ಮಹದಾಯಿ ನೀರು ಬಿಡುವ ಬಗ್ಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ರಾಜ್ಯ ಅಧಿಕೃತವಾಗಿ ಒಪ್ಪಿಗೆ ಸೂಚಿಸಲಿ. ಅನಂತರ ಅಗತ್ಯ ಬಿದ್ದರೆ ಅಥವಾ ಗೋವಾ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದರೆ ಅವರ ಮನವೊಲಿಸಲು ನಾವು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರು (ಡಿ.26): ಮಹದಾಯಿ ನೀರು ಬಿಡುವ ಬಗ್ಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ರಾಜ್ಯ ಅಧಿಕೃತವಾಗಿ ಒಪ್ಪಿಗೆ ಸೂಚಿಸಲಿ. ಅನಂತರ ಅಗತ್ಯ ಬಿದ್ದರೆ ಅಥವಾ ಗೋವಾ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದರೆ ಅವರ ಮನವೊಲಿಸಲು ನಾವು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾ ಮುಖ್ಯಮಂತ್ರಿ ಪರಿಕರ್ ಅವರು ಮಹಾದಾಯಿ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದರೆ ಅದನ್ನು ಅಧಿಕೃತವಾಗಿ ರಾಜ್ಯ ಸರ್ಕಾರಕ್ಕೆ ತಿಳಿಸಬೇಕಿತ್ತು. ಆದರೆ, ಅವರು ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಹೀಗೆ ಪಕ್ಷವೊಂದರ ರಾಜ್ಯಾಧ್ಯಕ್ಷರಿಗೆ ಬರೆವ ಪತ್ರಕ್ಕೆ ಕಾನೂನಿನಲ್ಲಿ ಯಾವುದೇ ಮಾನ್ಯತೆ ಇರುವುದಿಲ್ಲ. ವಾಸ್ತವವಾಗಿ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಥವಾ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ನೀರು ಬಿಡುವುದಾಗಿ ಸ್ಪಷ್ಟಪಡಿ ಸಬೇಕು. ಹೀಗೆ ಗೋವಾ ಸರ್ಕಾರ ಅಧಿಕೃತವಾಗಿ ತನ್ನ ನಿಲುವನ್ನು ಸ್ಪಷ್ಟಪಡಿಸಲಿ ಅನಂತರ ನಾವು ಅಗತ್ಯಬಿದ್ದರೆ ಅಥವಾ ಗೋವಾ ಕಾಂಗ್ರೆಸ್ ವಿರೋಧ ವ್ಯಕ್ತವಾದರೆ, ಅವರ ಮನವೊಲಿಸುವ ಕಾರ್ಯ ವನ್ನು ನಾವು ಮಾಡುತ್ತೇವೆ ಎಂದುತಿಳಿಸಿದರು.
ಆದರೆ, ಗೋವಾ ಸಿಎಂ ಮನೋಹರ್ ಪರಿಕ್ಕರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕೇವಲ ರಾಜಕೀಯ ಲಾಭ ಗಿಟ್ಟಿಸುವ ಉದ್ದೇಶದಿಂದ ಗೋವಾ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯುವಂತೆ ಮಾಡಲಾಗಿದೆ. ನೀರು ಬಿಡುವ ಮನಸ್ಸು ಗೋವಾ ಬಿಜೆಪಿ ಸಿಎಂಗೆ ಇಲ್ಲ ಎಂದರು.
