ಸಿದ್ದರಾಮಯ್ಯ ಆಪ್ತರು ತೀವ್ರ ಲಾಬಿ ನಡೆಸುತ್ತಿದ್ದ ಹುದ್ದೆಯೊಂದು ಇದೀಗ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರಿಗೆ ಒಲಿದಿದೆ. 

ಬೆಂಗಳೂರು : ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಹತ್ತಾರು ಶಾಸಕರು ಬಿಡಿಎ ಅಧ್ಯಕ್ಷರಾಗಲು ತೀವ್ರ ಲಾಬಿ ನಡೆಸಿರುವ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಅವರು ಬಿಡಿಎ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಬಿಡಿಎ ಅಧ್ಯಕ್ಷರಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡು ಅವರು ಸಭೆಯನ್ನೂ ನಡೆಸಿದರು. ಸಭೆಯಲ್ಲಿ ಅಧ್ಯಕ್ಷರು ಇಲ್ಲ ಎನ್ನುವ ಕಾರಣಕ್ಕೆ ಕೆಲಸಗಳು ವಿಳಂಬವಾಗಬಾರದು. ಬಿಡಿಎ ಜನರ ವಿಶ್ವಾಸ ಉಳಿಸಿಕೊಳ್ಳಬೇಕಿದೆ. ಜತೆಗೆ ಹಲವು ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, ವಿಳಂಬವಾಗಬಾರದು. ಕೆಲವು ಪ್ರಮುಖ ನಿರ್ಧಾರ ಕೈಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವನಾದ ನಾನೇ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ ಎಂದು ತಿಳಿಸಿದರು ಎನ್ನಲಾಗಿದೆ. ಈ ವೇಳೆ ಬಿಡಿಎ ಆಸ್ತಿ ಒತ್ತುವರಿ, ಪ್ರಮುಖ ಕಾಮಗಾರಿಗಳು ಇತ್ಯಾದಿಗಳ ಕುರಿತು ಪರಮೇಶ್ವರ್‌ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆದರೂ ನಿಗಮ-ಮಂಡಳಿ ಅಧ್ಯಕ್ಷರ ನೇಮಕ ಇಂದಿಗೂ ಅಂತಿಮಗೊಂಡಿಲ್ಲ. ಬಜೆಟ್‌ ಅಧಿವೇಶನ, ಪ್ರವಾಹ, ಸ್ಥಳೀಯ ಸಂಸ್ಥೆಗಳ ಚುನಾವಣೆ ಹೀಗೆ ಒಂದಿಲ್ಲೊಂದು ಕಾರಣದಿಂದಾಗಿ ನೇಮಕಾತಿ ಮುಂದೂಡಲ್ಪಡುತ್ತಿದೆ. ನಿಗಮ ಮಂಡಳಿ ನೇಮಕವಾಗುವವರೆಗೂ ಸಚಿವರು ತಮ್ಮ ಖಾತೆ ಅಡಿಯಲ್ಲಿ ಬರುವ ನಿಗಮ ಮಂಡಳಿಗಳ ನಿರ್ವಹಣೆ ನೋಡಿಕೊಳ್ಳುವ ತೀರ್ಮಾನವನ್ನು ಸರ್ಕಾರದ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಪರಮೇಶ್ವರ್‌ ಅವರು ಬಿಡಿಎ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ.

ಆದರೆ, ಬಿಡಿಎ ಅಧ್ಯಕ್ಷಗಿರಿಯ ಮೇಲೆ ಕಣ್ಣಿಟ್ಟಿದ್ದ ಶಾಸಕರ ಪೈಕಿ ಪ್ರಮುಖರಾದ ಬೈರತಿ ಸುರೇಶ್‌ ಮತ್ತು ಎಂಟಿಬಿ ನಾಗರಾಜ್‌ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು. ಆದ್ದರಿಂದ ಅವರಿಗೆ ಬಿಡಿಎ ಅಧ್ಯಕ್ಷ ಸ್ಥಾನ ಸಿಗದಂತೆ ಮಾಡುವ ಉದ್ದೇಶದಿಂದ ಪರಮೇಶ್ವರ್‌ ಈ ನಿರ್ಧಾರ ಕೈಗೊಂಡಿದ್ದು, ನಿಗಮ ಮಂಡಳಿಗಳ ನೇಮಕಾತಿ ಸಂದರ್ಭದಲ್ಲಿ ಬಿಡಿಎ ಅಧ್ಯಕ್ಷ ಸ್ಥಾನವನ್ನು ತಮ್ಮ ಆಪ್ತರಿಗೆ ಬಿಟ್ಟುಕೊಡುವ ಉದ್ದೇಶ ಹೊಂದಿದ್ದಾರೆ ಎಂದೂ ಹೇಳಲಾಗುತ್ತಿದೆ.