ಮುಖ್ಯಮಂತ್ರಿಯಾಗಲು ಏನೇನು ಮಾಡಿದರು ಎಂದು ನೆನಪು ಮಾಡಿಕೊಳ್ಳಲಿ: ಪರಮೇಶ್ವರ ಎಚ್‌ಡಿಕೆಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ: ಡಿಕೆಶಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿಗೆ ಮೌನ ವಹಿಸುತ್ತಿದ್ದ ಕಾಂಗ್ರೆಸ್ ಮುಖಂಡರ ಧೋರಣೆ ಬದಲಾದಂತೆ ಕಾಣುತ್ತಿದೆ. ಏಕೆಂದರೆ, ಆಪರೇಷನ್ ಕಮಲಕ್ಕೆ ಸಿದ್ದರಾಮಯ್ಯ ಕುಮ್ಮಕ್ಕು ನೀಡಿದರೂ ಎಂಬ ಎಚ್ಡಿ. ಕುಮಾರಸ್ವಾಮಿ ಆರೋಪಕ್ಕೆ ಕಾಂಗ್ರೆಸ್ ನಾಯಕರು ಭರ್ಜರಿ ತಿರುಗೇಟು ನೀಡಿದ್ದಾರೆ.
ಶನಿವಾರ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಹಿರಿಯ ಮುಖಂಡ ಜಾಫರ್ ಷರೀಫ್ ಅವರು ಸಿದ್ದರಾಮಯ್ಯ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದು, ಚುನಾವಣೆ ಹತ್ತಿರವಿದೆ ಎಂದು ಕುಮಾರಸ್ವಾಮಿ ನಿರಾಧಾರ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು, ‘ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಇಂತಹ ಆರೋಪ ಮಾಡುತ್ತಾರೆ. ಮೊದಲು ಅವರು ಮುಖ್ಯಮಂತ್ರಿಯಾಗಲು ಏನೇನು ಮಾಡಿದರು ಎನ್ನುವುದನ್ನು ನೆನಪು ಮಾಡಿಕೊಳ್ಳಲಿ’ ಎಂದು ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಅವರು ದಲಿತರಿಗೆ ಅನ್ಯಾಯ ಮಾಡಿದ್ದಾರೆ, ದಲಿತ ಮುಖಂಡರನ್ನು ಮೂಲೆಗುಂಪು ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, ದಲಿತರು, ಅಲ್ಪಸಂಖ್ಯಾತರ ಅಭಿವೃದ್ಧಿ ವಿಚಾರದಲ್ಲಿ ಕುಮಾರಸ್ವಾಮಿ ಸರ್ಟಿಫಿಕೇಟ್ ಬೇಕಾಗಿಲ್ಲ. ರಾಜ್ಯ ದಲ್ಲಿ ದಲಿತರ ಜೀವನ ಮಟ್ಟ ಉತ್ತಮವಾಗಿದೆ, ಸಮುದಾಯದವರಿಗೆ ನೀಡುತ್ತಿರುವ ಶಿಕ್ಷಣದ ಪ್ರಮಾಣ ಶೇ.68ರಷ್ಟು ಏರಿಕೆಯಾಗಿದೆ. ದಲಿತರು, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಹೇಳಿದರು.
ತಪ್ಪು ಮಾಹಿತಿ ನೀಡಿದ್ದಾರೆ: ಡಿಕೇಶಿ
ಮತ್ತೊಂದೆಡೆ ಸಿದ್ದರಾಮಯ್ಯ ಅವರನ್ನು ಬದಲಾಗಿ ಸಮರ್ಥಿಸಿಕೊಂಡಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್, ಆಪರೇಷನ್ ಕಮಲಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಮ್ಮಕ್ಕು ನೀಡಿದ್ದರು ಎನ್ನುತ್ತಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಎಂದೂ ಅಂತಹ ಕೆಲಸಕ್ಕೆ ಹೋದವರಲ್ಲ ಹೇಳಿದ್ದಾರೆ.
ಕುಮಾರಸ್ವಾಮಿ ಅವರ ಆರೋಪ ಸತ್ಯಕ್ಕೆ ದೂರವಾದುದು. ಯಾರೋ ಅವರಿಗೆ ತಪ್ಪು ಮಾಹಿತಿ ಕೊಟ್ಟಿರಬೇಕು. ಇಲ್ಲವೇ, ರಾಜಕಾರಣಕ್ಕಾಗಿ ಈ ರೀತಿ ಮಾತನಾಡಿರಬೇಕು. ಸಿದ್ದರಾಮಯ್ಯ ಅವರು ಕಾಂಗ್ರೆಸ್ಗೆ ಬಂದದ್ದು ಪಕ್ಷ ಬಲವರ್ಧನೆಗಾಗಿ. ಅವರು ಎಲ್ಲಿ ಇರುತ್ತಾರೋ ಅಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಾರೆ. ಯಾವತ್ತೂ ಅವರು ಪಕ್ಷ ನಿಷ್ಠೆಗೆ ವಿರುದ್ಧವಾಗಿ ನಡೆದುಕೊಂಡವರಲ್ಲ ಎಂದು ಹೇಳಿದರು.
ಉಮೇಶ್ ಕತ್ತಿ, ಜಗ್ಗೇಶ್ ಸೇರಿ ದಂತೆ ಅನೇಕರು ಆಪರೇಷನ್ ಕಮಲದಿಂದ ಬಿಜೆಪಿ ಸೇರ್ಪಡೆಯಾದವರು. ಈ ಬಗ್ಗೆ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಬೇಕು ಎಂದರು. ಅಚ್ಚರಿಯೆನಿಸುವಂತೆ ಹಿರಿಯ ಮುಖಂಡ ಜಾಫರ್ ಷರೀಫ್ ಕೂಡ ಸಿದ್ದರಾಮಯ್ಯ ಪರ ಮಾತನಾಡಿದ್ದು, ಕುಮಾರಸ್ವಾಮಿ ಚುನಾವಣೆ ಹಿನ್ನೆಲೆಯಲ್ಲಿ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದ್ದಾರೆ.
