ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ರಾತ್ರೋ ರಾತ್ರಿ ದಿಢೀರ್ ಬೆಳವಣಿಗೆ ನಡೆದಿದ್ದು ದಿನಕರನ್ ವಿರುದ್ಧ ರೊಚ್ಚಿಗೆದ್ದಿರುವ ತಮಿಳುನಾಡು ಸಚಿವರು ಶಶಿಕಲಾ ಕುಟುಂಬವನ್ನು ಪಕ್ಷದಿಂದ ದೂರವಿಡಲು ನಿರ್ಧರಿಸಿದ್ದಾರೆ. ಸಿಎಂ ಪಳನಿಸ್ವಾಮಿ ಬಣ, ಪನ್ನೀರ್ ಸೆಲ್ವಂ ಬಣಗಳ ವಿಲೀನ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.
ಚೆನ್ನೈ(ಎ.18): ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ರಾತ್ರೋ ರಾತ್ರಿ ದಿಢೀರ್ ಬೆಳವಣಿಗೆ ನಡೆದಿದ್ದು ದಿನಕರನ್ ವಿರುದ್ಧ ರೊಚ್ಚಿಗೆದ್ದಿರುವ ತಮಿಳುನಾಡು ಸಚಿವರು ಶಶಿಕಲಾ ಕುಟುಂಬವನ್ನು ಪಕ್ಷದಿಂದ ದೂರವಿಡಲು ನಿರ್ಧರಿಸಿದ್ದಾರೆ. ಸಿಎಂ ಪಳನಿಸ್ವಾಮಿ ಬಣ, ಪನ್ನೀರ್ ಸೆಲ್ವಂ ಬಣಗಳ ವಿಲೀನ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.
ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾಗೆ ತಳಮಳ ಶುರುವಾಗಿದೆ. ಪಕ್ಷದ ಎರಡೆಲೆ ಗುರುತನ್ನು ತಮ್ಮ ಬಣಕ್ಕೆ ನೀಡುವಂತೆ ಚುನಾವಣಾ ಆಯೋಗಕ್ಕೆ 60 ಕೋಟಿ ಲಂಚದ ಆಮಿಷವೊಡ್ಡಿದ್ದರು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕಲಾ ಬಣದ ಟಿಟಿವಿ ದಿನಕರನ್‌ಗಾಗಿ ದೆಹಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದರಿಂದಾಗಿ ಪಳನಿಸ್ವಾಮಿ ಬಣ ಆತಂಕಗೊಂಡಿದ್ದು ಶಶಿಕಲಾ ಹಾಗೂ ದಿನಕರನ್'ಗೆ ಪಕ್ಷದಿಂದಲೇ ಗೇಟ್ ಪಾಸ್ ಕೊಡುವ ಕುರಿತು ಚರ್ಚೆ ನಡೆಸುತ್ತಿದೆ.
ಒಂದಾಗುತ್ತಾ ಪಳನಿ ಸ್ವಾಮಿ - ಪನ್ನೀರ್ ಸೆಲ್ವಂ ಬಣ?
