Asianet Suvarna News Asianet Suvarna News

ವಿಧಾನಸೌಧ, ವಿಕಾಸಸೌಧದಲ್ಲಿ ರಾತ್ರಿ ವೇಳೆ ಪಾರ್ಕಿಂಗ್‌ ನಿಷೇಧ

ವಿಧಾನಸೌಧ, ವಿಕಾಸಸೌಧ ಜಾಗ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಖಾಸಗಿ ವಾಹನ ಮಾಲಿಕರು! ರಾತ್ರಿ ವೇಳೆ ಪಾರ್ಕಿಂಗ್‌ಗಿಲ್ಲ ಅವಕಾಶ |
 

Parking prohibited at Vidhana Soudha and Vikasa Soudha in evening
Author
Bengaluru, First Published Jun 22, 2019, 8:07 AM IST

ಬೆಂಗಳೂರು (ಜೂ. 22): ವಿಧಾನಸೌಧ ಹಾಗೂ ವಿಕಾಸಸೌಧದ ವಾಹನ ನಿಲುಗಡೆ ಸ್ಥಳವನ್ನು ಖಾಸಗಿ ವಾಹನಗಳ ಮಾಲೀಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎರಡೂ ಕಡೆ ರಾತ್ರಿ ವೇಳೆ ವಾಹನ ನಿಲುಗಡೆ ನಿರ್ಬಂಧಿಸಿ ಸುತ್ತೋಲೆ ಹೊರಡಿಸಲಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಇನ್ನು ಮುಂದೆ ವಿಕಾಸಸೌಧ ಹಾಗೂ ವಿಧಾನಸೌಧದ ವಾಹನಗಳ ನಿಲುಗಡೆ ಸ್ಥಳದಲ್ಲಿ ರಾತ್ರಿ ವೇಳೆ ಯಾವುದೇ ವಾಹನವನ್ನು ನಿಲ್ಲಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ವಿಕಾಸಸೌಧದಲ್ಲಿ ಮೂರು ನೆಲಸ್ತರದ ಮಹಡಿಗಳಲ್ಲಿ ವಾಹನ ನಿಲುಗಡೆಗೆ ಅವಕಾಶವಿದೆ. ಇದಲ್ಲದೆ ವಿಧಾನಸೌಧ ಸುತ್ತಲೂ ಇರುವ ರಸ್ತೆ ಬದಿ ಹಾಗೂ ವಿಧಾನಸೌಧದ ಆವರಣದಲ್ಲಿರುವ ಓಪನ್‌ ಪಾರ್ಕಿಂಗ್‌ ಪ್ರದೇಶದಲ್ಲಿ ವಾಹನಗಳನ್ನು ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು.

ಆದರೆ, ಇಲ್ಲಿ ಕೆಲ ಖಾಸಗಿ ವಾಹನಗಳು ಹಾಗೂ ಕೆಲ ಸರ್ಕಾರಿ ವಾಹನಗಳು ಬೇಕಾಬಿಟ್ಟಿಯಾಗಿ ನಿಲುಗಡೆಯಾಗಿರುತ್ತವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಡಿಪಿಎಆರ್‌ ಉಪ ಕಾರ್ಯದರ್ಶಿ ನಾಗರಾಜ್‌ ಅವರು ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಹಲವು ದಿನಗಳಿಂದ ನಿಂತಿರುವ ಸರ್ಕಾರಿ ಮತ್ತು ಖಾಸಗಿ ವಾಹನಗಳು ಇದೇ ಸ್ಥಳದಲ್ಲಿ ನಿಲುಗಡೆಯಾಗಿರುವುದನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಅಲ್ಲದೆ, ವಿಧಾನಸೌಧ ಹಾಗೂ ವಿಕಾಸಸೌಧ ಸೇವೆಗೆ ಸಂಬಂಧಪಡದ ವಾಹನಗಳನ್ನೂ ನಿಲುಗಡೆ ಮಾಡಲಾಗುತ್ತಿತ್ತು. ಖಾಸಗಿ ವಾಹನಗಳ ಚಾಲಕರು, ಮಾಲಿಕರು ವಿಧಾನಸೌಧ ಸಿಬ್ಬಂದಿ ಜತೆ ಸೇರಿಕೊಂಡು ರಾತ್ರಿ ವೇಳೆ ವಿಧಾನಸೌಧ ಹಾಗೂ ವಿಕಾಸಸೌಧ ಆವರಣ, ವಾಹನ ನಿಲುಗಡೆ ಸ್ಥಳವನ್ನು ತಮ್ಮ ವಾಹನಗಳ ಪಾರ್ಕಿಂಗ್‌ ತಾಣಗಳನ್ನಾಗಿ ಬದಲಿಸಿಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಹೀಗಾಗಿ ವಿಧಾನಸೌಧ ಭದ್ರತಾ ಸಿಬ್ಬಂದಿ ಸೇರಿದಂತೆ ರಾತ್ರಿ ವೇಳೆ ಕಾರ್ಯನಿರತವಾಗಿರುವ ಸಿಬ್ಬಂದಿಯನ್ನು ಹೊರತುಪಡಿಸಿ ಉಳಿದ ಯಾವುದೇ ಇಲಾಖೆಗಳ ವಾಹನಗಳು ನಿಲ್ಲಿಸುವಂತಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Follow Us:
Download App:
  • android
  • ios