ಬೆಂಗಳೂರು[ಡಿ.13]: ಮುಂದಿನ 2019ರ ಜ.1ರಿಂದ ನೋಂದಣಿಯಾಗುವ ಎಲ್ಲ ಸಾರ್ವಜನಿಕ ಸೇವೆ (ಪಬ್ಲಿಕ್‌ ಸರ್ವೀಸ್)ವಾಹನಗಳಲ್ಲಿ ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌ (ವಿಎಲ್‌ಟಿ ಅಥವಾ ಜಿಪಿಎಸ್‌) ಮತ್ತು ಪ್ಯಾನಿಕ್‌ ಬಟನ್‌ ಕಡ್ಡಾಯವಾಗಿ ಅಳವಡಿಸಬೇಕು ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಆದೇಶಿಸಿದೆ. ಈ ಕುರಿತು ಎಲ್ಲ ರಾಜ್ಯಗಳ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಾರಿಗೆ ಆಯುಕ್ತರುಗಳಿಗೆ ಸುತ್ತೋಲೆ ಕಳುಹಿಸಿದೆ.

2018 ಡಿ.31ರ ಹಿಂದೆ ನೋಂದಣಿಯಾದ ಪಬ್ಲಿಕ್‌ ಸರ್ವೀಸ್ ವಾಹನಗಳಿಗೆ ವಿಎಲ್‌ಟಿ ಡಿವೈಸ್‌ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಕೆಯಿಂದ ವಿನಾಯಿತಿ ನೀಡಲಾಗಿದೆ. 2019 ಜ.1ರಿಂದ ನೋಂದಣಿಯಾಗುವ ಎಲ್ಲ ಪಬ್ಲಿಕ್‌ ಸವೀರ್‍ಸ್‌ ವಾಹನಗಳಲ್ಲಿ ಈ ಉಪಕರಣಗಳ ಅಳವಡಿಕೆ ಕಡ್ಡಾಯ ಎಂದು ಸೂಚಿಸಲಾಗಿದೆ.

ಸಂಚಾರದ ವೇಳೆ ವಾಹನಗಳ ಮೇಲೆ ನಿಗಾ ಇಡಲು ಆಯಾ ರಾಜ್ಯಗಳು ತಮ್ಮದೇ ಕಂಟ್ರೋಲ್‌ ರೂಂ ಸ್ಥಾಪಿಸಬೇಕು. ವಿಳಂಬವಾದರೆ ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌ ಉತ್ಪಾದಕರ ಸೇವೆ ಪಡೆಯಬಹುದು. 2018 ಡಿ.31ರವರೆಗೆ ನೋಂದಣಿಯಾದ ವಾಹನಗಳಿಗೂ ಈ ಆದೇಶ ಕಡ್ಡಾಯಗೊಳಿಸುವ ಸಂಬಂಧ ಆಯಾ ರಾಜ್ಯ ಸರ್ಕಾರಗಳೇ ನಿರ್ಧಾರ ಕೈಗೊಳ್ಳಬಹುದು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ದೆಹಲಿಯ ನಿರ್ಭಯಾ ಪ್ರಕರಣ ನಂತರ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ 23 ಆಸನಕ್ಕಿಂತ ಅಧಿಕ ಆಸನ ಸಾಮರ್ಥ್ಯ ಇರುವ ಬಸ್‌ಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಕಡ್ಡಾಯಗೊಳಿಸಿತ್ತು. ಮುಂದುವರಿದು, 2016-17ಸಾಲಿನಲ್ಲಿ ಆದೇಶವೊಂದನ್ನು ಹೊರಡಿಸಿದ್ದ ಕೇಂದ್ರ ಸರ್ಕಾರ 2018 ಏ.1ರಿಂದ ದೇಶಾದ್ಯಂತ ಆಟೋ ಹೊರತುಪಡಿಸಿ ಉಳಿದ ಎಲ್ಲ ಪ್ಯಾಸೆಂಜರ್‌ ವಾಹನಗಳಿಗೆ ವೆಹಿಕಲ್‌ ಟ್ರ್ಯಾಕಿಂಗ್‌ ಡಿವೈಸ್‌ (ವಿಟಿಯು ಅಥವಾ ಜಿಪಿಎಸ್‌) ಮತ್ತು ಪ್ಯಾನಿಕ್‌ ಬಟನ್‌ ಕಡ್ಡಾಯಗೊಳಿಸಿತ್ತು. ಆದರೆ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಕಮಾಂಡ್‌ ಮತ್ತು ಕಂಟ್ರೋಲ್‌ ಕೇಂದ್ರಗಳು ಇಲ್ಲದ ಪರಿಣಾಮ ಈ ಆದೇಶ 2019 ಏಪ್ರಿಲ್‌ 1ಕ್ಕೆ ಮುಂದೂಡಲಾಗಿತ್ತು.

ಈ ನಡುವೆ ಕೇಂದ್ರ ಸರ್ಕಾರ, ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌ ಉತ್ಪಾದಕರೊಂದಿಗೆ ನಡೆದ ಸಭೆಯಲ್ಲಿ ರಾಜ್ಯಗಳಲ್ಲಿ ಕಂಟ್ರೋಲ್‌ ರೂಂ ಸ್ಥಾಪನೆಗೆ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.

ಉಪಯೋಗ ಏನು?

ವಾಹನಗಳಲ್ಲಿ ಜಿಪಿಎಸ್‌ ಅಥವಾ ವಿಎಲ್‌ಟಿ ಡಿವೈಸ್‌ ಅಳವಡಿಕೆಯಿಂದ ಆ ವಾಹನದ ಸಂಚಾರದ ಮಾಹಿತಿ, ರಹದಾರಿ ನಿಯಮ ಉಲ್ಲಂಘಿಸುತ್ತಿರುವ ವಾಹನಗಳ ಪತ್ತೆ ಸುಲಭವಾಗಲಿದೆ. ಪ್ಯಾನಿಕ್‌ ಬಟನ್‌ ಅಳವಡಿಕೆಯಿಂದ ಪ್ರಯಾಣಿಕರ ಸುರಕ್ಷತೆ ಸಾಧ್ಯವಾಗುತ್ತದೆ. ಉದಾಹರಣೆಗೆ ಪ್ರಯಾಣದ ವೇಳೆ ಪ್ಯಾನಿಕ್‌ ಬಟನ್‌ ಒತ್ತಿದರೆ, ಯಾವ ವಾಹನದಲ್ಲಿ ಬಟನ್‌ ಒತ್ತಲಾಗಿದೆ. ಆ ವಾಹನ ಯಾವ ಮಾರ್ಗದಲ್ಲಿ ಸಂಚರಿಸುತ್ತಿದೆ ಎಂಬ ವಿವರ ಕಂಟ್ರೋಲ್‌ ರೂಂನಲ್ಲಿ ಲಭ್ಯವಾಗಲಿದೆ. ಈ ವೇಳೆ ತಕ್ಷಣ ನೆರವಿಗೆ ಧಾವಿಸಬಹುದು.