ಲಂಚ ಕೊಟ್ಟ ಆರೋಪ ಎದುರಿಸುತ್ತಿರುವ ಟಿಟಿವಿ ದಿನಕರನ್ ವಿರುದ್ಧ ಸಿಎಂ ಪಳನಿಸ್ವಾಮಿ ಬಣ ರೊಚ್ಚಿಗೆದ್ದಿದೆ. ದಿನಕರನ್ ವಿರುದ್ದ ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಪಕ್ಷದಲ್ಲಿ ಕ್ಷಿಪ್ರ ಬೆಳವಣಿಗೆ ನಡೆದಿದೆ. ದಿನಕರನ್ ಹಾಗೂ ಶಶಿಕಲಾ ಕುಟುಂಬವನ್ನು ಪಕ್ಷದಿಂದ ಉಚ್ಚಾಟಿಸುವ ಕುರಿತು ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ. ರಾತ್ರೋ ರಾತ್ರಿ ಸಿಎಂ ಪಳನಿಸ್ವಾಮಿ ತುರ್ತು ಸಭೆ ಕರೆದು ಎಲ್ಲಾ ಸಚಿವರು, ಶಾಸಕರು ಹಾಜರಿರುವಂತೆ ಸೂಚಿಸಿದ್ದರು. ಅದರಂತೆ ಚೆನ್ನೈನ ತಂಗಮಣ ನಿವಾಸದಲ್ಲಿ 20 ಸಚಿವರ ಸಮ್ಮುಖದಲ್ಲಿ ಸಭೆ ನಡೆಸಿ ಪನ್ನೀರ್ ಸೆಲ್ವಂ ಬಣವನ್ನು ಪಕ್ಷಕ್ಕೆ ಕರೆತರುವ ಕುರಿತು ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಎರಡು ಬಣಗಳ ವಿಲೀನ ಸೂತ್ರ ಸಿದ್ಧವಾಗಿದ್ದು ಪನ್ನೀರ್ ಸೆಲ್ವಂ ಮತ್ತೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಿದೆ. ಸಿಎಂ ಸ್ಥಾನ ನೀಡದಿದ್ದರೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿ ಪಳನಿಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಪಳನಿಸ್ವಾಮಿ ಬಣ ಸಭೆಯಲ್ಲಿ ಅಣ್ಣಾ ಡಿಎಂಕೆ ಪಕ್ಷದ ವಿಲೀನದ ಬಗ್ಗೆ ಸಮಾಲೋಚನೆ ಮಾಡಲಾಗಿದೆ. ಅಮ್ಮನ ಆಶಯ ಈಡೇರಿಸಲು ನಾವೆಲ್ಲಾ ಒಂದಾಗುತ್ತಿದ್ದೇವೆ. ಮಾತುಕತೆ ನಡೆಸಬೇಕೆಂಬ ಪನ್ನೀರ್ ಸೆಲ್ವಂ ಸ್ವಾಗತಾಹ್ರ. ಪಳನಿಸ್ವಾಮಿ-ಪನ್ನೀರ್ ಸೆಲ್ವಂ ವಿಲೀನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಎರಡೂ ಬಣ ಸೇರಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇವೆ. ನಮಗೆ ಎರಡಲೆ ಇರುವ ಚಿಹ್ನೆ ಬೇಕು ಎಂದು ಹಣಕಾಸು ಸಚಿವ ಜೈಕುಮಾರ್ ಹೇಳಿದ್ದಾರೆ.
ಪನ್ನೀರ್ ಸೆಲ್ವಂಗೆ ಸಿಎಂ ಪಟ್ಟ?
ಇನ್ನೂ ಈ ಕ್ಷಿಪ್ರ ಬೆಳವಣಿಗೆಯಿಂದ ಜಯಾ ಆಪ್ತ ಪನ್ನೀರ್ ಸೆಲ್ವಂಗೆ ಸಿಎಂ ಪಟ್ಟ ಒಲಿಯುವ ಸಾಧ್ಯತೆ ಹೆಚ್ಚಿದೆ. 110 ಶಾಸಕರು ಪನ್ನೀರ್ ಸೆಲ್ವಂಗೆ ಬೆಂಬಲ ಘೋಷಣೆ ನೀಡಲು ಸಿದ್ಧವಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂದು ಪಳನಿಸ್ವಾಮಿ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆಯಲಿದ್ದು ಸಭೆಯಲ್ಲಿ ಎರಡು ಬಣಗಳ ವಿಲೀನ ಹಾಗೂ ಪನ್ನೀರ್ ಸೆಲ್ವಂಗೆ ನೀಡಬೇಕಾದ ಹುದ್ದೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ ಶಶಿಕಲಾ ಮಾಸ್ಟರ್ ಪ್ಲ್ಯಾನ್'ನಿಂದ ಸಿಎಂ ಹುದ್ದೆ ಕಳೆದುಕೊಂಡಿದ್ದ ಪನ್ನೀರ್ ಸೆಲ್ವಂ ಮತ್ತೆ ಅಧಿಕಾರದ ಸನಿಹ ಬಂದು ನಿಂತಿದ್ದಾರೆ. ಇತ್ತ ಪರಪ್ಪನ ಅಗ್ರಹಾರ ಜೈಲಲ್ಲಿರುವ ಶಶಿಕಲಾಗೆ ತಳಮಳ ಶುರುವಾಗಿದೆ.
