

ಇದೀಗ ಕಾಂಗ್ರೆಸ್‌ ಒಂದು ಕಡೆ ಆಧಾರ್‌ನ ಮಾಲೀಕತ್ವನ್ನು ಬಯಸಿದರೆ ಇನ್ನೊಂದು ಕಡೆ ಖಾಸಗಿತನದ ಹೆಸರಲ್ಲಿ ವಿರೋಧಿಸುತ್ತಿದೆ. ಕಾಂಗ್ರೆಸ್‌ ತನ್ನ ವಿರೋಧವನ್ನು ಬಿಟ್ಟು ಆಧಾರ್‌ ಅನ್ನು ಬೆಂಬಲಿಸಬೇಕು ಎಂದು ರಾಜೀವ್‌ ಚಂದ್ರಶೇಖರ್‌ ಕರೆ ನೀಡಿದರು.