ಬೆಂಗಳೂರು: ಅವನಿಗೋ ಎಂಜೀನಿಯರ್ ಆಗೋ ಕನಸು. ಆದರೆ, ಮನೆಯಲ್ಲಿ ಅವನು ಡಾಕ್ಟರ್ ಆಗಲಿ ಎನ್ನುವ ಆಸೆ. ಒಟ್ಟಿನಲ್ಲಿ ಏನಾಯಿತೋ ಏನೋ, ದ್ವಿತೀಯ ಪಿಯುಸಿಯಲ್ಲಿ ಶೇ.92 ಅಂಕ ಪಡೆದ ಕ್ಷಿತೀಶ್ ಭಾರದ್ವಾಜ್ ಕಾಣೆಯಾಗಿದ್ದಾನೆ. ಇದೀಗ ಪೋಷಕರು 'ಎಲ್ಲಿದ್ದರೂ ಮನೆ ಬಾ, ನಿನ್ನಿಷ್ಟ ಬಂದಂತಿರು...' ಎಂದು ಆಗ್ರಹಿಸುತ್ತಿದ್ದಾರೆ. 

ವಿವಿ ಪುರಂ ಜೈನ್ ಕಾಲೇಜಿನಲ್ಲಿ ಓದುತ್ತಿದ್ದು, ಕ್ಷಿತೀಶ್ ಭಾರದ್ವಾಜ್ ಸದಾ ಅಂತರ್ಮುಖಿಯಾಗಿರುತ್ತಿದ್ದ ವಿದ್ಯಾರ್ಥಿ. ಆದರೆ, ಓದಿನಲ್ಲಿ ಸದಾ ಚುರುಕು. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡ ನಂತರ ಕಾಮೆಡ್ ಕೆ ಪ್ರವೇಶ ಪರೀಕ್ಷೆಗೆ ಓದುತ್ತಿದ್ದ. ಆದರೆ, ಮೇ.1ರಂದು ಮನೆಯಿಂದ ಹೊರ ಹೋದವನು, ಎಷ್ಟೊತ್ತಾದರೂ ಮರಳಲಿಲ್ಲ. ಹನುಮಂತ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾಗಿ 11 ದಿನವಾದರೂ ಮನೆಗೆ ಮರಳದ ಮಗನ ಬಗ್ಗೆ ಸುಳಿವು ಸಿಗದೇ ಪೋಷಕರು ಆತಂಕಗೊಂಡಿದ್ದಾರೆ. ಮೊಬೈಲ್ ಫೋನನ್ನೂ ಮನೆಯಲ್ಲಿಯೇ ಬಿಟ್ಟು ಹೋಗಿದ್ದಾನೆ. 

ಸದಾ ಮೌನವಾಗಿಯೇ ಇರುತ್ತಿದ್ದ ಕ್ಷಿತೀಶ್‌ನಿಗೆ ಹೇಳುವಷ್ಟು ಮಂದಿ ಫ್ರೆಂಡ್ಸ್ ಇರಲಿಲ್ಲ. ಬೇಜಾರು ಎನಿಸಿದಾಗ ದೇವಸ್ಥಾನಕ್ಕೋ, ಲೈಬ್ರರಿಗೋ ಹೋಗುತ್ತಿದ್ದ. ಆದರೆ, ಆನ್ ಟೈಮ್ ಮನೆಗೆ ಹಿಂದಿರುಗುತ್ತಿದ್ದ. ಆ ದಿನ ನ್ಯಾಷನಲ್ ಕಾಲೇಜ್ ಮೆಟ್ರೋ ಸ್ಟೇಷನಿಂದ ಹೊರಟವನು ರಾತ್ರಿ 10.20ರ ಹೊತ್ತಿಗೆ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ತಲುಪಿಸಿದ್ದಾನೆ. ಆ ಟೈಮಲ್ಲಿ ಮೈಸೂರು, ಚೆನ್ನೈ ಟ್ರೈನ್ ಇದೆ. ಅಲ್ಲಿಗೆ ಹೋಗಿರುವ ಶಂಕೆ ಪೋಷಕರದ್ದು. ಆದರೂ, ಏಕೆ, ಎಲ್ಲಿಗೆ ಹೋದ ಎನ್ನುವ ಮಾಹಿತಿಯೇ ಇಲ್ಲ. 

ವಿದ್ಯಾಭ್ಯಾಸದ ಒತ್ತಡದಿಂದ ಇಂಥದ್ದೊಂದು ನಿರ್ಧಾರಕ್ಕೆ ಬಂದಿರಬಹುದು ಎಂಬುವುದು ಪೋಷಕರ ಅಳಲು. ಫೋಟೋದಲ್ಲಿ ಕಾಣಿಸುತ್ತಿರುವ ಈತನ ಸುಳಿವು ಸಿಕ್ಕಲ್ಲಿ ಹನುಮಂತನಗರ ಠಾಣೆ ಇನ್ಸ್‌ಪೆಕ್ಟರ್- 9480801525 ಅಥವಾ ಕ್ಷಿತೀಜನ ಪೋಷಕರು: 9916440133, 9620543441, 9449355332ಗೆ ಕಾಂಟ್ಯಾಕ್ಟ್ ಮಾಡಲು ವಿನಂತಿಸಿದ್ದಾರೆ.