ಜಯಲಲಿತಾ ಸಾವಿನ ಬಗ್ಗೆ ತಮಿಳುನಾಡಿನ ಜನರು ಸತ್ಯ ಅರಿಯಬೇಕಿದೆ. ಹೀಗಾಗಿ, ತನಿಖೆಗೆ ಆದೇಶಿಸಿದ್ದೇನೆ ಎಂದು ಓಪಿಎಸ್ ತಿಳಿಸಿದ್ದಾರೆ.

ಚೆನ್ನೈ(ಫೆ. 08): ತಮಿಳುನಾಡಿನಲ್ಲಿ ಓ ಪನ್ನೀರ್'ಸೆಲ್ವಂ ವರ್ಸಸ್ ಶಶಿಕಲಾ ನಡುವಿನ ಸಮರ ತಾರಕಕ್ಕೇರುತ್ತಿದೆ. ಪಕ್ಷದ ಖಜಾಂಚಿ ಸ್ಥಾನದಿಂದ ವಜಾ ಆದ ಬೆನ್ನಲ್ಲೇ ಹಂಗಾಮಿ ಸಿಎಂ ಪನ್ನೀರ್'ಸೆಲ್ವಂ ಅವರು ಜಯಲಲಿತಾ ಸಾವಿನ ತನಿಖೆಗೆ ಆದೇಶ ಹೊರಡಿಸಿದ್ದಾರೆ. ಜಯಲಲಿತಾ ಸಾವಿನ ಬಗ್ಗೆ ತಮಿಳುನಾಡಿನ ಜನರು ಸತ್ಯ ಅರಿಯಬೇಕಿದೆ. ಹೀಗಾಗಿ, ತನಿಖೆಗೆ ಆದೇಶಿಸಿದ್ದೇನೆ ಎಂದು ಓಪಿಎಸ್ ತಿಳಿಸಿದ್ದಾರೆ.

ಜಯಲಲಿತಾ ಅವರ ಮೂರು ದಶಕಗಳ ಆಪ್ತೆ ಎನಿಸಿದ್ದ ಶಶಿಕಲಾ ಅವರಿಗೆ ಎಐಎಡಿಎಂಕೆಯ ಬಹುತೇಕ ಶಾಸಕರು ಬೆಂಬಲ ನೀಡಿದ್ದಾರೆನ್ನಲಾಗಿದೆ. ಪಕ್ಷದ ಸಭೆಯಲ್ಲಿ ಶಶಿಕಲಾ ಅವರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಲು ನಿರ್ಧರಿಸಲಾಯಿತು. ಪನ್ನೀರ್'ಸೆಲ್ವಂ ಸಿಎಂ ಗಾದಿಯನ್ನು ಬಿಟ್ಟುಕೊಡಬೇಕಾಯಿತು. ಆದರೆ, ನಿನ್ನೆ ಅವರು ತಾನು ಬಲವಂತವಾಗಿ ಸಿಎಂ ಹುದ್ದೆ ಬಿಡಬೇಕಾಯಿತು ಎಂದು ಹೇಳುವ ಮೂಲಕ ಶಶಿಕಲಾ ವಿರುದ್ಧ ರಾಜಕೀಯ ಸಮರಕ್ಕೆ ಮುನ್ನುಡಿ ಬರೆದರು. ಪನ್ನೀರ್'ಸೆಲ್ವಂ ಅವರ ಹೇಳಿಕೆಯಿಂದ ಶಾಕ್ ಆದ ಶಶಿಕಲಾ ಅವರು ಪಕ್ಷದ ಖಜಾಂಚಿ ಸ್ಥಾನದಿಂದ ಓಪಿಎಸ್ ಅವರನ್ನು ಕಿತ್ತುಹಾಕಿದ್ದಾರೆ.

ಇದೇ ವೇಳೆ, ಪನ್ನೀರ್ ಸೆಲ್ವಂ ಅಷ್ಟು ಸುಲಭಕ್ಕೆ ಸಿಎಂ ಕುರ್ಚಿಯನ್ನು ಬಿಟ್ಟುಕೊಡುವ ಸಾಧ್ಯತೆ ಇಲ್ಲ. ತಮಿಳುನಾಡಿನ ರಾಜ್ಯಪಾಲರನ್ನು ಭೇಟಿ ಮಾಡಿರುವ ಪನ್ನೀರ್ ಸೆಲ್ವಂ ತಮ್ಮ ರಾಜೀನಾಮೆಯನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ.

ಮೂಲಗಳ ಪ್ರಕಾರ, ಹೆಚ್ಚಿನ ಎಐಎಡಿಎಂಕೆ ಶಾಸಕರು ಶಶಿಕಲಾ ಅವರ ಬೆನ್ನಿಗೆ ನಿಂತಿದ್ದಾರೆ. ಆದರೆ, ಸುಮಾರು 30 ಶಾಸಕರು ಪನ್ನೀರ್ ಸೆಲ್ವಂ ಪರವಾಗಿದ್ದಾರೆ. ತಮಿಳುನಾಡಿನ ಮೂಲಗಳಿಂದ ತಿಳಿದುಬರುವ ಮುಖ್ಯ ವಿಷಯವೆಂದರೆ, ಎಐಎಡಿಎಂಕೆ ಪಕ್ಷದ ಬಹುತೇಕ ಕಾರ್ಯಕರ್ತರು ಪನ್ನೀರ್ ಸೆಲ್ವಂರನ್ನು ಬೆಂಬಲಿಸುತ್ತಿದ್ದಾರಂತೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಕುತೂಹಲಕರ ರಾಜಕೀಯ ಸಮರ ನಡೆಯುವ ಕುರುಹು ಸಿಕ್ಕಿದೆ.